ಕರ್ನಾಟಕ

“ಗಾಂಧಿ ಕುತಂತ್ರದಿಂದ ಪಟೇಲ್‌ ಪ್ರಧಾನಿ ಹುದ್ದೆಗೆ ಸ್ಪರ್ಧಿಸಲಿಲ್ಲ’

Pinterest LinkedIn Tumblr

gandhiಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಕುತಂತ್ರ ಗೊತ್ತಿದ್ದ ಕಾರಣದಿಂದಲೇ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಪ್ರಧಾನಮಂತ್ರಿ ಹುದ್ದೆಗೆ ಸ್ಪರ್ಧಿಸಲಿಲ್ಲ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ ಹೇಳಿದ್ದಾರೆ. ಭಾರತಕ್ಕೆ ಅಹಿಂಸಾ ತತ್ವದಿಂದ ಸ್ವಾತಂತ್ರÂ ಬಂದಿದ್ದು ಎಂಬುದು ಶುದ್ಧ ಸುಳ್ಳು ಎಂದೂ ಅವರು ಪ್ರತಿಪಾದಿಸಿದ್ದಾರೆ.

ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನವು ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶತಾವಧಾನಿ ಆರ್‌.ಗಣೇಶ್‌ ಅವರ “ಭಾರತೀಯ ಕ್ಷಾತ್ರಪರಂಪರೆ’ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಸ್ವಾತಂತ್ರ್ಯಪೂರ್ವ ಹಾಗೂ ನಂತರದ ಅವಧಿಯಲ್ಲಿ ಕಾಂಗ್ರೆಸ್‌ನಲ್ಲಿ 15 ಪ್ರಮುಖ ಸಮಿತಿಗಳಿದ್ದವು. ಈ ಸಮಿತಿಯ ಅಧ್ಯಕ್ಷರಾಗಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಆಯ್ಕೆಯಾಗಿದ್ದರು. ಗಾಂಧೀಜಿಯವರ ಅಹಿಂಸಾ ತತ್ವದ ವಿರುದ್ಧ ಇದ್ದ ನೇತಾಜಿ ಅವರು ಮರು ಆಯ್ಕೆಯಾಗಬಾರದು ತಡೆಯಲು ಯತ್ನಗಳು ನಡೆದವು. ಆದರೂ ಅವರು ಕಾಂಗ್ರೆಸ್‌ ಸಮಿತಿಗೆ 2ನೇ ಅವಧಿಗೂ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಗಾಂಧೀಜಿ ಅವರು ನೇತಾಜಿ ಅವರ ಶಕ್ತಿ ಕುಂದಿಸಲು ಸಮಿತಿಯಲ್ಲಿನ ಸದಸ್ಯರಿಗೆಲ್ಲಾ ರಾಜೀನಾಮೆ ನೀಡುವಂತೆ ಪುಸಲಾಯಿಸಿದ್ದರು ಎಂದು ಆರೋಪಿಸಿದರು.

ಸ್ವಾತಂತ್ರ್ಯ ಬಂದ ಬಳಿಕ ದೇಶಕ್ಕೆ ಪ್ರಧಾನಮಂತ್ರಿ ಆಯ್ಕೆ ವೇಳೆ ಕಾಂಗ್ರೆಸ್‌ನ 15 ಸಮಿತಿಗಳಲ್ಲಿ 13 ಸಮಿತಿಗಳು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಪ್ರಧಾನ ಮಂತ್ರಿಯಾಗಬೇಕು ಎಂದು ಸೂಚಿಸಿದ್ದವು. ಆದರೆ ಗಾಂಧೀಜಿ ಅವರು ಪಟೇಲ್‌ ಅವರಿಗೆ ನೀವು ಚುನಾವಣೆಗೆ ನಿಲ್ಲಬೇಡಿ, ನೆಹರೂ ಅವರಿಗೆ ನಾನು ಮಾತು ನೀಡಿದ್ದೇನೆ ಎಂದು ಹೇಳಿದರು.

