ಕರ್ನಾಟಕ

ಸ್ನೇಹಿತರಿಂದಲೇ ಮೂವರು ಯುವಕರ ಬರ್ಬರ ಕೊಲೆ । ಬೆಚ್ಚಿಬಿದ್ದ ಬೆಂಗಳೂರು

Pinterest LinkedIn Tumblr

murderಬೆಂಗಳೂರು, ಡಿ.2-ನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಯುವಕರನ್ನು ಸ್ನೇಹಿತರೇ ಚಾಕುವಿನಿಂದ ಇರಿದು, ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದು, ಜನತೆಯನ್ನು ಬೆಚ್ಚಿಬೀಳಿಸಿದೆ. ಸ್ನೇಹಿತರನ್ನೇ ಜೀವದ ಗೆಳೆಯ ಎಂದು ತಿಳಿದುಕೊಂಡಿದ್ದೇವೆ. ಆದರೆ ಸ್ನೇಹ ಮಾಡಬೇಕಾದರೆ ಅವರು ಒಳ್ಳೆಯವರೇ, ಕೆಟ್ಟವರೆ ಎಂಬುದು ಗೊತ್ತಾಗುವುದಿಲ್ಲ. ಅಂಥವರಿಂದಲೇ ಕೆಡುಕಾಗುತ್ತದೆ ಎಂದರೆ ಅಂತಹ ಸ್ನೇಹ ಬೇಕೇ ಎಂಬ ಬಗ್ಗೆ ನಾವೇ ಪ್ರಶ್ನಿಸಿಕೊಳ್ಳುವಂತಾಗಿದೆ. ಗೆಳೆತನ ಮಾಡಬೇಕಾದರೆ ಒಳ್ಳೆಯ ಗೆಳೆಯರ ಸಹವಾಸ ಮಾಡಬೇಕು. ಒಂದು ವೇಳೆ ಒಳ್ಳೆಯ ಗೆಳೆಯ ಸಿಗದಿದ್ದರೆ ಆತನಿಂದ ಅಪಾಯ ಬರುತ್ತದೆ ಎಂದು ಗೊತ್ತಾಗುತ್ತಿದ್ದಂತೆಯೇ ಅಂತವರಿಂದ ದೂರ ಉಳಿಯುವುದು ಒಳಿತು.  ರಾತ್ರಿ ನಡೆದಿರುವ ಮೂರೂ ಪ್ರಕರಣಗಳು ಸ್ನೇಹಿತರಿಂದಲೇ ಎಂಬುದು ವಿಷಾದದ ಸಂಗತಿ.

ಜೆ.ಜೆ.ನಗರ:
ಹಣಕಾಸಿನ ವಿಚಾರವಾಗಿ ಸ್ನೇಹಿತರ ನಡುವೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜೆ.ಜೆ.ನಗರ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಗಂಗೊಂಡನಹಳ್ಳಿ ನಿವಾಸಿ ವಾಸೀಂ(23) ಕೊಲೆಯಾದ ಯುವಕ. ರಾತ್ರಿ 9 ಗಂಟೆ ಸಂದರ್ಭದಲ್ಲಿ ಫಾರುಕ್‌ನಗರದ ಮೊದಲನೇ ಕ್ರಾಸ್‌ನಲ್ಲಿನ ಆಸಾನ್ ಟೀ ಅಂಗಡಿ ಬಳಿ ಸ್ನೇಹಿತನಾದ ಸಲ್ಮಾನ ಹಾಗೂ ವಾಸೀಂ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆಯುತ್ತಿತ್ತು.
ನೋಡ ನೋಡುತ್ತಿದ್ದಂತೆಯೇ ಜಗಳ ವಿಕೋಪಕ್ಕೆ ತಿರುಗಿ, ಕೈ ಕೈ ಮಿಲಾಯಿಸುತ್ತಿದ್ದಾಗ ಸಲ್ಮಾನ್ ಚಾಕುವಿನಿಂದ ವಾಸೀಂಗೆ ಇರಿದು ಪರಾರಿಯಾಗಿದ್ದಾನೆ.
ಇರಿತದಿಂದ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ವಾಸೀಂನನ್ನು ಸ್ಥಳೀಯರು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಫ್ರೇಜರ್‌ಟೌನ್:
ಸ್ನೇಹಿತನಿಂದ ಹಣ ಕಸಿದುಕೊಂಡು ಬಾರ್‌ಗೆ ತೆರಳಿ ಮದ್ಯಪಾನ ಮಾಡಿ ಹೊರಬರುತ್ತಿದ್ದ ಯುವಕನ ಮೇಲೆ ಹಳೇ ಸ್ನೇಹಿತರೆಲ್ಲಾ ದಾಳಿ ಮಾಡಿ, ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಪ್ರೇಜರ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಸ್ನೇಹಿತರಿಂದಲೇ ಕೊಲೆಯಾದ ಯುವಕನನ್ನು ಪ್ರದೀಪ್ ಅಲಿಯಾಸ್ ಜೇಮ್ಸ್(24) ಎಂದು ಗುರುತಿಸಲಾಗಿದ್ದು, ಈತ ರೌಡಿ ಶೀಟರ್ ಎನ್ನಲಾಗಿದೆ.
ಕಾರ್ತಿಕ್ ಎಂಬಾತನಿಂದ ಜೇಮ್ಸ್ ಹಣ ಕಸಿದುಕೊಂಡು ರಾತ್ರಿ 11 ಗಂಟೆಯಲ್ಲಿ ಸಮುದ್ರ ಬಾರ್ ಅಂಡ್ ರೆಸ್ಟೋರೆಂಟ್‌ಗೆ ತೆರಳಿದ್ದನು. ಇದರಿಂದ ಕೋಪಗೊಂಡ ಕಾರ್ತಿಕ್ ತನ್ನ ಸಹಚರರೊಂದಿಗೆ ಬಾರ್ ಬಳಿ ಬಂದು, ಜೇಮ್ಸ್ ಹೊರಬರುತ್ತಿರುವುದನ್ನೇ ಕಾದು ಆತ ಹೊರಬರುತ್ತಿದ್ದಂತೆಯೇ ಏಕಾಏಕಿ ದಾಳಿ ಮಾಡಿ ಹಲ್ಲೆ ನಡೆಸಿ ಚಾಕುವಿನಿಂದ ಕುತ್ತಿಗೆ ಇರಿದು ಪರಾರಿಯಾಗಿದ್ದರು.

