ಮನೋರಂಜನೆ

ರಥಾವರ ಚಿತ್ರವಿಮರ್ಶೆ: ರಥೋತ್ಸವದಲ್ಲಿ ಚಕ್ರಕ್ಕೆ ಸಿಕ್ಕಂತಾಗಿ

Pinterest LinkedIn Tumblr

rathaavara1‘ಉಗ್ರಂ’ ಮೂಲಕ ಯಶಸ್ಸಿನ-ಜನಪ್ರಿಯತೆಯ ಉತ್ತುಂಗವೇರಿದ್ದ ಶ್ರೀಮುರಳಿಯವರಿಗೆ ಅಭಿಮಾನದ ಮಾಹಾಪೂರವನ್ನೇ ಹರಿಸಿದ್ದ ಪ್ರೇಕ್ಷಕರು ಇಂದು ಬಿಡುಗಡೆಯಾಗುತ್ತಿರುವ  ‘ರಥಾವರ’ದ ಬಗ್ಗೆ ಬೆಟ್ಟದಂತಹ ನಿರೀಕ್ಷೆ ತಳೆದಿದ್ದಾರೆ. ನಿರೀಕ್ಷೆಯ ಪ್ರವಾಹ ತಡೆಯಲು ಚಂದ್ರಶೇಖರ ಬಂಡೆಯಪ್ಪ ಕಡಿದು ಕಟ್ಟಿರುವ ಈ ಏಕಶಿಲಾ ರಥ ಸಶಕ್ತವಾಗಿದೆಯೇ? ಅಥವಾ ಪ್ರವಾಹದ ಜೊತೆ ಕೊಚ್ಚಿಹೋಗುವುದೇ?

ರಗೆಡ್ ‘ರಥ’ (ಶ್ರೀಮುರಳಿ) ಶಾಸಕ ಮಣಿಕಂಠನ (ರವಿಶಂಕರ್) ಸಾಕುರೌಡಿ. ರಥನಿಗೆ ತಪ್ಪು-ಒಪ್ಪಿನ ವ್ಯತ್ಯಾಸವೇ ತಿಳಿಯದು. ದಣಿಯಿಂದ ಬಂದ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿ ವಿರೋಧಿಗಳನ್ನು ಪುಡಿಗುಟ್ಟಿ, ಮೈಮೂಳೆ ಮುರಿದು, ಚೆಂಡಾಡಿ, ತನ್ನ ಕೂದಲನ್ನೂ ಕೊಂಕಿಸಿಕೊಳ್ಳದೆ, ತನ್ನ ಮೈಮೇಲಿನ ಧೂಳನ್ನು ಸರಿಪಡಿಸಿಕೊಳ್ಳುವದಷ್ಟೇ ತಿಳಿದಿರುವ ಧೀರೋತ್ತ ನಾಯಕ ಇವನು. ಮಣಿಕಂಠನಿಗೆ ಭವಿಷ್ಯವಾಣಿಯಂತೆ, ಅವನು ಮಂಗಳಮುಖಿ ಶವದ ಮುಖವನ್ನು ನೋಡಿದರೆ ಮುಖ್ಯಮಂತ್ರಿಯಾಗುವ ಅವಕಾಶವಿರುತ್ತದೆ. ಆದರೆ ಮಂಗಳಮುಖಿಯರ ಶಾಸ್ತ್ರದಲ್ಲಿ ಮೃತರ ಮುಖವನ್ನು ಯಾರೂ ಕಾಣದಂತೆ ನಿಗೂಢವಾಗಿ ಶವಸಂಸ್ಕಾರ ಮಾಡುವುದರಿಂದ, ಈ ಅಡಚಣೆಯ ನಿವಾರಣೆಗೆ ರಥನಿಗೆ ಕೆಲಸ ವಹಿಸಲಾಗುತ್ತದೆ. ರಥನಿಗೆ ಈ ಕೆಲಸ ಮಾಡಲು ಸಾಧ್ಯವೇ? ಈ ಮಧ್ಯದಲ್ಲಿ ರಥನ ಪ್ರೇಯಸಿ ‘ನವಮಿ’ಗೆ ಏನಾಗುತ್ತದೆ?

