ಕನಕಪುರ, ಜ.19- ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಸಂಗಮ-ಮೇಕೆದಾಟುವಿಗೆ ರಸ್ತೆ ಹಾಗೂ ಸೇತುವೆ ಸಂಪರ್ಕ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಸಂಗಮದ ಬಳಿ ಸ್ಥಳ ಪರಿಶೀಲನೆ ನಡೆಸಿದರು.
ಕನಕಪುರದಿಂದ ಚಾಮರಾಜನಗರ, ಮಹದೇಶ್ವರಬೆಟ್ಟ, ಹನೂರು, ತಮಿಳುನಾಡು ಭಾಗಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಡಿ.ಪಿ.ಆರ್. ವರದಿ ಮೂಲಕ ಅಧಿಕಾರಿಗಳೊಂದಿಗೆ ಸಚಿವರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಈ ರಸ್ತೆ ನಿರ್ಮಾಣವಾಗುವುದರಿಂದ ಪ್ರಯಾಣಿಕರಿಗೆ 40 ರಿಂದ 50 ಕಿ.ಮೀ. ಹಾಗೂ ಗಂಟೆಗಟ್ಟಲೆ ಸಮಯ ಉಳಿಯುತ್ತದೆ. ಹೊಗೇನಕಲ್‌ಗೂ ಸಹ ಈ ರಸ್ತೆ ಸಂಪರ್ಕ ಸೇರ್ಪಡೆಯಾಗುತ್ತದೆ ಎಂದು ಹೇಳಿದರು.
ಕನಕಪುರ ಪಟ್ಟಣದಲ್ಲಿ ರಾಮನಗರ ರಸ್ತೆ 2.5 ಕಿ.ಮೀ. ಉದ್ದದ ಅಗಲೀಕರಣಕ್ಕಾಗಿ ಸಚಿವರ ಅನುದಾನದ ಹಣ ನೀಡುವಂತೆ ಮನವಿ ಮಾಡಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಪಿಡಬ್ಲ್ಯುಡಿ ಇಲಾಖೆಯ ಹಿರಿಯ ಅಧಿಕಾರಿಗಳು, ಪ್ರಾಧಿಕಾರದ ಅಧ್ಯಕ್ಷ ಎಂ.ಡಿ.ವಿಜಯದೇವ್, ಮುಖಂಡರಾದ ಗಡ್ಡಶಿವಕುಮಾರ್, ಸಾತನೂರು ಮಾಜಿ ಅಧ್ಯಕ್ಷ ನಾಗರಾಜ್, ಏಳಗಳ್ಳಿ ರವಿ, ನಗರಸಭಾಧ್ಯಕ್ಷ ರಾಮಚಂದ್ರು, ನಗರಸಭಾ ಆಯುಕ್ತ ಡಿ.ರಮೇಶ್ ಸೇರಿದಂತೆ ಅನೇಕರು ಹಾಜರಿದ್ದರು.