ರಾಷ್ಟ್ರೀಯ

ಕೊಳೆಯಿರುವುದು ರಸ್ತೆಗಳಲ್ಲಲ್ಲ, ಮನಸ್ಸಿನಲ್ಲಿ: ಅಸಹಿಷ್ಣುತೆಯ ವಿರುದ್ಧ ಪ್ರಣವ್ ಕಳವಳ

Pinterest LinkedIn Tumblr

Pranab_________ಸಾಬರಮತಿ (ಅಹ್ಮದಾಬಾದ್), ಡಿ.1: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಮಂಗಳವಾರ ತೀವ್ರವಾಗಿ ಪ್ರತಿಕ್ರಿಯಿಸಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ‘‘ಭಾರತ ದಲ್ಲಿ ನಿಜವಾದ ಕೊಳೆಯಿರುವುದು ರಸ್ತೆಗಳಲ್ಲಲ್ಲ. ನಮ್ಮ ಮನಸ್ಸಿನಲ್ಲಿದೆ’’ ಎಂದು ಹೇಳಿದ್ದಾರೆ.

ಅಹ್ಮದಾಬಾದ್ ಸಮೀಪದ ಸಾಬರಮತಿಯಲ್ಲಿರುವ ಮಹಾತ್ಮಾಗಾಂಧಿ ಆಶ್ರಮದಲ್ಲಿ ಪುರಾತನ ದಾಖಲೆಗಳ ಸಂಗ್ರಹ ಹಾಗೂ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸ್ವಚ್ಛ ಭಾರತ ಯೋಜನೆಯನ್ನು ನಾವೆಲ್ಲ ಸೇರಿ ಯಶಸ್ವಿಗೊಳಿಸುವ ಜೊತೆಗೆ ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸುವುದಕ್ಕೂ ನಾಂದಿ ಹಾಡಬೇಕು. ಆ ಮೂಲಕ ಗಾಂಧೀಜಿಯವರ ಕನಸನ್ನು ಸಾಕಾರಗೊಳಿಸಬೇಕೆಂದು ಕರೆ ನೀಡಿದರು. ಅಸ್ಪಶ್ಯತೆ ಹಾಗೂ ಮಲಹೊರುವಂತಹ ಅಮಾನವೀಯ ಆಚರಣೆಗಳು ಅಸ್ತಿತ್ವದಲ್ಲಿ ರುವವರೆಗೆ, ನಿಜವಾದ ಸ್ವಚ್ಛ ಭಾರತವನ್ನು ನಾವು ಕಾಣಲು ಸಾಧ್ಯವಾಗದೆಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಸರಣಿ ಹಿಂಸಾತ್ಮಕ ಘಟನೆಗಳು ನಡೆಯುತ್ತಿರುವ ಬಗ್ಗೆ ಹಾಗೂ ಅಸಹಿಷ್ಣುತೆ ಕುರಿತ ಚರ್ಚೆ ಕಾವೇರಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ರಾಷ್ಟ್ರಪತಿ, ‘‘ ನಮ್ಮ ಸುತ್ತಮುತ್ತಲೂ ಪ್ರತಿ ದಿನವೂ ವ್ಯಾಪಕವಾಗಿ ಹಿಂಸಾತ್ಮಕ ಘಟನೆಗಳು ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿ’’ ಎಂದರು.

‘‘ಅಹಿಂಸೆಯೆಂಬುದು ನಕಾರಾತ್ಮಕ ಶಕ್ತಿಯಲ್ಲ. ಅಹಿಂಸೆಯೆಂಬುದು ನೈತಿಕ ಸಾಧ್ಯತೆಯಾಗಿದ್ದು, ಅದು ಅಜ್ಞಾನದ ಕಗ್ಗತ್ತಲೆಯನ್ನು ತೊರೆದು ಜ್ಞಾನದ ಬೆಳಕನ್ನು ತೋರಿಸಿಕೊಡುತ್ತದೆ. ಗುರುದೇವ ರವೀಂದ್ರನಾಥ ಠಾಗೋರ್ ಹಾಗೂ ಮಹಾತ್ಮಾ ಗಾಂಧೀಜಿ ಅಹಿಂಸಾ ಜ್ಯೋತಿಯ ವಾಹಕರಾಗಿದ್ದರು.

ಆ ಜ್ಯೋತಿಯು ಇನ್ನೂ ಬೆಳಗಬೇಕಾಗಿದೆ ಹಾಗೂ ನಮಗೆಲ್ಲರಿಗೂ ಮಾರ್ಗದರ್ಶನ ನೀಡಬೇಕಿದೆ’’ ಎಂದರು.

ಸಮಾಜವನ್ನು ‘ಅವರು’ ಹಾಗೂ ‘ನಾವು’ ಎಂಬುದಾಗಿ ಹಾಗೂ ‘ಪವಿತ್ರ’ ಹಾಗೂ ‘ಅಪವಿತ್ರ’ ಎಂಬುದಾಗಿ ವಿಭಜಿಸುವ ಕೊಳಕು ಮನಸ್ಥಿತಿಯನ್ನು ನಾವು ತೊಡೆದುಹಾಕಬೇಕಾಗಿದೆಯೆಂದು ರಾಷ್ಟ್ರಪತಿ ಅಭಿಪ್ರಾಯಿಸಿದರು.

Write A Comment