ಆಗ 15 ಸಮಿತಿಗಳಲ್ಲಿ 12 ಸಮಿತಿಗಳು ತಮ್ಮ ಪರ ಇದ್ದರೂ ಗಾಂಧೀಜಿ ಅವರ ಕುತಂತ್ರ ಗೊತ್ತಿದ್ದರಿಂದಲೇ ಸ್ಪರ್ಧೆಯಿಂದ ವಲ್ಲಭಭಾಯಿ ಪಟೇಲ್‌ ಹಿಂದೆ ಸರಿದಿದ್ದರು. ಒಂದು ವೇಳೆ ಸ್ಪರ್ಧಿಸಿದ್ದರೆ ಎಲ್ಲಾ ಸಮಿತಿ ಸದಸ್ಯರಿಂದಲೂ ರಾಜೀನಾಮೆ ಕೊಡಿಸುವ ಮೂಲಕ ಕುತಂತ್ರ ಮೆರೆಯುತ್ತಿದ್ದರು ಎಂಬುದು ಪಟೇಲ್‌ ಅವರಿಗೆ ಗೊತ್ತಿತ್ತು ಎಂದು ಭೈರಪ್ಪ ದೂರಿದರು.

ಈ ವೇಳೆ ಭೈರಪ್ಪ ಅವರ ಮಾತಿಗೆ ವೇದಿಕೆಯಲ್ಲಿದ್ದ ಶತಾವಧಾನಿ ಆರ್‌.ಗಣೇಶ್‌, ಆಗ ಗಾಂಧೀಜಿ ಅವರು ಕಾಂಗ್ರೆಸ್‌ ಸದಸ್ಯರೂ ಕೂಡ ಆಗಿರಲಿಲ್ಲ ಎಂದರು.

ಅಹಿಂಸೆಯಿಂದ ಸ್ವಾತಂತ್ರ್ಯ ಬಂದಿಲ್ಲ:
ದೇಶಕ್ಕೆ ಅಹಿಂಸಾ ತತ್ವದಿಂದ ಸ್ವಾತಂತ್ರ್ಯ ಬಂದಿದ್ದು ಎಂಬುದು ಶುದ್ಧ ಸುಳ್ಳು. ಇದನ್ನು ಸ್ವತಃ ನಮಗೆ ಸ್ವಾತಂತ್ರ್ಯ ಕೊಟ್ಟ ಬ್ರಿಟಿಷರೇ ಹೇಳಿದ್ದಾರೆ. ನೇತಾಜಿ, ಆಜಾದ್‌ ಅಂತಹವರ ಹೋರಾಟಗಳಿಂದ ಹಾಗೂ ಬ್ರಿಟಿಷರ ಪರ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ನಮ್ಮವರಿಗೆ ಜಾಗೃತಿ ಮೂಡಿದ್ದರಿಂದ ಬ್ರಿಟಿಷರಿಗೆ ಹೆದರಿಕೆಯಾಗಿ ಸ್ವಾತಂತ್ರ್ಯ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಮಕ್ಕಳಿಗೆ ಸಂಸ್ಕೃತ ಕಲಿಸಿ:
ಸಂಸ್ಕೃತ ಭಾಷೆಯ ಜ್ಞಾನವಿಲ್ಲದೆ ಯಾವುದೇ ಸಂಶೋಧನೆ ಸಾಧ್ಯವಿಲ್ಲ. ಹೀಗಾಗಿ ಚಿಕ್ಕ ಮಕ್ಕಳಿದ್ದಾಗಲೇ ಸಂಸ್ಕೃತವನ್ನು ತಪ್ಪದೇ ಕಲಿಸಬೇಕು. ಕನ್ನಡ ಮಾಧ್ಯಮದ ಮಾದರಿಯಲ್ಲೇ ಸಂಸ್ಕೃತ ಮಾಧ್ಯಮವನ್ನು ಸೇರಿಸಬೇಕು. ಕಾಲೇಜು ಹಂತದಲ್ಲಿ ಭಾಷೆಗೆ 150 ಅಂಕ ಇಟ್ಟು 100 ಅಂಕ ಕನ್ನಡ, 50 ಅಂಕ ಸಂಸ್ಕೃತ ಭಾಷೆಗೆ ಮೀಸಲಿಡಬೇಕು ಎಂದು ಅಭಿಪ್ರಾಯಪಟ್ಟರು.

