ಕರ್ನಾಟಕ

ಶ್ರೇಯಸ್ ಫೈನಾನ್ಸ್‌ ಕಂಪೆನಿ ಕೋಟ್ಯಾಂತರ ರೂ.ವಂಚನೆ ಪ್ರಕರಣ; ರಾತ್ರೋರಾತ್ರಿ ಪಲಾಯನ ಮಾಡಿ ತಲೆಮರೆಸಿಕೊಂಡಿದ್ದ ದಂಪತಿ ಬಂಧನ

Pinterest LinkedIn Tumblr

srinivas

ಬೆಂಗಳೂರು: ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಪಡೆದು ತಲೆಮರೆಸಿಕೊಂಡಿದ್ದ ‘ಶ್ರೇಯಸ್ ಫೈನಾನ್ಸ್‌ ಕಂಪೆನಿ’ ಸಂಸ್ಥಾಪಕರಾದ ಎಂ. ಶ್ರೀನಿವಾಸ್ (63) ಮತ್ತು ಆತನ ಪತ್ನಿ ಬಿ.ಜಿ. ಪುಷ್ಪಲತಾಳನ್ನು (55) ಜಯನಗರ ಪೊಲೀಸರು ಬಂಧಿಸಿದ್ದಾರೆ.

ಜಯನಗರದ ಐದನೇ ಬ್ಲಾಕ್‌ನಲ್ಲಿ ಶ್ರೇಯಸ್ ಫೈನಾನ್ಸ್ ಇನ್ವೆಸ್ಟ್‌ಮೆಂಟ್, ಶ್ರೇಯಸ್ ಚಿಟ್ಸ್ ಹಾಗೂ ಶ್ರೇಯಸ್ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್‌ ಆರಂಭಿಸಿದ್ದ ಆರೋಪಿಗಳು, ದುಪ್ಪಟ್ಟು ಬಡ್ಡಿ ಕೊಡುವ ಆಮಿಷವೊಡ್ಡಿ ಹೂಡಿಕೆದಾರರಿಂದ ಹಣ ಸಂಗ್ರಹಿಸಿದ್ದರು.

ಆರಂಭದಲ್ಲಿ ಕಾಲಕಾಲಕ್ಕೆ ಹೂಡಿಕೆದಾರರಿಗೆ ಬಡ್ಡಿ ಮತ್ತು ಚೀಟಿ ಹಣ ಪಾವತಿಸುತ್ತಿದ್ದ ದಂಪತಿ, ನಂತರ ಸಬೂಬು ಹೇಳತೊಡಗಿದರು. ಈ ಕುರಿತು ಗಲಾಟೆ ಮಾಡಿದ್ದ ಕೆಲ ಹೂಡಿಕೆದಾರರು ಹಣಕ್ಕಾಗಿ ಮನೆ ಮತ್ತು ಕಚೇರಿಗೂ ನಿತ್ಯ ಬಂದು ಜಗಳ ಮಾಡುತ್ತಿದ್ದರು. ಹಾಗಾಗಿ ದಂಪತಿ ಅಕ್ಟೋಬರ್ 10ರಂದು ರಾತ್ರೊ ರಾತ್ರಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಪ್ರಭಾಕರ್ ಎಂಬುವವರು ಅಕ್ಟೋಬರ್ 20ರಂದು ದೂರು ಕೊಟ್ಟಿದ್ದರು. ದಂಪತಿ ಪರಾರಿಯಾದ ವಿಷಯ ಗೊತ್ತಾಗುತ್ತಿದ್ದಂತೆ ಮತ್ತಷ್ಟು ಮಂದಿ ದೂರು ದಾಖಲಿಸಿದ್ದರು. ಬಂಧಿತ ದಂಪತಿಯನ್ನು 10 ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ವಂಚನೆಗೆ ಒಳಗಾಗಿರುವವರು ಠಾಣೆಗೆ ಬಂದು ದೂರು ನೀಡಬೇಕು ಎಂದು ಪೊಲೀಸರು ತಿಳಿಸಿದರು.