ಪುಡಾರಿಯೊಬ್ಬ ರಾಜಕೀಯ ಏಳಿಗೆಗಾಗಿ ಮಾಟ ಮಂತ್ರ, ಅಂಧ ಶ್ರದ್ಧೆಯ ಮೊರೆ ಹೋಗುವುದು ಈಗಾಗಲೇ ಹಲವಾರು ಸಿನೆಮಾಗಳಲ್ಲಿ ಕಂಡು ಬಂದಿರುವ ಸೂತ್ರ. ಇದೇ ಅರೆಬೆಂದ ಸೂತ್ರವನ್ನು ಮುಂದಿಟ್ಟುಕೊಂಡು, ನಾಯಕನ ವಿಜೃಂಭಣೆಗಾಗಿ ಅತಿರಂಜಿತ ಘಟನೆಗಳನ್ನು ಸೇರಿಸಿ ಪ್ರೇಕ್ಷಕನ ಮುಂದಿಟ್ಟಿರುವ ಈ ಸಿನೆಮಾದ ಒಳಪ್ರವೇಶ ಒಂದು ದುಸ್ಸಾಹಸವೇ ಸರಿ. ನೈಜತೆಯ ಹಂಗೇ ಬೇಡ, ಕಲ್ಪನೆಯ ವೈಪರೀತ್ಯವೇ ಎಲ್ಲ ಎಂಬಂತೆ, ನಾಯಕ ನಟ ಮಂಗಳಮುಖಿಯರ ಶವ ಹುಡುಕಿ ಹೋಗುವ ಅತಿರೇಕದ, ವಿಕ್ಷಿಪ್ತತೆಯಿಂದ ಕೂಡಿದ ದೃಶ್ಯಗಳು ಮತ್ತು ನಟನೆ, ಬರ್ಭರವಾಗಿ ಬಂದೆರಗುತ್ತದೆ. ಮೊದಲಿಗೆ ಮಂಗಳಮುಖಿಯರನ್ನು ಅಸ್ಪೃಶ್ಯರಂತೆ ಕಾಣುವ ನಾಯಕ ನಟ ನಂತರ ಅವರಲ್ಲಿ ದೇವರನ್ನು ಕಾಣುತ್ತಾನೆ. ಹೀಗೆ ಅಂಧಶ್ರದ್ದೆಯ ಮುಖವಾಣಿಯಂತಿರುವ ಈ ಸಿನೆಮಾ ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷಿಸುತ್ತಾ ಮುಂದುವರೆಯುತ್ತದೆ. ಸಂಬಂಧವೇ ಇಲ್ಲದಂತಹ ಒಂದು ಪ್ರೇಮಕಥೆಯ ಸೃಷ್ಟಿ, ಸಿನೆಮಾದ ಮಧ್ಯ ಭಾಗದಲ್ಲೇ ಹೇಗೋ ಅರಿವು ಮೂಡಿ, ತನ್ನ ಅಂಧ ಗೆಳೆಯನಿಗೆ ಕಣ್ಣು ಕೊಡಲು ಮುಂದಾಗುವ ರಥ, ರಕ್ತಸಿಕ್ತ ಹೊಡೆದಾಟಗಳು ಹೀಗೆ ಸೂತ್ರ ಸಂಬಂಧವಿಲ್ಲದೆ ನಿರೂಪಣೆ ಎಗಿಲ್ಲದೆ-ಎಡವುತ್ತಾ ಸಾಗುತ್ತದೆ. ಕನ್ನಡ ಸಿನೆಮಾಗಳಲ್ಲಿ ಪೊಲೀಸರು ಎಲ್ಲ ಮುಗಿದ ಮೇಲೆ ಬರುತ್ತಾರೆ ಎಂಬುದು ಹಾಸ್ಯ. ಆದರೆ ಇಲ್ಲಿ ನಿರ್ದೇಶಕ ಒಂದು ಹೆಜ್ಜೆ ಮುಂದೆ ಹೋಗಿ ಕ್ಲೈಮಾಕ್ಸ್ ನ ಫೈಟ್ ಗೂ ಮುಂಚಿತವಾಗಿ ಸ್ಥಳಕ್ಕೆ ಹೊರಡುವ ಪೊಲೀಸನ್ನು ತೋರಿಸಿ, ಅಂತ್ಯಕ್ಕೆ ಅವರನ್ನು ಮರೆತುಬಿಡುತ್ತಾರೆ! ಶ್ರೀಮುರಳಿಯನ್ನು ಹೊರತುಪಡಿಸಿ ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲಾ, ಪೊಲೀಸ್ ಪಾತ್ರಧಾರಿ, ಮಂಗಳಮುಖು ಮಾಧವಿ ಪಾತ್ರಧಾರಿ ಈ ಎಲ್ಲರದ್ದು ಅತಿರೇಕದ ಉಸಿರುಗಟ್ಟಿಸುವ ನಟನೆ. ಪಾತ್ರದ ಪರಿಕಲ್ಪನೆಯ ತೊಂದರೆಯೂ, ಅಥವಾ ಆ ಪಾತ್ರದ ಆಯ್ಕೆಯ ತಪ್ಪೋ ಶ್ರೀಮುರಳಿ ಕೂಡ ಈ ಪಾತ್ರಕ್ಕೆ ಪರಿಪಕ್ವ ಎನ್ನುವ ಭಾವನೆ ಮೂಡುವುದಿಲ್ಲ. ಸದಾ ಕನಸಿನಲ್ಲಿ ಮುಳುಗಿರುವ ರಚಿತಾ ರಾಂ ಅವರದ್ದು ಅತಂತ್ರ ಪಾತ್ರ! ರವಿ ಬಸ್ರೂರ್ ಅವರ ಬೊಬ್ಬಿರಿವ ಹಿನ್ನಲೆ ಸಂಗೀತ ರವಿಶಂಕರ್ ನಟನೆ-ಸಂಭಾಷಣೆಗೇ ಅವರಿಗೇ ಸವಾಲು ಒಡ್ಡುತ್ತದೆ. ಇದ್ದುದರಲ್ಲಿ ಎರಡು ಹಿತಕರವಾದ ಹಾಡುಗಳು ಸಿನೆಮಾದ ಸಹಾಯಕ್ಕೆ ನಿಲ್ಲುತ್ತವೆ. ನಿರೂಪಣೆಯ ಸೋಲನ್ನು ತಿದ್ದಬಹುದಾದಂತ ಯಾವುದೇ ಸಂಕಲನ ಚತುರತೆ ಕಾಣುವುದಿಲ್ಲ. ಒಟ್ಟಿನಲ್ಲಿ ಶ್ರೀಮುರಳಿಯವರ ಜನಪ್ರಿಯತೆಯ ಮೇಲೆ ಭಾರ ಹಾಕಿ, ಕಥೆ-ಸ್ಕ್ರಿಪ್ಟ್-ನಿರೂಪಣೆ ಇವುಗಳಿಗೆಲ್ಲಾ ತಿಲಾಂಜಲಿ ಇಟ್ಟು ಅಬ್ಬರದ ಸಿನೆಮಾವೊಂದನ್ನು ಮುಂದಿಟ್ಟಿದ್ದಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ.

