ಕರ್ನಾಟಕ

ಕಾಡಿನಲ್ಲಿ ‘ಪದ್ಮವಿಭೂಷಣ’ ಪದಕ ಹುಡುಕಲು ಪೊಲೀಸರ ಹರಸಾಹಸ; ಮೆಟಲ್ ಡಿಟೆಕ್ಟರ್, ಮ್ಯಾಗ್ನಟಿಕ್ ಯಂತ್ರ ಬಳಸಿ ಶೋಧ ಕಾರ್ಯ

Pinterest LinkedIn Tumblr

kuvempu homeಶಿವಮೊಗ್ಗ, ಡಿ.1: ರಾಷ್ಟ್ರಕವಿ ದಿವಂಗತ ಕುವೆಂಪುರವರ ‘ಕವಿಮನೆ’ಯಿಂದ ಪದಕಗಳನ್ನು ಅಪಹರಿಸಿ ಪರಾರಿಯಾಗುವ ವೇಳೆ, ಕಳವು ಆರೋಪಿಯು ಕಾಡಿನಲ್ಲಿ ಕಳೆದುಕೊಂಡಿರುವ ‘ಪದ್ಮವಿಭೂಷಣ’ ಪದಕದ ಶೋಧ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ. ಆದರೆ ಇಲ್ಲಿಯವರೆಗೂ ಪದಕ ಪತ್ತೆಯಾಗಿಲ್ಲ. ಈ ನಡುವೆ ಪೊಲೀಸರು ‘ಮೆಟಲ್ ಡಿಟೆಕ್ಟೆರ್’ ಹಾಗೂ ‘ಮ್ಯಾಗ್ನಟಿಕ್’ ಯಂತ್ರಗಳನ್ನು ಬಳಸಿ ಪದಕದ ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.

ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್‌ರವರು ಕೂಡ ಖಚಿತಪಡಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಥಹಳ್ಳಿ ಉಪ ವಿಭಾಗದ ಪೊಲೀಸರು ಪದ್ಮವಿಭೂಷಣ ಪದಕ ಪತ್ತೆ ಕಾರ್ಯವನ್ನು ಮುಂದುವರಿಸಿದ್ದಾರೆ. ಆರೋಪಿ ರೇವಣಸಿದ್ದಪ್ಪ ನೀಡಿದ ಮಾಹಿತಿಯ ಆಧಾರದ ಮೇಲೆ ಆತ ಓಡಾಡಿದ ಜಾಗಗಳಲ್ಲಿ ಪದಕದ ಹುಡುಕಾಟ ನಡೆಸುತ್ತಿದ್ದೇವೆ. ಆದರೆ ಇಲ್ಲಿಯವರೆಗೂ ಪದಕ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಪದಕ ಚಿಕ್ಕ ಗಾತ್ರದಲ್ಲಿರುವುದರಿಂದ ಪತ್ತೆ ಹಚ್ಚುವುದು ವಿಳಂಬವಾಗುತ್ತಿದೆ. ಪದಕ ಪತ್ತೆಗೆ ‘ಡೀಪ್ ಮೆಟಲ್ ಡಿಟೆಕ್ಟೆರ್’ ಹಾಗೂ ‘ಮ್ಯಾಗ್ನಟಿಕ್’ ಯಂತ್ರಗಳನ್ನು ಬಳಸಿ ಶೋಧ ನಡೆಸಲಾರಂಭಿಸಲಾಗಿದೆ. ಶೋಧ ಕಾರ್ಯಾಚರಣೆ ಬಿರುಸುಗೊಂಡಿದೆ ಎಂದು ತಿಳಿಸಿದ್ದಾರೆ.

