ಕರ್ನಾಟಕ

ಕೊಡಗು ಗಲಭೆಯಲ್ಲಿ ಕೇರಳಿಗರು: ಮಾಹಿತಿ ಬಹಿರಂಗಪಡಿಸಿ; ಗೃಹಸಚಿವ ಪರಮೇಶ್ವರ್‌ಗೆ ಎ.ಕೆ. ಸುಬ್ಬಯ್ಯ ಸವಾಲು

Pinterest LinkedIn Tumblr

AKSಬೆಂಗಳೂರು, ಡಿ.4: ಮಡಿಕೇರಿಯಲ್ಲಿ ಆಯೋಜಿಸಿದ್ದ ದೇಶಪ್ರೇಮಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಸಂದರ್ಭದಲ್ಲಿ ನಡೆದ ಕೋಮು ಗಲಭೆಯಲ್ಲಿ ಐದು ಸಾವಿರ ಕೇರಳಿಗರು ಭಾಗವಹಿಸಿದ್ದರು ಎಂದು ಹೇಳಿಕೆ ನೀಡಿರುವ ಗೃಹಸಚಿವ ಜಿ.ಪರಮೇಶ್ವರ್, ಮಾಹಿತಿ ಇದ್ದರೆ ಕೂಡಲೇ ಬಹಿರಂಗಪಡಿಸಬೇಕು ಎಂದು ಕೊಡಗು ಜಾತ್ಯತೀತ ಸಮಾನ ಮನಸ್ಕರ ಒಕ್ಕೂಟದ ಗೌರವ ಅಧ್ಯಕ್ಷ ಎ.ಕೆ ಸುಬ್ಬಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ನಡೆದ ವಿಧಾನಸಭೆ ಕಲಾಪದ ಚರ್ಚೆಯಲ್ಲಿ ಗೃಹಸಚಿವರು ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ನಡೆದ ಘರ್ಷಣೆಯಲ್ಲಿ 5 ಸಾವಿರ ಕೇರಳಿಗರು ಭಾಗವಹಿಸಿದ್ದರು ಎಂದು ಲಿಖಿತ ಹೇಳಿಕೆ ನೀಡಿರುವುದು, ಗೃಹಸಚಿವರೇ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗಿದೆ. ಗಲಭೆಯ ವೇಳೆ ಕೇರಳಿಗರು ಬಂದಿರುವ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ಬಹಿರಂಗ ಪಡಿಸಬೇಕು ಎಂದು ಗೃಹಸಚಿವರಿಗೆ ಸವಾಲೆಸೆದರು.