ಅಂದಶ್ರದ್ದೆ-ಮೂಢನಂಬಿಕೆಗಳು ಸಿನೆಮಾದ ಭಾಗವಾಗಬಾರದು ಎಂದೇನೆಲ್ಲ. ಆದರೆ ಅವುಗಳನ್ನು ಪೋಷಿಸುವ, ವಿಜೃಂಭಿಸುವ ಅಥವಾ ಜನರಿಗೆ ಅವುಗಳ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸಿನೆಮಾ ಅವುಗಳ ಪರ ನಿಂತಾಗ ಸಿನೆಮಾದ ಮೌಲ್ಯಕ್ಕೆ ಕುಂದು ಖಂಡಿತಾ. ತೃತೀಯಲಿಂಗಿಗಳು ಅಥವಾ ಮಂಗಳಮುಖಿಗಳನ್ನು ಅಸ್ಪೃಶ್ಯರಂತೆ ತೋರಿಸುವುದು ಅಥವಾ ಅವರನ್ನು ಕೊನೆಗೆ ದೇವರ ಅವತಾರದಂತೆ ಬಿಂಬಿಸುವುದು ಎರಡು ಕೂಡ ಅನ್ಯಾಯವೇ. ಅವರು ಕೂಡ ಎಲ್ಲರ ಹಾಗೆ ಮನುಷ್ಯರೇ ಮತ್ತು ಅವರ ಜೊತೆ ಮಾನವೀಯ ಸಂಪರ್ಕಗಳನ್ನು ಬೆಳೆಸಿಕೊಳ್ಳುವ ಅಗತ್ಯ ಎಂಬುದನ್ನು ಕೆಲವು ಸಿನೆಮಾ ಮಂದಿಗೆ ಇಂದು ಪಾಠವಾಗಿ ಹೇಳಬೇಕಾಗಿ ಬಂದಿರುವುದು ಸಾಮಾಜಿಕ ದುರಂತವೇ ಸರಿ!

Write A Comment