ಬೆಳಗಾವಿ/ಮಂಡ್ಯ: ರಾಜ್ಯದಲ್ಲಿ ಗಡಿ ಕ್ಯಾತೆ ಮತ್ತೆ ಆರಂಭವಾಗಿದೆ. ಈ ಬಾರಿ ಶುರು ಮಾಡಿದ್ದು ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್! ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ನಮ್ಮದೇ. ಕಟ್ಟ ಕಡೆಯ ಮರಾಠಿ ಭಾಷಿಕ ಜೀವಂತವಾಗಿರುವವರೆಗೆ ಬೆಳಗಾವಿ ಗಡಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಇದಕ್ಕೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅದು ಮಹಾಜನ್ ವರದಿಯಲ್ಲೇ ನಿರ್ಧಾರವಾಗಿದೆ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಹಾ ಸರ್ಕಾರದ ಬೆಂಬಲವಿದೆ: “ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದ್ದು, ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿರುವ ಮರಾಠಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ಮರಾಠಿಗರು ನಡೆಸುತ್ತಿರುವ ಹೋರಾಟಕ್ಕೆ ಮಹಾರಾಷ್ಟ್ರ ಸರ್ಕಾರ ಹಾಗೂ ಜನತೆಯ ಬೆಂಬಲವಿದೆ” ಎಂದು ಮಹಾರಾಷ್ಟ್ರದ ಪುಣೆಯ ಪಿಂಪ್ರಿಯ ಚಿಂಚವಾಡದಲ್ಲಿ ಭಾನುವಾರ ನಡೆದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಫಡ್ನವೀಸ್ ಹೇಳಿದ್ದಾರೆ.
ಬೆಳಗಾವಿ ಮರಾಠಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿ ದೆ. ನಾವೆಲ್ಲರೂ ಮರಾಠಿಗರ ಸೇವಕರು. ಮರಾಠಿಗರ ಮೇಲಿನ ಅನ್ಯಾಯ, ದೌರ್ಜನ್ಯವನ್ನು ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಬಾಲ್ಕಿ ಮತ್ತಿತರ ಗಡಿಭಾ ದಲ್ಲಿರುವ ಮರಾಠಿ ಬಹುಭಾಷಿಕ ಪ್ರದೇಶಗಳೆಲ್ಲವೂ ಮಹಾರಾಷ್ಟ್ರದ ಅಂಗ. ಮಹಾರಾಷ್ಟ್ರ
ಸರ್ಕಾರ ಗಡಿ ಮರಾಠಿಗರ ಬೆಂಗಾವಲಿಗಿದೆ. ಗಡಿಭಾಗದಲ್ಲಿ ಒಬ್ಬ ಮರಾಠಿಗನಿದ್ದರೂ ಹೋರಾಟ ನಿಲ್ಲಲ್ಲ ಎಂದರು.
ಕೇಂದ್ರ ಮಾಜಿ ಸಚಿವ ಶರದ್ ಪವಾರ್ ಮಾತನಾಡಿ, ಗಡಿ ಪ್ರದೇಶ ಕರ್ನಾಟಕಕ್ಕೆ ಸೇರಿದ್ದರೂ ಈ ಪ್ರದೇಶದಲ್ಲಿರುವ ಮರಾಠಿ ಭಾಷಿಕರ ಮನಸ್ಥಿತಿ ಮರಾಠಿ ಹಾಗೂ ಮಹಾರಾಷ್ಟ್ರದ್ದೇ ಆಗಿದೆ. ಬೆಳಗಾವಿ ಗಡಿ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ವಿಧಾನಸಭೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಗಳೇ ಆಯ್ಕೆಯಾಗುತ್ತಾ ಬಂದಿದ್ದಾರೆ. ಆದರೆ, ಬಹುತೇಕ ಗಡಿ ಪ್ರದೇಶ ಕರ್ನಾಟಕಕ್ಕೆ ಸೇರಿದೆ ಎಂದರು.
ಸಿಎಂ ತಿರುಗೇಟು: “ಮಹಾರಾಷ್ಟ್ರದವರು ರಾಜಕೀಯ ಕಾರಣಕ್ಕಾಗಿ ಪದೇ ಪದೆ ಬೆಳಗಾವಿ ವಿಚಾರವಾಗಿ ಖ್ಯಾತೆ ತೆಗೆಯುತ್ತಿದ್ದಾರೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ.
ಅದು ಮಹಾಜನ್ ವರದಿಯಲ್ಲಿ ನಿರ್ಧಾರವಾಗಿದೆ” ಎಂದು ಮುಖ್ಯ-ಮಂತ್ರಿ ಸಿದ್ದರಾಮಯ್ಯ ಸೋಮವಾರ ಮಂಡ್ಯದಲ್ಲಿ ಕಿಡಿಕಾರಿದ್ದಾರೆ. ಜತೆಗೆ, ಬೆಳಗಾವಿ ವಿಷಯ ಈಗಾಗಲೇ ಇತ್ಯರ್ಥವಾಗಿದೆ. ಮಹಾರಾಷ್ಟ್ರದವರು ಎಷ್ಟೇ ರಾಜಕೀಯ ಮಾಡಿದರೂ ಬೆಳಗಾವಿ ನಮ್ಮದೇ ಎಂದು ಹೇಳಿದ್ದಾರೆ.