ಪೊಲೀಸರು ನೀಡಿರುವ ಸುಳ್ಳು ವರದಿಯನ್ನು ಯಾವುದೇ ವಿವೇಚನೆಗೆ ಒಳಪಡಿಸದೆ ವಿಧಾನಸೌಧದಲ್ಲಿ ಹೇಳಿಕೆ ನೀಡುವ ಮೂಲಕ ಗೃಹಮಂತ್ರಿಯವರು ಸದಸ್ಯರ ಹಕ್ಕುಚ್ಯುತಿ ಮಾಡಿದ್ದಾರೆ. ಈ ವೇಳೆ ತಾನು ವಿಧಾನಸೌಧದಲ್ಲಿದ್ದಿದ್ದರೆ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿ ಸತ್ಯ ಹೇಳಿಸುತ್ತಿದ್ದೆ ಎಂದು ಗುಡುಗಿದ ಸುಬ್ಬಯ್ಯ, ಕೊಡಗಿನ ಗಲಭೆಯಲ್ಲಿ ಕೇರಳಿಗರು ಭಾಗವಹಿಸಿದ್ದರು ಎಂಬುದನ್ನು ಸಾಕ್ಷಾಧಾರಗಳ ಸಮೇತ ಸಾಬೀತುಪಡಿಸಿದರೆ, ತಾನು ಬಹಿರಂಗ ಸಭೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸುತ್ತೇನೆ ಎಂದು ಸುಬ್ಬಯ್ಯ ಸವಾಲು ಹಾಕಿದರು.
ಟಿಪ್ಪುಜಯಂತಿ ಆಚರಿಸುವಂತೆ ಯಾವುದೇ ಮುಸ್ಲಿಮ್ ಸಂಘಟನೆಗಳು ಅರ್ಜಿ ಹಾಕಿ ಕೇಳಿಕೊಂಡಿರಲಿಲ್ಲ. ಆದರೂ ಸರಕಾರ ಜಯಂತಿ ಆಚರಿಸಲು ಮುಂದಾಗಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಎಲ್ಲ ಮಹನೀಯರ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ಆಚರಿಸಲಾಗುತ್ತದೆ. ಆದರೆ ಟಿಪ್ಪುಜಯಂತಿಯನ್ನು ಮಾತ್ರ ಅಲ್ಪಸಂಖ್ಯಾತರ ಇಲಾಖೆಗೆ ವಹಿಸುವ ಮೂಲಕ ಸರಕಾರ ಮುಸ್ಲಿಮ್ ಶೋ ಆಗಿ ಮಾರ್ಪಡಿಸಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ವತಿಯಿಂದ ಟಿಪ್ಪು ಜಯಂತಿಯ ಆಚರಣೆಗೆ ಎಲ್ಲ ಮಸೀದಿಗಳಿಗೆ ಆಹ್ವಾನ ಪತ್ರಿಕೆ ಕಳುಹಿಸಲಾಗಿತ್ತು. ಕರಪತ್ರಗಳನ್ನು ಹಂಚಿದ್ದಲ್ಲದೆ ಎಲ್ಲ ಮಸೀದಿಗಳಲ್ಲಿ ಜಯಂತಿ ಆಚರಣೆ ಬಗ್ಗೆ ಪ್ರಚಾರ ಮಾಡಲಾಗಿತ್ತು ಎಂದು ತಿಳಿಸಿದ ಇವರು, ಇದರ ಪರಿಣಾಮ ಟಿಪ್ಪು ಒಬ್ಬ ದೇಶಭಕ್ತ ಎಂದು ಗೊತ್ತಿದ್ದ ಜಗತ್ತಿಗೆ ಇವರೊಬ್ಬ ಮುಸಲ್ಮಾನ ಎಂದು ಪ್ರತಿಬಿಂಬಿಸಿದ್ದು ಅಕ್ಷಮ್ಯ ಎಂದು ವಿಷಾದಿಸಿದರು.

ಬಂದ್‌ಗೆ ಕರೆ ನೀಡಿದವರೇ ಹೊಣೆ: ಜಯಂತಿಯನ್ನು ವಿರೋಧಿಸುವ ನೆಪದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಬಂದ್‌ಗೆ ಕರೆ ನೀಡಿರುವುದು ಕಾನೂನುಬಾಹಿರ. ಆದ್ದರಿಂದ ಮಡಿಕೇರಿ ಘಟನೆಯಲ್ಲಿ ನಡೆದ ಅನಾಹುತಕ್ಕೆ ಬಂದ್ ನೀಡಿದವರೇ ನೇರವಾಗಿ ಕಾರಣರಾಗಿದ್ದಾರೆ. ಈ ಎಲ್ಲ ಅನಾಹುತಕ್ಕೆ ಬಂದ್‌ಗೆ ಕರೆ ನೀಡಿದವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಈ ಬಗ್ಗೆ ಶೀಘ್ರವೇ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗುವುದು ಎಂದು ಸುಬ್ಬಯ್ಯ ತಿಳಿಸಿದರು.

ಸಂಚಾಲಕ ಅಬ್ದುಲ್ ಮಜೀದ್ ಮಾತನಾಡಿ, ಕುಟ್ಟಪ್ಪ ಸಾವಿನ ಪ್ರಕರಣದಲ್ಲಿ ಸುಮಾರು 40 ಮಂದಿ ಮುಸ್ಲಿಮ್ ಯುವಕರ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ನಿರಂತರ ಕಿರುಕುಳ ನೀಡುತ್ತಿದ್ದಾರೆ. ಈ ಕಿರುಕುಳದಿಂದ ಬೇಸತ್ತಿರುವ ಯುವಕರು ಊರು ತೊರೆದಿದ್ದಾರೆ. ಅಷ್ಟೇ ಅಲ್ಲದೆ ಸ್ಥಳೀಯ ರಾಜಕಾರಣಿಗಳು ಮುಸ್ಲಿಮ್ ಸಮುದಾಯದ ಮೇಲೆ ಆರೋಪ ಮಾಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ ಎಂದು ಹೇಳಿದರು.

Write A Comment