ಕರ್ನಾಟಕ

ನೆರೆ ರಾಜ್ಯಗಳಿಂದ ಹರಿದು ಬರುವ ಅಕ್ರಮ ಮದ್ಯನಿಲ್ಲಿಸಿ : ಸಿಎಂ ತಾಕೀತು

Pinterest LinkedIn Tumblr

cmಬೆಂಗಳೂರು, ಜ.14-  ನೆರೆಯ ರಾಜ್ಯಗಳಿಂದ ಅಕ್ರಮವಾಗಿ ನುಸುಳಿ ರಾಜ್ಯದಲ್ಲಿ ಮಾರಾಟವಾಗುತ್ತಿರುವ ಮದ್ಯವನ್ನು ತಡೆಗಟ್ಟುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.  ಇಂದು ವಿಧಾನಸೌಧದಲ್ಲಿ ಅಬಕಾರಿ, ಕಂದಾಯ, ವಾಣಿಜ್ಯ ತೆರಿಗೆ, ಸಾರಿಗೆ, ಮುದ್ರಾಂಕ ಶುಲ್ಕ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ದಿನಪೂರ್ತಿ ಸಮಾಲೋಚನೆ ನಡೆಸಿದ ಸಿಎಂ, ಆರಂಭದಲ್ಲಿ ಅಬಕಾರಿ ಇಲಾಖೆಯ ತೆರಿಗೆ ಸಂಗ್ರಹದ ಬಗ್ಗೆ ಚರ್ಚೆ ನಡೆಸಿದರು. ಸುಮಾರು 15,200 ಕೋಟಿ ರೂ.ಗಳ ತೆರಿಗೆ ಸಂಗ್ರಹಕ್ಕೆ 2015-16ನೇ ಸಾಲಿನಲ್ಲಿ ಗುರಿ ನಿಗದಿಪಡಿಸಲಾಗಿದೆ. ಈವರೆಗೂ ಸುಮಾರು 11 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಗೊಂಡು ಶೇ.73ರಷ್ಟು ಪ್ರಗತಿಯಾಗಿದೆ.

ಜೂನ್ ವೇಳೆಗೆ  ಗುರಿ ಮೀರಿ ತೆರಿಗೆ ವಸೂಲಿ ಮಾಡಬೇಕೆಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಆಂಧ್ರಪ್ರದೇಶದಲ್ಲಿ ತಯಾರಾಗುವ 999 ಎಂಬ ಮದ್ಯ ಕರ್ನಾಟಕದ ಮದ್ಯಕ್ಕಿಂತಲೂ 5ರೂ. ಕಡಿಮೆ ದರದಲ್ಲಿ ಸಿಗುತ್ತಿದೆ. ಹೀಗಾಗಿ ಗಡಿ ಭಾಗದ ಜಿಲ್ಲೆಗಳಲ್ಲಿ ಅದರ ವಹಿವಾಟೆ ಜೋರಾಗಿದೆ. ರಾಜ್ಯದಲ್ಲಿ ತಯಾರಾಗುವ ಮದ್ಯ ಮಾರಾಟ ಕುಂಠಿತವಾಗಿ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಆಯಾ ರಾಜ್ಯಗಳಲ್ಲಿ ತಯಾರಾಗುವ ಮದ್ಯಗಳು ಸ್ಥಳೀಯವಾಗಿಯೇ ಮಾರಾಟವಾಗಬೇಕೆಂಬ ನಿಯಮಗಳಿವೆ. ಆದರೂ, ನಮ್ಮ ರಾಜ್ಯಕ್ಕೆ ನುಸುಳಿ ಬರುತ್ತಿರುವುದು ಸರಿಯಲ್ಲ. ಅಬಕಾರಿ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕಲಸ ಮಾಡಬೇಕು. ನೆರೆಯ ರಾಜ್ಯಗಳಲ್ಲಿ ತಯಾರಾಗುವ ಅಗ್ಗದ ದರದ ಮದ್ಯ ಕರ್ನಾಟಕದಲ್ಲಿ ಮಾರಾಟವಾಗಲು ಅವಕಾಶ ನೀಡಬಾರದು ಎಂದು ಸೂಚಿಸಿದರು.

2011ರ ಜನಸಂಖ್ಯೆಗನುಗುಣವಾಗಿ 1560 ಹೊಸ ಮದ್ಯದ ಅಂಗಡಿ ಲೈಸೆನ್ಸ್ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಜನರಿಗೆ ಸುಲಭವಾಗಿ ಮದ್ಯ ಸಿಗಲಿದೆ. ಅಕ್ರಮ ಮಾರಾಟಕ್ಕೆ ಕಡಿವಾಣಬೀಳಲಿದೆ. ಮುಂದಿನ ವರ್ಷದಿಂದ ತೆರಿಗೆ ಸಂಗ್ರಹದ ಗಾತ್ರವನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯವಿದೆ ಎಂದು ಹೇಳಿರುವ ಮುಖ್ಯಮಂತ್ರಿಯವರು, ಈ ಬಗ್ಗೆ ಅಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ವ್ಯಾಟ್ ತೆರಿಗೆ ವಸೂಲಿಯ ಪ್ರಗತಿಯ ಬಗ್ಗೆಯೂ ಮುಖ್ಯಮಂತ್ರಿಯವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

Write A Comment