ಮರಾಠಿ ಟೈಗರ್ಸ್ ಬಿಡುಗಡೆ ಖಚಿತ: ಕೊಲ್ಲೆ
ವಿವಾದಾತ್ಮಕ ಮರಾಠಿ ಟೈಗರ್ಸ್ ಮರಾಠಿ ಚಲನಚಿತ್ರವನ್ನು ಫೆ.5ರಂದು ಮಹಾರಾಷ್ಟ್ರ ಸೇರಿದಂತೆ ಗಡಿ ಪ್ರದೇಶದಲ್ಲಿ ಬಿಡುಗಡೆ ಮಾಡಿಯೇ ತೀರುತ್ತೇವೆ ಎಂದು ಚಿತ್ರನಟ
ಅಮೋಲ ಕೊಲ್ಲೆ ಹೇಳಿದ್ದಾರೆ. ವಿವಾದಾತ್ಮಕ ಮರಾಠಿ ಟೈಗರ್ಸ್ ಚಿತ್ರ ನಿಷೇಧಿಸುವಂತೆ ಕನ್ನಡ ಸಂಘಟನೆಗಳು ಆಗ್ರಹಿಸುತ್ತಿರುವ ಬೆನ್ನಲ್ಲೇ, ಬೆಳಗಾವಿಗೆ ಪ್ರಚಾರಕ್ಕೆ ಸೋಮವಾರ ಆಗಮಿಸಿದ ಚಿತ್ರ ತಂಡದ ಸದಸ್ಯರು ಈ ಹೇಳಿಕೆ ನೀಡಿದ್ದಾರೆ. ಗಡಿಭಾಗದಲ್ಲಿರುವ ಮರಾಠಿ ಭಾಷಿಕರು ಕಳೆದ 60 ವರ್ಷಗಳಿಂದ ಅನ್ಯಾಯ, ದೌರ್ಜನ್ಯ ಎದುರಿಸುತ್ತಿದ್ದಾರೆ. ಸೆನ್ಸಾರ್ ಮಂಡಳಿ ಅನುಮತಿ ನೀಡಿದೆ ಎಂದಿದ್ದಾರೆ.
ಇಂದು ಮಹದಾಯಿ ಸಭೆ
ಮಹದಾಯಿ ಜಲ ವಿವಾದ ಇತ್ಯರ್ಥ ಸಂಬಂಧ ಮಂಗಳವಾರ ಸಿಂಧದುರ್ಗ ಜಿಲ್ಲೆಯ ಕನಕಹೊಳಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಜಲ ತಜ್ಞ ಡಾ. ರಾಜೇಂದ್ರ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಜಲ ತಜ್ಞರು, ರೈತ ಧುರೀಣರು, ಪರಿಸರವಾದಿಗಳು, ಜನಪ್ರತಿನಿಧಿಗಳು, ಮಠಾಧೀಶರು ಪಾಲ್ಗೊಳ್ಳಲಿದ್ದು, ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಸಭೆಗೆ ಬರಲು ಒಪ್ಪಿಲ್ಲ, ಆದರೆ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಗೋವಾ ಸಿಎಂ ಲಕ್ಷ್ಮೀಕಾಂತ ಪಾರ್ಸೇಕರ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ. ಮಂಗಳವಾರ ಮಧ್ಯಾಹ್ನ 11.30 ಕ್ಕೆ ಚಿಂತನಾ ಸಭೆ ಹಾಗೂ ಸೌಹಾರ್ದ ಸಭೆ ನಡೆಯಲಿದೆ.
ಯಾರು ಏನೇ ಹೇಳಿಕೆ ಕೊಡಲಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಅದೇ ಅಂತಿಮ. ರಾಜಕಾರಣಕ್ಕಾಗಿ ಹೇಳಿಕೆ ಕೊಡುವುದು ಸರಿಯಲ್ಲ. ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯಲ್ಲ. ಅಶಾಂತಿ ಉಂಟಾಗುತ್ತದೆ. ನಾವು ಯಾರಿಗೂ ದೂರು ಕೊಡುವ ಪ್ರಶ್ನೆಯೇ ಇಲ್ಲ. ಬೆಳಗಾವಿ ನಮ್ಮದು.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಬೆಳಗಾವಿ ಮರಾಠಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ನಾವೆಲ್ಲರೂ ಮರಾಠಿಗರ ಸೇವಕರು. ಗಡಿಭಾಗದಲ್ಲಿ ಒಬ್ಬ ಮರಾಠಿ ಮನುಷ್ಯನಿದ್ದರೂ ಗಡಿ ಹೋರಾಟ ನಿಲ್ಲುವುದಿಲ್ಲ