ಕರ್ನಾಟಕ

ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ: ಸಿದ್ದರಾಮಯ್ಯ

Pinterest LinkedIn Tumblr

CM Siddaramaiah along with Ministers K J George and H Anjaneya offers floral tribute to Kengal Hanumanthaiah’s portrait on occasion of the 35th Death Anniversary commemoration of Kengal Hanumanthaiah at Vidhana Soudha in Bengaluru on Tuesday Dec 01 2015 - KPN ### Kengal Hanumanthaiah35th Death Anniversary commemoration

ಬೆಂಗಳೂರು, ಡಿ.1: ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರ ಸರಕಾರದ ಸಚಿವರಾಗಿ ಕೆಂಗಲ್ ಹನುಮಂತಯ್ಯ ತಮ್ಮ ದಕ್ಷ ಆಡಳಿತದಿಂದ ಜನಮನ್ನಣೆ ಗಳಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಕೆಂಗಲ್ ಹನುಮಂತಯ್ಯ ನವರ 35ನೆ ಪುಣ್ಯಸ್ಮರಣೆ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಅವರ ಪ್ರತಿಮೆ ಬಳಿ ಪುಷ್ಪನಮನ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಮಾತನಾಡಿದರು.

ದೇಶವು ಸಂವಿಧಾನವನ್ನು ಒಪ್ಪಿಕೊಂಡ ನಂತರ 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಗೆದ್ದು ವಿಶಾಲ ಕರ್ನಾಟಕಕ್ಕೆ ಕೆಂಗಲ್ ಹನುಮಂತ ಯ್ಯ ಮುಖ್ಯಮಂತ್ರಿಯಾದರು. ಅವರನ್ನು ವಿಧಾನಸೌಧದ ಶಿಲ್ಪಿ ಎಂದು ಕರೆಯುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಈಗಿರುವ ಹೈಕೋರ್ಟ್ ಅನ್ನು ಅಠಾರ ಕಚೇರಿ ಎಂದು ಕರೆಯಲಾಗುತ್ತಿತ್ತು. ಅಲ್ಲಿಂದಲೇ ರಾಜ್ಯದ ಆಡಳಿತವನ್ನು ನಡೆಸುತ್ತಿದ್ದರು. ಆನಂತರ, ವಿಧಾನಸೌಧದ ಪರಿಕಲ್ಪನೆ ಅವರಲ್ಲಿ ಮೂಡಿತು. ಜೈಲಿನಲ್ಲಿದ್ದ ಕೈದಿಗಳನ್ನು ಬಳಸಿಕೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ದೇಶದಲ್ಲೇ ಸುಂದರವಾದ ವಿಧಾನಸೌಧವನ್ನು ನಿರ್ಮಿಸಿದರು ಎಂದು ಅವರು ಬಣ್ಣಿಸಿದರು.

ಆಡಳಿತ ವ್ಯವಸ್ಥೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕತೆಗೆ ಆದ್ಯತೆ ನೀಡಿದ್ದ ಕೆಂಗಲ್ ಹನುಮಂತಯ್ಯ, ವಿಧಾನಸೌಧದ ಪ್ರವೇಶ ದ್ವಾರದ ಬಳಿ ‘ಸರಕಾರದ ಕೆಲಸ ದೇವರ ಕೆಲಸ’ ಎಂದು ಬರೆಸಿದರು. ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಅಪಾರವಾದ ಕೊಡುಗೆ ಯನ್ನು ಅವರು ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೆಂಗಲ್ ಹನುಮಂತಯ್ಯನವರಿಗೆ ಮೇಷ್ಟ್ರು ಆಗಬೇಕು ಎಂಬ ಆಸೆಯಿತ್ತು. ಆದುದರಿಂದಲೇ ವಾರದಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ ಅವರು ಮಕ್ಕಳಿಗೆ ಪಾಠ ಮಾಡಲು ಹೋಗುತ್ತಿದ್ದರು. ಮುಖ್ಯಮಂತ್ರಿಯಾದ ನಂತರವೂ ಅವರು ತಮ್ಮ ಈ ಚಟುವಟಿಕೆಯನ್ನು ಮುಂದುವರಿಸಿದ್ದರು ಎಂದು ಅವರು ಹೇಳಿದರು.

ವಿಧಾನಪರಿಷತ್ ಚುನಾವಣೆ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮ ಗೊಳಿಸುವ ಸಂಬಂಧ ಹೈಕಮಾಂಡ್ ಜೊತೆ ಚರ್ಚಿಸಲು ಇಂದು ಸಂಜೆ ಹೊಸದಿಲ್ಲಿಗೆ ತೆರಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹಾಲಿ ಸದಸ್ಯರಿಗೆ ಟಿಕೆಟ್ ನೀಡುವುದು ಸೇರಿದಂತೆ ಎಲ್ಲ ವಿಚಾರಗಳನ್ನು ಬುಧವಾರ ಅಂತಿಮಗೊ ಳಿಸಲಾಗುವುದು. ಅಭ್ಯರ್ಥಿಗಳ ಪಟ್ಟಿಗೆ ವರಿಷ್ಠರ ಒಪ್ಪಿಗೆ ಪಡೆದು ಬೆಂಗಳೂರಿನಲ್ಲಿ ಪ್ರಕಟ ಮಾಡಲಾಗುವುದು ಎಂದು ಅವರು ತಿಳಿಸಿದರು.

ಉಪ ಲೋಕಾಯುಕ್ತ ಹುದ್ದೆಗೆ ನ್ಯಾ.ಮಂಜುನಾಥ್ ಹೆಸರನ್ನು ರಾಜ್ಯಪಾಲರು ತಿರಸ್ಕರಿ ಸಿರುವ ಹಿನ್ನೆಲೆಯಲ್ಲಿ ಬೇರೊಬ್ಬರ ಹೆಸರನ್ನು ಶಿಫಾರಸು ಮಾಡಲು ಶೀಘ್ರದಲ್ಲೇ ಸದನ ನಾಯಕರ ಸಭೆ ಕರೆದು ಚರ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಎಚ್.ಆಂಜನೇಯ, ವಿನಯಕುಮಾರ್ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.

Write A Comment