ಹೌರಾ: ತೃಣಮೂಲ ಕಾಂಗ್ರೆಸ್ ಶಾರದ ಹಗರಣದಲ್ಲಿ ಹಾಗೂ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಮಮತಾ ಬ್ಯಾನರ್ಜಿ ಆಡಳಿತವಧಿಯಲ್ಲಿ ಪಶ್ಚಿಮ ಬಂಗಾಳ ರಾಷ್ಟ್ರ ವಿರೋಧಿಗಳ ಕೇಂದ್ರ ಸ್ಥಾನವಾಗಿದೆ ಎಂದು ಸೋಮವಾರ ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ನಂತರ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಬಹುಕೋಟಿ ಶಾರದ ಹಗರಣ, ಕಳೆದ ವರ್ಷ ಬುರ್ದ್ವಾನ್‌ನ ಖಗ್ರಗಢ ಮತ್ತು ಮಾಲ್ಡಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘ಜಗತ್ತು ಮಮತಾ ಅವರನ್ನು ಬೆಂಗಾಳ ಮುಖ್ಯಮಂತ್ರಿ ಎಂದು ಗುರುತಿಸಿದರೆ, ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವವರು ಮಾತ್ರ ಅವರನ್ನು ಒಬ್ಬ ಪೇಂಟರ್ ಎಂದು ಗುರುತಿಸುತ್ತಾರೆ ಮತ್ತು ಅವರ ಪೇಂಟಿಂಗ್‌ಗಳನ್ನು ಕೋಟ್ಯಾಂತರ ರುಪಾಯಿಗೆ ಖರೀದಿಸುತ್ತಾರೆ’ ಎಂದು ಶಾ ವಾಗ್ದಾಳಿ ನಡೆಸಿದರು.