ಕರ್ನಾಟಕ

‘ಕಬ್ಬು ನಿಧಿ’ ಸ್ಥಾಪನೆಗೆ ಪುಟ್ಟಣ್ಣಯ್ಯ ಆಗ್ರಹ

Pinterest LinkedIn Tumblr

puttannaiah__

ಬೆಂಗಳೂರು, ಡಿ.1: ರಾಜ್ಯದಲ್ಲಿ ಕಬ್ಬು ಬೆಳೆಗಾರರು ಎದುರಿಸುವ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಒಂದು ಸಾವಿರ ಕೋಟಿ ರೂ.ಗಳನ್ನು ಒಳಗೊಂಡ ‘ಕಬ್ಬು ನಿಧಿ’ಯನ್ನು ಸ್ಥಾಪಿಸಬೇಕು ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಆಗ್ರಹಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸಹಕಾರಿ ಹಾಗೂ ಸಕ್ಕರೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ದರ ನಿಯಂತ್ರಣ ಮಂಡಳಿಯ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಬ್ಬು ಹಾಗೂ ಸಕ್ಕರೆ ಸಂಬಂಧಿ ವಲಯದಿಂದ ವಾರ್ಷಿಕ 30 ರಿಂದ 35 ಸಾವಿರ ಕೋಟಿ ರೂ.ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಆದಾಯ ಬರುತ್ತಿದೆ. ಆದುದರಿಂದ, ಕಬ್ಬು ಬೆಳೆಗಾರರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಕಬ್ಬು ನಿಧಿಯನ್ನು ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಕ್ಕರೆ ಸಚಿವ ಮಹದೇವಪ್ರಸಾದ್ ಕೇವಲ ಮಾತುಗಳನ್ನಾಡಿಕೊಂಡಿದ್ದರೆ ಏನು ಪ್ರಯೋಜನವಾಗುವುದಿಲ್ಲ. ಸಕ್ಕರೆ ಕಾರ್ಖಾನೆ ಮಾಲಕರಿಂದ ರೈತರಿಗೆ ಕಳೆದ ಎರಡು ವರ್ಷಗಳಿಂದ ಬರಬೇಕಿರುವ ಬಾಕಿಯನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

2012-13ನೆ ಸಾಲಿನಲ್ಲಿ 16 ಮಂದಿ ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಪುಟ್ಟಣ್ಣಯ್ಯ ಆಗ್ರಹಿಸಿದರು.

Write A Comment