ಬೆಂಗಳೂರು, ಡಿ.29-ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮೀಸಲು ಸಶಸ್ತ್ರಪಡೆಯ ಡಿಸಿಪಿ ಅಭಿಷೇಕ್ ಗೋಯಲ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಹೈದರಾಬಾದ್ನ ಪೊಲೀಸ್ ಅಕಾಡೆಮಿ ಪತ್ರ ಬರೆದಿದೆ. ಈ ಪತ್ರದ ಆಧಾರದ ಹಿನ್ನೆಲೆಯಲ್ಲಿ ಅಭಿಷೇಕ್ ಗೋಯಲ್ ವಿರುದ್ಧ ಇಲಾಖಾ ತನಿಖೆ ನಡೆಸಿ ನಿಯಮಗಳನ್ನು ಉಲ್ಲಂಘಿಸಿರುವುದು ರುಜುವಾತಾದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ತಿಳಿಸಿದ್ದಾರೆ. ಈಗಾಗಲೇ ಗೋಯಲ್ ವಿರುದ್ಧ ತನಿಖೆ ನಡೆಸಿ ವರದಿ ನೀಡಬೇಕೆಂದು ಹಿರಿಯ ಅಧಿಕಾರಿಗಳಿಗೆ ಡಿಜಿಪಿ ಓಂಪ್ರಕಾಶ್ ಸೂಚನೆ ಕೊಟ್ಟಿದ್ದಾರೆ.
ಕಳೆದ ನ.29ರಿಂದ ಡಿ.4ರವರೆಗೆ ಅಭಿಷೇಕ್ ಗೋಯಲ್ ಅವರನ್ನು ಹೈದರಾಬಾದ್ನಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಅಕಾಡೆಮಿ ವತಿಯಿಂದ ಆಸ್ಟ್ರೇಲಿಯಾದ ಮೆಲ್ಬೋರ್ನ್ಗೆ ಕಳುಹಿಸಿಕೊಡಲಾಗಿತ್ತು.
ಪೊಲೀಸ್ ಇಲಾಖೆಯ ನಿಯಮದ ಪ್ರಕಾರ ಅಕಾಡೆಮಿಯಿಂದ ತೆರಳುವವರು ಒಬ್ಬರೇ ಹೋಗಬೇಕೇ ಹೊರತು ತಮ್ಮ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗುವಂತಿಲ್ಲ. ಆದರೆ, ಗೋಯಲ್ ಆಸ್ಟ್ರೇಲಿಯಾಕ್ಕೆ ತೆರಳುವ ವೇಳೆ ತಮ್ಮ ಪತ್ನಿ ಹಾಗೂ ಪುತ್ರಿಯನ್ನು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಇದರ ಜತೆಗೆ ಮೂರು ದಿನಗಳ ತರಬೇತಿಗೆ ಹಾಜರಾಗದೆ ಕುಟುಂಬ ಸದಸ್ಯರ ಜತೆ ಸಮಯ ಕಳೆಯಲು ಹೊರಗೆ ತೆರಳಿದ್ದರು. ಅಲ್ಲದೆ ಮೂರು ದಿನವೂ ಸಮವಸ್ತ್ರ ಧರಿಸದೆ ಜೀನ್ಸ್ಪ್ಯಾಂಟ್, ಟೀಶರ್ಟ್, ರಿಬೋಕ್ ಶೂ ಹಾಕಿಕೊಂಡು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.
ಅಭಿಷೇಕ್ ಗೋಯಲ್ ಜತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಅಕಾಡೆಮಿಯ ಸಮನ್ವಯಾಧಿಕಾರಿ ಎಸ್.ರವೀಂದ್ರನ್, ಉಪನಿರ್ದೇಶಕ ಪುಟ್ಟವಿಮಲಾದಿತ್ಯ ಅವರುಗಳು ಹೈದರಾಬಾದ್ನಲ್ಲಿರುವ ಅಕಾಡೆಮಿ ಮುಖ್ಯಸ್ಥರಿಗೆ ರಹಸ್ಯ ಪತ್ರವೊಂದನ್ನು ಬರೆದ್ದಿದಾರೆ. ಆಸ್ಟ್ರೇಲಿಯಾಕ್ಕೆ ಬಂದಿದ್ದ ಅಭಿಷೇಕ್ ಗೋಯಲ್ ತರಬೇತಿಗೆ ಹಾಜರಾಗದೆ ಕುಟುಂಬದ ಸದಸ್ಯರ ಜತೆ ಹೊರ ಹೋಗಿದ್ದರು. ಅವರು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸಮವಸ್ತ್ರ ಧರಿಸದೆ ಜೀನ್ಸ್ಪ್ಯಾಂಟ್, ಟೀಶರ್ಟ್ ಹಾಕಿಕೊಂಡಿದ್ದರು. ಅಲ್ಲದೆ ಕೊನೆಯ ದಿನ ತಮ್ಮ ಪತ್ನಿ ಹಾಗೂ ಮಗಳನ್ನು ತರಬೇತಿಗೆ ಬಂದಿದ್ದವರ ಜತೆ ಕರೆದುಕೊಂಡು ಬಂದಿದ್ದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು.
ಈ ಸಂಬಂಧ ಹೈದರಾಬಾದ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಕಾಡೆಮಿ ಮುಖ್ಯಸ್ಥರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರಿಗೆ ಪತ್ರ ಬರೆದಿದ್ದಾರೆ. ಅಭಿಷೇಕಗೋಯಲ್ ವಿರುದ್ಧ ಕ್ರಮ ಜರುಗಿಸುವುದು ಹಾಗೂ ಅವರಿಗೆ ತರಬೇತಿಗೆ ನೀಡಲಾಗಿದ್ದ 63ಸಾವಿರ ಹಣವನ್ನು ಹಿಂಪಡೆದು ಶಿಸ್ತುಕ್ರಮ ಜರುಗಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.
ಕರ್ನಾಟಕ