ಬೆಂಗಳೂರು,ಜ.19-ನಿನ್ನೆಯಿಂದ ಆರಂಭಗೊಂಡಿರುವ ಅಕಾಲಿಕ ಮಳೆ ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮುಂದುವರೆಯಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಬೂದಗಾವಿ ಗ್ರಾಮ ಪಂಚಾಯ್ತಿಯಲ್ಲಿ ಅತಿ ಹೆಚ್ಚು 20.10 ಮಿ.ಮೀ. ಮಳೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಬಳ್ಳಾರಿ, ಚಿಕ್ಕಬಳ್ಳಾಪುರ, ಕೊಪ್ಪಳ, ಶಿವಮೊಗ್ಗ, ದಕ್ಷಿಣ ಕನ್ನಡ, ಚಾಮರಾಜ ನಗರ, ರಾಮನಗರ, ಕಲಬುರಗಿ, ಹಾಸನ, ಮಂಡ್ಯ, ಬೆಳಗಾವಿ, ಬೀದರ್, ಹಾವೇರಿ, ರಾಯಚೂರು, ಉತ್ತರ ಕನ್ನಡ, ತುಮಕೂರು, ಬಾಗಲಕೋಟೆ, ಗದಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ.
ಇದರಿಂದ ಕನಿಷ್ಠ ತಾಪಮಾನ ಹೆಚ್ಚಳವಾಗಿದೆಯಾದರೂ ಹಗಲಿನಲ್ಲೂ ಚಳಿ ಹೆಚ್ಚಾದಂತೆ ಕಂಡುಬರುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು.
ವಾತಾವರಣದಲ್ಲಿ ಉಂಟಾಗಿರುವ ಸುಳಿಗಾಳಿಯಿಂದ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಸುಳಿಗಾಳಿಯ ಪರಿಣಾಮದಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಜನವರಿಯಲ್ಲಿ ಚಳಿ ಹೆಚ್ಚಾಗಿದ್ದು ಮಳೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ಜನವರಿ ತಿಂಗಳ ರಾಜ್ಯದ ಸರಾಸರಿ ವಾಡಿಕೆ ಮಳೆ ಪ್ರಮಾಣ ಕೇವಲ ಒಂದು ಮಿ.ಮೀ. ಮಾತ್ರ. ನಿನ್ನೆ ರಾತ್ರಿ ಬೆಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ ಎಂದು ಶ್ರೀನಿವಾಸರೆಡ್ಡಿ ಹೇಳಿದರು.
ಒಕ್ಕಣೆಗೆ ಅಡ್ಡಿ: ಇದ್ದಕ್ಕಿದ್ದಂತೆ ಬಿದ್ದ ಮಳೆಯಿಂದಾಗಿ ಮುಂಗಾರು ಹಂಗಾಮಿನ ರಾಗಿ, ಜೋಳ, ಭತ್ತ, ತೊಗರಿ, ಶೇಂಗಾ ಮೊದಲಾದ ಬೆಳೆಗಳ ಒಕ್ಕಣೆಗೆ ಅಡ್ಡಿಯಾಗಿದೆ. ಬಹುತೇಕ ರೈತರು ಬೆಳೆಗಳನ್ನು ಒಕ್ಕಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ಫಸಲು ಹಾನಿಗೀಡಾಗಿದ್ದು, ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಫಸಲಿನ ಜತೆಗೆ ಜಾನುವಾರಗಳ ಮೇವು ಕೂಡ ಮಳೆಯ ನೀರಿನಲ್ಲಿ ಒದ್ದೆಯಾಗಿ ಹಾನಿಯಾಗುತ್ತಿದೆ. ಮಳೆ ಬರುವ ಸಂಭವವಿರುವುದರಿಂದ ಮುಂದಿನ ಮೂರು ನಾಲ್ಕು ದಿನಗಳ ಕಾಲ ರೈತರು ತಾವು ಬೆಳೆದ ಬೆಳೆಯ ಒಕ್ಕಣೆ ಮಾಡದಿರುವುದು ಒಳ್ಳೆಯದು ಎಂದು ಹವಾಮಾನ ತಜ್ಞರು ಸಲಹೆ ಮಾಡಿದ್ದಾರೆ.
ಕರ್ನಾಟಕ