ಕರ್ನಾಟಕ

ಬೇಡಿಕೆ ಈಡೇರಿಕೆಗಾಗಿ ಆರೋಗ್ಯ ಕವಚ ನೌಕರರ ಮುಷ್ಕರ

Pinterest LinkedIn Tumblr

25A5ಬೆಂಗಳೂರು, ಜ.೨೫: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಆರೋಗ್ಯ ಕವಚ (೧೦೮) ಆಂಬ್ಯುಲೆನ್ಸ್ ನೌಕರರು ಇಂದಿನಿಂದ ಮುಷ್ಕರ ಆರಂಭಿಸಿದ್ದಾರೆ. ಆದರೆ ಎಲ್ಲ ನೌಕರರು ಕೆಲಸಕ್ಕೆ ಕಪ್ಪುಪಟ್ಟಿ ಧರಿಸಿ ಹಾಜರಾಗುವ ಮೂಲಕ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಿ, ಜವಾಬ್ದಾರಿ ಮೆರೆದಿದ್ದಾರೆ.
ವೇತನ ಹೆಚ್ಚಳ, ಸೇವಾ ಭದ್ರತೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚಿನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿರುವುದಾಗಿ ಆರೋಗ್ಯ ಕವಚ ೧೦೮ ಆಂಬ್ಯುಲೆನ್ಸ್ ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಪಾಂಡಪ್ಪ ಪರ್ತಿ ತಿಳಿಸಿದ್ದಾರೆ.
ನೌಕರರ ವೇತನದ ಕುರಿತು ಕಾರ್ಮಿಕ ಇಲಾಖೆ ಆಯುಕ್ತರೊಂದಿಗೆ ಈಗಾಗಲೇ ಹಲವು ಬಾರಿ ಮಾತುಕತೆ ನಡೆಸಲಾಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಮುಷ್ಕರಕ್ಕೆ ಇಳಿಬೇಕಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಗೂಳಿಹಟ್ಟಿ ಶೇಖರ್ ತಿಳಿಸಿದ್ದಾರೆ.
೨೦೧೪ರ ಡಿ. ೨೪ರಂದು ಕನಿಷ್ಠ ವೇತನ ನಿಗದಿಪಡಿಸಿ, ಸೇವಾ ಭದ್ರತೆ ಒದಗಿಸುವಂತೆ ಸಲಹೆ ನೀಡಿದ್ದರು. ಆದರೆ, ಈವರೆಗೂ ಇದನ್ನು ಅನುಷ್ಠಾನಗೊಳಿಸಿಲ್ಲ. ಹೋರಾಟ ನಡೆಸಿದಾಗ ಭರವಸೆ ನೀಡುತ್ತಾರೆ ಹೊರತು ಸಮಸ್ಯೆ ಬಗೆಹರಿಸುವುದಿಲ್ಲ ಎಂದು ಪಾಂಡಪ್ಪ ಆರೋಪಿಸಿದ್ದಾರೆ. ಇಲಾಖೆ ಬಾಕಿ ಇರುವ ಎರಡು ತಿಂಗಳ ವೇತನವನ್ನು ಮೇ ೩೦ರೊಳಗೆ ಪಾವತಿಸುವುದಾಗಿ ಭರವಸೆ ನೀಡಿದೆ. ಆದರೆ, ವೇತನ ಹೆಚ್ಚಳ, ಸೇವಾ ಭದ್ರತೆ, ಸಂಘದ ಅಧ್ಯಕ್ಷರಿಗೆ ಕೆಲಸ ನೀಡುವುದು ಮುಂತಾದ ಬೇಡಿಕೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು
ರಾಜ್ಯ ಆರೋಗ್ಯ ಕವಚ(೧೦೮) ನೌಕರರು ಹೆಚ್ಚುವರಿಯಾಗಿ ೪ ಗಂಟೆ ಕೆಲಸ ಮಾಡುತ್ತಿದ್ದು, ಹೆಚ್ಚುವರಿ ಸಮಯಕ್ಕೆ ವೇತನ ನೀಡುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ನೌಕರರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆ ಇತ್ತೀಚೆಗೆ ಹೆಚ್ಚುವರಿ ವೇತನ ನೀಡಲು ೬ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಆದರೆ, ಎಷ್ಟು ಪ್ರಮಾಣದ ಹೆಚ್ಚುವರಿ ವೇತನ ನೀಡುತ್ತಾರೆ ಎಂಬ ಬಗ್ಗೆ ಖಚಿತವಾದ ಮಾಹಿತಿಯಿಲ್ಲ. ಆದೇಶ ಪತ್ರಗಳ ಕುರಿತು ಜಿವಿಕೆ ಸಂಸ್ಥೆಯನ್ನು ಕೇಳಿದರೆ ಯಾವುದೇ ಉತ್ತರ ನೀಡಿಲ್ಲ. ಈ ಕಾರಣದಿಂದ ಜನವರಿ ೨೪ರೊಳಗೆ ಆದೇಶ ಪತ್ರವನ್ನು ನೀಡದಿದ್ದಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬೇಡಿಕೆ ಈಡೇರಿಸಲಾಗಿದೆ
೧೦೮ ನೌಕರರ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಯಾವುದೇ ಕಾರಣಕ್ಕೂ ಆಂಬುಲೆನ್ಸ್ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು. ಆಂಬುಲೆನ್ಸ್‌ಗಳ ಚಾಲಕರು ಕೆಲಸದ ಸಮಯದಲ್ಲಿ ಶಿಸ್ತಿನಿಂದ ವರ್ತಿಸಬೇಕು ಮುಂತಾದ ಷರತ್ತುಗಳನ್ನು ಪೂರೈಸಿದರೆ ಮಾತ್ರ ಅಂತಹವರನ್ನು ಕೆಲಸದಲ್ಲಿ ಮುಂದುವರಿಸಿ ಎಂದು ಜಿವಿಕೆ ಸಂಸ್ಥೆಯವರಿಗೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆಗೆ ಕೆಟ್ಟ ಹೆಸರು ತರುವ ನೌಕರರ ವಿರುದ್ಧ ಕ್ರಮಕೈಗೊಳ್ಳುವಂತೆಯೂ ತಿಳಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

Write A Comment