ಶತಾವಧಾನಿ ಆರ್‌.ಗಣೇಶ್‌ ಮಾತನಾಡಿ, ಗಾಯ ಆದಾಗ ಯಾವುದೇ ಸಂಕೋಚವೂ ಇಲ್ಲದೆ ಗಾಯದ ಕೀವನ್ನು ತೆಗೆಯಬೇಕು. ಅದೇ ರೀತಿಯಲ್ಲಿ ಯಾವುದೇ ಅಳುಕಿಲ್ಲದೆ ಇತಿಹಾಸದ ಸಂಶೋಧನೆ ಮಾಡಬೇಕು. ಕ್ಷಾತ್ರ ಎಂದರೆ ಕೊಚ್ಚು, ಹೊಡಿ, ಬಡಿ ಎಂದಲ್ಲ. ಕ್ಷಾತ್ರ ಎಂಬುದು ಎಲ್ಲಾ ಒಳ್ಳೆಯ ಗುಣಗಳನ್ನು ಒಳಗೊಂಡಿರುತ್ತದೆ ಎಂದರು.

ಕೆಲವರು ಪ್ರಶಸ್ತಿ ಪಡೆಯುತ್ತಾರೆ. ಬಳಿಕ ವಾಪಸು ನೀಡುತ್ತಾರೆ. ಮತ್ತೆ ಪಡೆಯುತ್ತಾರೆ. ಇದಕ್ಕೆಲ್ಲಾ ಅಸಹಿಷ್ಣುತೆಯ ಕಾರಣ ನೀಡುತ್ತಾರೆ. ಅಸಹಿಷ್ಣುತೆ ಎಂಬುದು ಬರಿ ಸುಳ್ಳು. ಇದು ದುಬುìದ್ಧಿ ಜೀವಿಗಳು ಸೃಷ್ಟಿಸಿರುವ ಕೋಲಾಹಲ. ಸಮಾಜದಲ್ಲಿ ಪಾಪಸು ಕಳ್ಳಿ ತರಹ ಇವರೇ ಕ್ಷೋಭೆ ಸೃಷ್ಟಿಸುತ್ತಾರೆ. ನಂತರ ಇವರೇ ಅಸಹಿಷ್ಣುತೆ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಿವೃತ್ತ ಎಸಿಪಿ ಬಿ.ಬಿ.ಅಶೋಕ್‌ ಕುಮಾರ್‌ ಮಾತನಾಡಿ, ನಾನು ಸ್ಲೇಟ್‌ ಹಿಡಿಸಿದವರೆಲ್ಲಾ ಈಗ ಶಕ್ತಿಸೌಧದಲ್ಲಿದ್ದಾರೆ. ಅವರಿಗೆ ಪೊಲೀಸರೇ ಸೆಲ್ಯೂಟ್‌ ಹೊಡೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವವನು ಸತ್ತರೆ ಅವರ ಹೆಂಡತಿಗೆ ಕೆಲಸ
ಕೊಡುತ್ತಾರೆ. ಬಳಿಕ ಅವಳನ್ನು ನೋಡುವ ದೃಷ್ಟಿ, ನೀಡುವ ಕಿರುಕುಳವೇ ಬೇರೆ. ಒಳ್ಳೆಯ ಪೊಲೀಸರನ್ನು ದುರ್ಬೀನ್‌ ಹಾಕಿ ಹುಡುಕಬೇಕು ಎಂದರು.
-ಉದಯವಾಣಿ

Write A Comment