ಮಂಗಳೂರು : ಬಂಟ್ವಾಳ ಸಮೀಪದ ಜಕ್ರಿಬೆಟ್ಟು, ಮಣಿಹಳ್ಳ ಎಂಬಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹರೀಶ್ ಪೂಜಾರಿ ಕೊಲೆ ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಅಹಮ್ಮದಾಬಾದ್‌ನಲ್ಲಿ ಬಂಧಿಸಿದ್ದಾರೆ.
ಹರೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ರವಿರಾಜ್ ಎಂಬಾತನೇ ಬಂಧಿತ ಆರೋಪಿ. ಆರೋಪಿಯನ್ನು ಮಂಗಳವಾರ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ
ಟಿಪ್ಪು ಸುಲ್ತಾನ್ ದಿನಾಚರಣೆ ವಿಚಾರವಾಗಿ ಘರ್ಷಣೆ ನಡೆದ ಸಂದರ್ಭ ಯಾವೂದೇ ಪ್ರಕರಣಕ್ಕೆ ಸಂಬಂಧಿಸದ ಅಮಾಯಕ ಹರೀಶ್ ಪೂಜಾರಿ ನ. 12ರಂದು ಜಕ್ರಿಬೆಟ್ಟು, ಮಣಿಹಳ್ಳ ಎಂಬಲ್ಲಿ ತನ್ನ ಸ್ನೇಹಿತ ಹಾರಿಸ್‍ನೊಂದಿಗೆ ಅಂಗಡಿಯೊಂದರಲ್ಲಿ ತಂಪು ಪಾನಿಯಾ ಕುಡಿದು ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಓಮ್ನಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು .
ಈ ಕೊಲೆ ಪ್ರಕರಣದಲ್ಲಿ ಸ್ಥಳೀಯ ನಾಲ್ವರು ಭಾಗಿಯಾಗಿದ್ದು, ಪಲ್ಲಮಜಲು ನಿವಾಸಿ ಭುವಿತ್ ಶೆಟ್ಟಿ ಸಹಿತ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಸಂದರ್ಭ ತಲೆಮರೆಸಿಕೊಂಡಿದ್ದ ರವಿರಾಜ್ ಎಂಬಾತನ ಬಂಧನಕ್ಕೆ ನಾಗರಿಕ ಸಂಘಟನೆಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು. ಸಾರ್ವಜನಿಕರ ಒತ್ತಡದಿಂದಾಗಿ ಕಾರ್ಯಾಚರಣೆಗಿಳಿದ ಪೊಲೀಸರು ಗುಜರಾತ್‌ನ ಅಹ್ಮದಾಬಾದ್ ಜಿಲ್ಲೆಯ ವಸ್ತ್ರಾಪುರ ಎಂಬಲ್ಲಿ ಅತನ ಚಿಕ್ಕಪ್ಪ ರಮೇಶ್ ಎಂಬುವರ ಮನೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಎಸ್ಪಿ ಡಾ. ಶರಣಪ್ಪ, ಎಎಸ್ಪಿ ರಾಹುಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸೆಪೆಕ್ಟರ್ ಕೆ.ಯು. ಬೆಳ್ಳಿಯಪ್ಪ ನೇತ್ರತ್ವದಲ್ಲಿ ಗ್ರಾಮಾಂತರ ಪೋಲೀಸ್ ಠಾಣಾಧಿಕಾರಿ, ಎಎಸ್‍ಐ ರಮೇಶ್, ಸಿಬ್ಬಂದಿಗಳಾದ ಪಿ.ಸಿ. ಜಗದೀಶ ಮತ್ತು ರಾಜಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.