ಮ್ಯಾನೇಜರ್ ಆಗಿದ್ದ: ಶ್ರೀನಿವಾಸ್ ಆರ್ಯವೈಶ್ಯ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕನಾಗಿದ್ದ. ಸ್ವಂತ ಬ್ಯಾಂಕ್ ಆರಂಭಿಸುವ ಉದ್ದೇಶದಿಂದ 1989ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದ ಆತ, ಶ್ರೇಯಸ್‌ ಹೆಸರಿನಲ್ಲಿ ಫೈನಾನ್ಸ್‌, ಚಿಟ್ಸ್‌ ಹಾಗೂ ಕೋ ಆಪರೇಟಿವ್‌ ಬ್ಯಾಂಕ್ ಆರಂಭಿಸಿದ್ದ. ಅಲ್ಲದೆ, ಪುತ್ರ ಸುದೀಪ್ ಮತ್ತು ಸೊಸೆ ಪ್ರೀತಿ ರಾಮಮೋಹನ್‌ನನ್ನು ನಿರ್ದೇಶಕರನ್ನಾಗಿ ಮಾಡಿದ್ದ.

ಸಾರ್ವಜನಿಕರು ನಿಶ್ಚಿತ ಠೇವಣಿ ಮತ್ತು ಚಿಟ್‌ ಸ್ಕೀಂನಲ್ಲಿ ತಲಾ ರೂ. 1 ಲಕ್ಷದಿಂದ ರೂ. 1 ಕೋಟಿವರೆಗೆ ಈತನ ಬಳಿ ಹಣ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ಈತನ ದಿನದ ವಹಿವಾಟು ರೂ. 25ರಿಂದ ರೂ. 30 ಲಕ್ಷ ಇತ್ತು. ಹೀಗೆ ಸಂಗ್ರಹಿಸಿದ ಹಣವನ್ನು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಸಿದ್ದ. ಜತೆಗೆ, ಹೊಸ ಬಡಾವಣೆಗಳ ನಿರ್ಮಾಣಕ್ಕೂ ಕೈ ಹಾಕಿದ್ದ. ಅಲ್ಲದೆ, ರಿಯಲ್ ಎಸ್ಟೇಟ್‌ ಕುಸಿತ ಕಂಡಿದ್ದರಿಂದ ವಹಿವಾಟು ಒಮ್ಮೆಲೆ ರೂ. 7ರಿಂದ ರೂ. 8 ಲಕ್ಷಕ್ಕೆ ಇಳಿಯಿತು. ಯೋಜನೆಗಳು ಅರ್ಧಕ್ಕೆ ನಿಂತಿದ್ದವು. ತೀವ್ರ ಹಣದ ಸಮಸ್ಯೆ ಉಂಟಾಗಿದ್ದರಿಂದ ದಂಪತಿ ತಲೆಮರೆಸಿಕೊಂಡಿದ್ದರು.

ಆರೋಪಿಗಳ ವಿರುದ್ಧ ಸದ್ಯ ದಾಖಲಾಗಿರುವ ದೂರುಗಳ ಪ್ರಕಾರ, ರೂ. 10 ಕೋಟಿ ವಂಚನೆಯಾಗಿದೆ. ಆದರೆ, ದಂಪತಿ ಸುಮಾರು 2 ಸಾವಿರ ಮಂದಿಯಿಂದ ರೂ. 100 ಕೋಟಿಯಷ್ಟು ಹಣ ಸಂಗ್ರಹಿಸಿ ಮೋಸ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇವರಿಂದ ವಂಚನೆಗೊಳದಾದವರ ಪೈಕಿ ನಿವೃತ್ತ ಹಾಗೂ ಹಾಲಿ ಪೊಲೀಸ್ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು, ಸರ್ಕಾರಿ ಉದ್ಯೋಗಿಗಳು ಹಾಗೂ ಉದ್ಯಮಿಗಳು ಸೇರಿದ್ದಾರೆ ಎಂದು ಪೊಲೀಸರು ಹೇಳಿದರು.

