ಬೆಂಗಳೂರು: ಹೊಸ ವರ್ಷದಿಂದ ರಾಜ್ಯದಲ್ಲಿ ಸುಮಾರು ನಾಲ್ಕರಿಂದ ಐದು ಲಕ್ಷ ಜನ ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿಯಿಂದ ವಂಚಿತರಾಗಲಿದ್ದಾರೆ!
– ಕೇಂದ್ರ ಸರ್ಕಾರ ಹೊರಡಿಸಿರುವ ನೂತನ ಆದೇಶದ ಎಫೆಕ್ಟ್ ಇದು.
ಕೇಂದ್ರ ಸರ್ಕಾರ “ಹತ್ತು ಲಕ್ಷ ರೂ.ಗಿಂತ ಹೆಚ್ಚಿನ ತೆರಿಗೆ ವ್ಯಾಪ್ತಿಗೆ ಒಳಪಡುವ ಆದಾಯ ಹೊಂದಿರುವವರಿಗೆ’ 2016ರ ಜನವರಿಯಿಂದ ಎಲ್‌ಪಿಜಿ ಸಬ್ಸಿಡಿ ನೀಡದಿರಲು ತೀರ್ಮಾನಿಸಿದೆ. ಅದರಂತೆ ಹತ್ತು ಲಕ್ಷ ತೆರಿಗೆಯುಕ್ತ ಆದಾಯ ಹೊಂದಿರುವವರ ಸಂಖ್ಯೆ ರಾಜ್ಯದಲ್ಲಿ ಸರಿಸುಮಾರು ನಾಲ್ಕರಿಂದ ಐದು ಲಕ್ಷ ಮಂದಿ ಇದ್ದಾರೆ ಎಂದು ಆದಾಯ ಇಲಾಖೆ ಅಂದಾಜಿಸಿದೆ. ಹಾಗಾಗಿ, ಅವರೆಲ್ಲರೂ ಈ ಹೊಸ ನಿಯಮದ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದೆ.
ಅದರಲ್ಲೂ ರಾಜ್ಯದಲ್ಲಿ ಎಲ್‌ಪಿಜಿ ಸಬ್ಸಿಡಿಯಿಂದ ವಂಚಿತರಾಗುವ ಶ್ರೀಮಂತರ ಪೈಕಿ ಶೇ. 80ರಷ್ಟು ರಾಜಧಾನಿ ಬೆಂಗಳೂರಿನಲ್ಲೇ ಇದ್ದಾರೆ. ಆದ್ದರಿಂದ ಸರ್ಕಾರದ ಸಬ್ಸಿಡಿ ಕಡಿತದ ಬಿಸಿ ಹೆಚ್ಚಾಗಿ ಬೆಂಗಳೂರಿನ ಜನರಿಗೇ ತಟ್ಟಲಿದೆ ಎಂದೂ ಆದಾಯ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಸಾಫ್ಟ್ವೇರ್ ಎಂಜಿನಿಯರ್‌ಗಳು, ವಿಜ್ಞಾನಿಗಳು, ಬೆಂಗಳೂರಿನ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿಗಳು, ಬ್ಯಾಂಕಿನ ಹಿರಿಯ ಅಧಿಕಾರಿಗಳು, ಯುಜಿಸಿ ವೇತನ ಪಡೆಯುತ್ತಿರುವ ಹಿರಿಯ ಪ್ರಾಧ್ಯಾಪಕರು ಸೇರಿದಂತೆ ಮತ್ತಿತರರಿಗೆ ಸಬ್ಸಿಡಿ ಕಡಿತದ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಭಾರತೀಯ ತೈಲ ನಿಗಮ (ಐಒಸಿ)ದ 45 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿಸಿ)ನ 27 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ (ಬಿಪಿಸಿ)ನ 23 ಲಕ್ಷ ಸೇರಿ ಸುಮಾರು 95 ಲಕ್ಷ ಎಲ್‌ಪಿಜಿ ಗ್ರಾಹಕರಿದ್ದಾರೆ.
ಆದರೆ, ಇದುವರೆಗೆ ಸಬ್ಸಿಡಿ ಕಡಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಯಾವುದೇ ಲಿಖೀತ ಆದೇಶದ ಪ್ರತಿ ಕೈಸೇರಿಲ್ಲ. ಅದರಲ್ಲಿನ ಮಾರ್ಗಸೂಚಿಗಳನ್ನು ಪರಿಶೀಲಿಸಿ, ತೆರಿಗೆ ಪಾವತಿದಾರರ ಅಂಕಿ-ಅಂಶ ಕಲೆಹಾಕಿದ ನಂತರವಷ್ಟೇ ಎಲ್‌ಪಿಜಿ ಸಬ್ಸಿಡಿಯಿಂದ ಹೊರಗುಳಿಯುವವರ ಸಂಖ್ಯೆ ಎಷ್ಟು ಎಂಬುದು ಗೊತ್ತಾಗಲಿದೆ ಎಂದು ವಿವಿಧ ತೈಲ ಕಂಪೆನಿಗಳ ಕರ್ನಾಟಕ ವೃತ್ತದ ಡಿಜಿಎಂಗಳು ಸ್ಪಷ್ಟಪಡಿಸಿದ್ದಾರೆ.
14 ಲಕ್ಷ ರೂ. ಆದಾಯ ಇದ್ದವರಿಗೆ ಸಬ್ಸಿಡಿ ಇಲ್ಲ
ವಾರ್ಷಿಕ ಅಂದಾಜು 14 ಲಕ್ಷ ರೂ. ಆದಾಯ ಹೊಂದಿದವರು ಎಲ್‌ಪಿಜಿ ಸಬ್ಸಿಡಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಹೇಗೆಂದರೆ, ಪ್ರಸ್ತುತ 2.50 ಲಕ್ಷ ರೂ. ತೆರಿಗೆ ವಿನಾಯಿತಿ ಮಿತಿ ಇದೆ. ಇದಲ್ಲದೆ, 1.70 ಲಕ್ಷ ರೂ.ವರೆಗೆ ಮನೆ ಸಾಲ, ವೈದ್ಯಕೀಯ ವೆಚ್ಚ ಮತ್ತಿತರ ಅಂಶಗಳು ಸೇರಿರುತ್ತವೆ. ಇದನ್ನು ಹೊರತುಪಡಿಸಿ, 10 ಲಕ್ಷ ಆದಾಯ ಹೊಂದಿದವರಿಗೆ ಅನ್ವಯ ಆಗಲಿದೆ.
-ಉದಯವಾಣಿ