ದಾವಣಗೆರೆ: ಕಾಂಗ್ರೆಸ್ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಸಾಮೂಹಿಕ ನಾಯಕತ್ವ ಹೊಂದಿದ್ದು, ಎಲ್ಲರೂ ಶ್ರಮ ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪಂಚಾಯತ್ ರಾಜ್ಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಒತ್ತು ಕೊಟ್ಟಿದೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಿದೆ. 73ನೇ ತಿದ್ದುಪಡಿ, ಶೇ. 50 ರಷ್ಟು ಮಹಿಳಾ ಮೀಸಲಾತಿ ಒದಗಿಸಿರುವುದು ಮತ್ತು ರಮೇಶ್ ಕುಮಾರ್ ಆಯೋಗದ ವರದಿಯ ಕೆಲ ಅಂಶಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಗೆಲುವಿಗೆ ಪೂರಕವಾಗಿರಲಿದೆ. ಹಾಗಾಗಿ ಕಾಂಗ್ರೆಸ್ 20 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತ ಪಡಿಸಿದರು.
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಖಾಸಗಿ ಕಂಪನಿಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಹೆಲಿಪ್ಯಾಡ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ವಿಧಾನಸಭೆ ಉಪಚುನಾವಣೆ ಗೊಂದಲ ಪರಿಹರಿಸಲು ವೀಕ್ಷಕರನ್ನು ನೇಮಕ ಮಾಡಲಾಗಿದೆ. ಇಂದು ಅಥವಾ ನಾಳೆ ವೀಕ್ಷಕರಿಂದ ವರದಿ ಬಂದ ನಂತರ ಅರ್ಹ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ. ಹೆಬ್ಬಾಳ ಕ್ಷೇತ್ರದಲ್ಲಿ ಟಕೆಟ್ ಆಕಾಂಕ್ಷೆಗಳ ಸಂಖ್ಯೆ ಹೆಚ್ಚಿದೆ. ಭೈರತಿ ಸುರೇಶ್ ಕಾಂಗ್ರೆಸ್ನ ಕೋರ್ ಮೆಂಬರ್. ಅವರನ್ನು ನಾನೇ ಪಕ್ಷಕ್ಕೆ ಬರಮಾಡಿಕೊಂಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಹೇಳಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.