ಜೇಮ್ಸ್‌ನನ್ನು ಸ್ಥಳೀಯ ಎಎಎಂಎಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಫ್ರೇಜರ್‌ಟೌನ್ ಪೊಲೀಸರು ಘಟನೆ ನಡೆದ ಕ್ಷಣಾರ್ಧದಲ್ಲೇ ಡಿ.ಜೆ.ಹಳ್ಳಿಯ ಬಾಗಲೂರಿನ ನಿವಾಸಿಗಳು ಎನ್ನಲಾದ ಆರೋಪಿಗಳಾದ ಕಾರ್ತಿಕ್ ಅಲಿಯಾಸ್ ಕುಳ್ಳ ಕಾರ್ತಿಕ್(19), ಸ್ಟಾಲಿನ್ ಅಲಿಯಾಸ್ ಚಲ್ಲು(19), ಕಾರ್ತಿಕ್ ಅಲಿಯಾಸ್ ಆನಂದ್(19), ವಿನೋದ್ ಹಾಗೂ ಕಾರ್ತಿಕ್ ಅಲಿಯಾಸ್ ಕರ್ಣ(19) ಎಂಬುವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಹುಳಿಮಾವು:
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಸ್ನೇಹಿತನ ಮೇಲೆ ಮುನಿಸಿಕೊಂಡಿದ್ದ ಗೆಳೆಯರು ಸಂಜೆ ಕ್ರಿಕೆಟ್ ಆಡುವಾಗ ಮತ್ತೆ ಮಾತಿಗೆ ಮಾತು ಬೆಳೆದು ಜಗಳವಾಡಿ ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ 10.30ರಲ್ಲಿ ನಡೆದಿದೆ. ವೈಶ್ಯಬ್ಯಾಂಕ್ ಕಾಲೋನಿ ನಿವಾಸಿ  ಶಿವ ಅಲಿಯಾಸ್ ಕೆಂಪಮಾದೇಗೌಡ(23) ಕೊಲೆಯಾದ ಯುವಕ. ಹುಳಿಮಾವು ಕಚೇರಿಯೊಂದರಲ್ಲಿ  ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಿವ ಹಾಗೂ  ಈತನ ಸ್ನೇಹಿತ ಮದನ್ ನಡುವೆ ಒಂದು ವಾರದ ಹಿಂದೆ ಕ್ಷುಲ್ಲಕ ವಿಚಾರವಾಗಿ ಜಗಳ ನಡೆದಿತ್ತು.

ನಿನ್ನೆ ಸಂಜೆ ಮದನ್ ಹಾಗೂ ಇನ್ನಿತರರೊಡನೆ ಶಿವ  ಕ್ರಿಕೆಟ್ ಆಡುತ್ತಿದ್ದಾಗ ಮತ್ತೆ ಮದನ್ ಹಾಗೂ ಶಿವನ ನಡುವೆ ಜಗಳ ನಡೆದಿದ್ದು, ಜಗಳದ ವೇಳೆ ಉಳಿದವರೆಲ್ಲಾ ಮದನ್ ಕಡೆ ಸೇರಿಕೊಂಡು ಆತನನ್ನು ನಿಂದಿಸಿದ್ದರು. ಇದರಿಂದ ಶಿವ ಮನೆಕಡೆಗೆ ಹೊರಟಿದ್ದನು. ತದನಂತರ ರಾತ್ರಿ 10.30ರಲ್ಲಿ ಶಿವ ಮನೆಯಿಂದ ಹೊರಗೆ ಹೋಗುತ್ತಿದ್ದಾಗ ಮದನ್ ತನ್ನ ಸಹಚರರೊಂದಿಗೆ ಸೇರಿಕೊಂಡು ಆತನ ಮೇಲೆ ಮತ್ತೆ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು.   ವಿಷಯ ತಿಳಿದ ಹುಳಿಮಾವು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳಾದ ಮದನ್, ಮೋಹನ್, ಶಶಾಂಕ್ ಸೇರಿದಂತೆ ಐವರನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.

Write A Comment