ಬ್ಯಾಂಕಾಕ್‌ನಲ್ಲಿ ಪುತ್ರ: ದಂಪತಿಯ ಪುತ್ರ ಸುದೀಪ್ ವೃತ್ತಿಯಲ್ಲಿ ವಾಸ್ತುಶಿಲ್ಪಿಯಾಗಿದ್ದಾನೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆತ, ಆರು ತಿಂಗಳ ಹಿಂದೆ ರಾಜೀನಾಮೆ ಸಲ್ಲಿಸಿ, ಪತ್ನಿಯೊಂದಿಗೆ ಹಾಂಕಾಂಗ್‌ಗೆ ತೆರಳಿದ್ದಾನೆ. ಅಗತ್ಯವಿದ್ದರೆ ಆತನನ್ನು ವಿಚಾರಣೆಗಾಗಿ ಕರೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸಿಕ್ಕಿ ಬಿದ್ದಿದ್ದು ಹೇಗೆ?
ದಂಪತಿ ಹಣದೊಂದಿಗೆ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬುದಾಗಿ ಗ್ರಾಹಕರು ಹೇಳುತ್ತಿದ್ದರು. ಹಾಗಾಗಿ ಅವರ ಪಾಸ್‌ಪೋರ್ಟ್‌ ಬ್ಲಾಕ್‌ ಮಾಡಿಸಲಾಗಿತ್ತು. ಆದರೆ, ಮನೆ ಖಾಲಿ ಮಾಡಿದ್ದ ದಂಪತಿ, ತಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು, ತಿಂಗಳ ಕಾಲ ತಮಿಳುನಾಡಿಗೆ ಪ್ರವಾಸ ಹೋಗಿದ್ದರು.

ನಗರಕ್ಕೆ ವಾಪಸಾದ ನಂತರ, ಪರಪ್ಪನ ಅಗ್ರಹಾರದ ಕೂಡ್ಲು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಮೊಬೈಲ್ ಕರೆಗಳ ಮೂಲಕ ಪೊಲೀಸರು ನಮ್ಮ ಬೆನ್ನು ಹತ್ತುತ್ತಾರೆ ಎಂಬುದನ್ನು ಅರಿತಿದ್ದ ಆರೋಪಿಗಳು, ತಾವಿದ್ದ ಸ್ಥಳದಲ್ಲಿ ಅಷ್ಟಾಗಿ ಮೊಬೈಲ್ ಬಳಸುತ್ತಿರಲಿಲ್ಲ. ಹಾಗಾಗಿ ಅವರ ಪತ್ತೆ ಸವಾಲಾಗಿ ಪರಿಣಮಿಸಿತ್ತು.

ಈ ಮಧ್ಯೆ, ಅವರು ಬಳಸುತ್ತಿದ್ದ ಸ್ವಿಫ್ಟ್‌ ಕಾರಿನ ನೋಂದಣಿ ಸಂಖ್ಯೆ (ಕೆ.ಎ: 05, ಎಂ.ಆರ್‌: 3602) ಗೊತ್ತಾಯಿತು. ನವೆಂಬರ್‌ 29ರಂದು ಸಂಜೆ ಕೂಡ್ಲು ಸಮೀಪದ ಹೊಸರೋಡ್‌ನಲ್ಲಿ ದಂಪತಿ ಅದೇ ಕಾರಿನಲ್ಲಿ ಹೋಗುತ್ತಿದ್ದಾಗ ಬಂಧಿಸಲಾಯಿತು ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ ಕುಮಾರ್ ತಿಳಿಸಿದರು.

Write A Comment