*ಪೊಲೀಸರ ಹರಸಾಹಸ:
ಕಳೆದ ವಾರ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿರುವ ಕುವೆಂಪು ರವರಿಗೆ ಸೇರಿದ ಕವಿಮನೆಯಲ್ಲಿ ಕಳ್ಳತನ ನಡೆದಿತ್ತು. ಕುವೆಂಪುರವರಿಗೆ 1988ರಲ್ಲಿ ಕೇಂದ್ರ ಸರಕಾರ ನೀಡಿದ್ದ ‘ಪದ್ಮವಿಭೂಷಣ’ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ನೀಡಲಾಗಿದ್ದ ಎರಡು ಪದಕಗಳು ಸೇರಿದಂತೆ ಸಾವಿರ ರೂ. ನಗದನ್ನು ಆರೋಪಿ ಅಪಹರಿಸಿ ಪರಾರಿಯಾಗಿದ್ದ. ಸಿಸಿ ಕ್ಯಾಮರಾದಲ್ಲಿ ಕಳವು ಕೃತ್ಯ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಪೊಲೀಸರು ದಾವಣಗೆರೆ ಜಿಲ್ಲೆಯ ತುರುಚಘಟ್ಟ ಗ್ರಾಮದ ನಿವಾಸಿ ರೇವಣಸಿದ್ದಪ್ಪ ಎಂಬಾತನನ್ನು ಬಂಧಿಸಿದ್ದರು. ‘ಕವಿಮನೆ’ಯಲ್ಲಿ ಕಳ್ಳತನ ಮಾಡುವಂತೆ ಈತನಿಗೆ ಪ್ರಚೋದನೆ ನೀಡಿ, ಹಣ ಕೊಟ್ಟಿದ್ದ ಕವಿಮನೆಯ ಅಟೆಂಡರ್ ಹಾಗೂ ಪದಕಗಳನ್ನು ಖರೀದಿಸಿದ್ದ ಶಿವಮೊಗ್ಗ ತಾಲೂಕಿನ ವ್ಯಕ್ತಿಯನ್ನು ಕೂಡ ಪೊಲೀಸರು ಸೆರೆ ಹಿಡಿದಿದ್ದರು. ಕಳವು ಮಾಡಲಾಗಿದ್ದ ಪದಕಗಳಲ್ಲಿ ಮೈಸೂರು ವಿ.ವಿ.ಯ ಪದಕಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ‘ಪದ್ಮವಿಭೂಷಣ’ ಪದಕ ಸಿಕ್ಕಿರಲಿಲ್ಲ. ವಿಚಾರಣೆಯ ವೇಳೆ ಪ್ರಮುಖ ಆರೋಪಿ ರೇವಣಸಿದ್ದಪ್ಪನು, ಕವಿಮನೆಯಿಂದ ಕಳವು ಮಾಡಿಕೊಂಡು ಓಡಿ ಹೋಗುವಾಗ ಎಲ್ಲಿಯೋ ಪದಕ ಬೀಳಿಸಿಕೊಂಡಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ. ತನ್ನ ಬಳಿ ಈ ಪದಕವಿಲ್ಲ ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಕಳೆದ ಒಂದು ವಾರದಿಂದ ‘ಪದ್ಮವಿಭೂಷಣ’ ಪದಕದ ಹುಡುಕಾಟ ಆರಂಭಿಸಿದ್ದರು. ಪೊಲೀಸರು ಆರೋಪಿ ಓಡಾಡಿದ್ದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಆದರೆ ಇಲ್ಲಿಯವರೆಗೂ ‘ಪದ್ಮವಿಭೂಷಣ’ ಪದಕ ಮಾತ್ರ ಸಿಕ್ಕಿಲ್ಲ. ಪದಕದ ಪತ್ತೆಗಾಗಿ ಪೊಲೀಸರು ಹರಸಾಹಸ ನಡೆಸುತ್ತಿದ್ದು, ಕಾಡುಮೇಡುಗಳಲ್ಲಿ ಅಲೆದಾಡುತ್ತಿದ್ದಾರೆ.

**ಚಿಕ್ಕ ಗಾತ್ರದ್ದು: ‘ಪದ್ಮವಿಭೂಷಣ’ ಪದಕವು ಕೇವಲ 4.4 ಸೆ.ಮೀ. ಸುತ್ತಳತೆ ಹಾಗೂ 0.6 ಸೆ.ಮೀ. ದಪ್ಪ ಹೊಂದಿದೆ. ಆರೋಪಿ ಪದಕ ಬೀಳಿಸಿಕೊಂಡಿದ್ದಾಗಿ ಹೇಳುತ್ತಿರುವ ಜಾಗವು ಕಾಡು ಪ್ರದೇಶವಾಗಿದೆ. ಪ್ರಸ್ತುತ ಚಳಿಗಾಲದ ಸಮಯವಾಗಿರುವುದರಿಂದ ಮರ-ಗಿಡಗಳ ಎಲೆಗಳು ಉದುರಿ ಬೀಳುತ್ತಿವೆ. ಉದುರಿ ಬಿದ್ದ ಒಣ ಎಲೆಗಳಡಿ ಈ ಚಿಕ್ಕ ಗಾತ್ರದ ‘ಪದ್ಮವಿಭೂಷಣ’ ಪದಕ ಹುಡುಕುವುದು ಕಷ್ಟಸಾಧ್ಯವಾಗಿದ್ದು, ದೊಡ್ಡ ಸಾಹಸದ ಕೆಲಸವಾಗಿದೆ. ಉದುರಿ ಬಿದ್ದಿರುವ ಎಲೆಗಳಡಿ ಪದಕ ಹುಡುಕುವುದು ಕಷ್ಟ ಸಾಧ್ಯವೆಂಬ ಕಾರಣಕ್ಕಾಗಿಯೇ ಪೊಲೀಸ್ ಇಲಾಖೆಯು ‘ಮೆಟಲ್ ಡಿಟೆಕ್ಟೆರ್’ ಹಾಗೂ ‘ಮ್ಯಾಗ್ನಟಿಕ್’ ಯಂತ್ರಗಳನ್ನು ಬಳಸಿ ಪದಕ ಶೋಧ ಕಾರ್ಯ ಮುಂದುವರಿಸಿದೆ. ಇದು ಎಷ್ಟರಮಟ್ಟಿಗೆ ಫಲಪ್ರದವಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

Write A Comment