ಕರ್ನಾಟಕ

100 ದಿನ ಕಳೆದರೂ ಕಲಬುರಗಿ ಹತ್ಯೆ ಹಂತಕರ ಸುಳಿವಿಲ್ಲ

Pinterest LinkedIn Tumblr

kallfi

ಧಾರವಾಡ, ಡಿ.11-ಖ್ಯಾತ ಸಾಹಿತಿ, ಸಂಶೋಧಕ ಡಾ.ಎಂ.ಎಂ.ಕಲಬುರಗಿ ಹತ್ಯೆಯಾಗಿ  ನೂರು ದಿನಗಳು ಕಳೆದರೂ ಇನ್ನೂ ಹಂತಕರ ಸುಳಿವು ಸಿಕ್ಕಿಲ್ಲ. ಆಗಸ್ಟ್ 30ರಂದು ಡಾ.ಎಂ.ಎಂ. ಕಲಬುರಗಿ ಯನ್ನು ಹಂತಕರು ಅವರ ಮನೆಯಲ್ಲಿ ಹತ್ಯೆಗೈದಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ಬಗ್ಗೆ ವಿಶೇಷ ಚರ್ಚೆ ನಡೆದು ಹಂತಕರ ಪತ್ತೆಗೆ ಆಗ್ರಹಿಸಲಾಗಿತ್ತು. ತಂಡ ಹಲವಾರು ಬಾರಿ ಕಲಬುರಗಿ ಅವರ ಮನೆಗೆ ಭೇಟಿ ನೀಡಿ ಅಕ್ಕ-ಪಕ್ಕದ ಮನೆಯವರು ಹಾಗೂ ಅಪಾರ್ಟ್‌ಮೆಂಟ್‌ನಲ್ಲಿರುವ ವ್ಯಕ್ತಿಗಳ ಬಗ್ಗೆ ವಿಚಾರಣೆ ನಡೆಸಿತ್ತು. ಇಷ್ಟಕ್ಕೇ ನಿಲ್ಲದ ತಂಡ ಮಹಾರಾಷ್ಟ್ರಕ್ಕೂ ಭೇಟಿ ನೀಡಿ ಕೆಲವು ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಿತ್ತು.

ಖಾನಾಪುರದಲ್ಲಿ ರುದ್ರಗೌಡ ಪಾಟೀಲ್ ಎಂಬುವರ ಹತ್ಯೆಯಾಗಿತ್ತು. ಈ ವ್ಯಕ್ತಿ ಕಲಬುರಗಿ ಹತ್ಯೆ ಮಾಡಿದ್ದನೆಂದು ಸಂಶಯ ವ್ಯಕ್ತಪಡಿಸಿತ್ತು. ಈ ಸಂಬಂಧ ತಂಡ ಖಾನಾಪುರಕ್ಕೂ ಭೇಟಿ ನೀಡಿತ್ತು. ಆದರೆ, ಬೆಳಗಾವಿ ಹಿರಿಯ ಪೊಲೀಸ್ ಅಧಿಕಾರಿಗಳು ರುದ್ರಗೌಡ ಹತ್ಯೆಗೂ ಕಲಬುರಗಿ ಹಂತಕರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಿದ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲದಂತೆ ಸಿಐಡಿ ತಂಡ ವಾಪಸ್ ತೆರಳಿತ್ತು. ಕಲಬುರಗಿ ಅವರ ಹತ್ಯೆಯನ್ನು  ಖಂಡಿಸಿ ಧಾರವಾಡ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಜ್ಯ ಹಾಗೂ ರಾಜ್ಯ ಮಟ್ಟದ ಸಾಹಿತಿಗಳು ತಮಗೆ ದೊರೆತ ಪ್ರಶಸ್ತಿಗಳನ್ನು ವಾಪಸ್ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ದೇಶ-ವಿದೇಶಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಂತಕರನ್ನು ಹಿಡಿದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದ್ದರೂ ಸಹ ಇದುವರೆಗೂ ಹಂತಕರ ಸುಳಿವು ಸಿಗದ ಬಗ್ಗೆ ಸಾಹಿತ್ಯ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿದೆ.

Write A Comment