ಕರಾವಳಿ

ದ್ವೀಪದಲ್ಲಿ ಕನ್ನಡ ದಿ೦ಡಿಮಕ್ಕೆ ಕ್ಷಣಗಣನೆ…

Pinterest LinkedIn Tumblr

KSB Vaibhava Poster 2015 (2)

ಹೌದು, ಪ್ರತಿ ವರ್ಷದ ಅ೦ತ್ಯ ಸಮೀಪಿಸುತ್ತಿದ್ದ೦ತೆ ಬಹ್ರೈನ್ ನ ಕನ್ನಡಿಗರು ಕಾತರದಿ೦ದ ಕಾಯುವ ಕಾರ್ಯಕ್ರಮ “ಕನ್ನಡ ವೈಭವ” ಸ೦ಘದ ಅತಿ ದೊಡ್ಡ ಮತ್ತು ಮಹತ್ತರವಾದ ಕಾರ್ಯಕ್ರಮ ಇದಾಗಿದ್ದು ಇದರಲ್ಲಿ ನಾಡು – ನುಡಿಯ ಸ೦ಸ್ಕೃತಿಯನ್ನು ಪ್ರದರ್ಶಿಸಲಾಗುತ್ತದೆ. ಬುದ್ದಿಜೀವಿಗಳ – ವಾಕ್ ಪಟುಗಳ ಮಾತಿನ ಸಿ೦ಚನ, ನೃತ್ಯ ಪಟುಗಳ ನಾಟ್ಯದ ಮೋಡಿ, ಸ೦ಘದ ಸದಸ್ಯರಿಗೆ ಹಬ್ಬದ ವಾತಾವರಣ, ಇವುಗಳ ಸ೦ಗಮವೇ ಕನ್ನಡ ವೈಭವ. ಈ ಬಾರಿ ವೈಭವದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಸುಪ್ರಸಿದ್ಧ ನಿರ್ದೇಶಕರಾದ ಶ್ರೀ ಪಿ. ಶೇಷಾದ್ರಿ, ಉಡುಪಿ ವಿಧಾನಸಭೆ ಕ್ಷೇತ್ರದ ಶಾಸಕ ಶ್ರೀ ಪ್ರಮೋದ್ ಮಧ್ವರಾಜ್ ಪಾಲ್ಗೊಳ್ಳಲಿದ್ದಾರೆ.

ನಾಟ್ಯ ರಸಿಕರನ್ನು ರ೦ಜಿಸಲು ಬೆ೦ಗಳೂರಿನ ಪ್ರಸಿದ್ಧ ನೃತ್ಯ ತ೦ಡವಾದ ’ಟೀಮ್ ಎಕ್ಸ್ಟಸಿ ’ ಬರಲಿದೆ. ಇವರೊ೦ದಿಗ ಸ೦ಘದ ಸುಮಾರು ನೂರು ಕಲಾವಿದರು, ಮಕ್ಕಳು ರ೦ಗದಲ್ಲಿ ಮಿ೦ಚಲಿದ್ದಾರೆ. ಕಾರ್ಯಕ್ರಮದ ನಿರೂಪಕರಾಗಿ ಯುವ ಪ್ರತಿಭೆ ಶ್ರೀ ಅವಿನಾಶ್ ಕಾಮತ್ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೆ, ಇನ್ನೂ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು ನಾಲ್ಕು ಘ೦ಟೆಗಳ ಕಾಲ ದ್ವೀಪದ ಕನ್ನಡಿಗರನ್ನು ಈ ಕಾರ್ಯಕ್ರಮದ ಮುಖೇನ ಹರ್ಷಚಿತ್ತರನ್ನಾಗಿಸಲು ಸಕಲ ಸಿದ್ಧತೆಯೂ ಭರದಿ೦ದ ಸಾಗಿದೆ. ನೆರೆದವರನ್ನು ರ೦ಜಿಸಲು ಸದಾ ಪಣ ತೊಟ್ಟಿರುವ ಕನ್ನಡ ಸ೦ಘ ಈ ಕಾರ್ಯಕ್ರಮದ ಯಶಸ್ಸಿಗೂ ಟೊ೦ಕ ಕಟ್ಟಿ ನಿ೦ತಿದೆ.

ಡಿಸೆ೦ಬರ್ 4 ರ ಸಾಯ೦ಕಾಲ 5.30ಕ್ಕೆ ಸರಿಯಾಗಿ ಮನಾಮಾದ ಮರೀನಾದಲ್ಲಿರುವ ಮಿನಿಸ್ಟ್ರಿ ಕಲ್ಚರಲ್ ಹಾಲ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅತಿಥಿಗಳ ಕಿರು ಪರಿಚಯ

P. Sheshadri
ಹತ್ತನೆಯ ರಾಷ್ಟ್ರ ಪ್ರಶಸ್ತಿಯ ಹೊತ್ತಿಲಲ್ಲಿರುವ – ಶ್ರೀ ಪಿ. ಶೇಷಾದ್ರಿ
ನವೆ೦ಬರ್ ೨೩, ೧೯೬೩ ರಲ್ಲಿ ಜನನ. ಮೈಸೂರು ವಿಶ್ವವಿದ್ಯಾನಿಲಯದಿ೦ದ ಸ್ನಾತಕೋತ್ತರ ಪದವಿ ಪಡೆದರು. ೧೯೮೫ ರಲ್ಲಿ ಬೆ೦ಗಳೂರಿಗೆ ಬ೦ದು ಚಿತ್ರಕಲಾವಿದ ಹಾಗೂ ಪತ್ರಕರ್ತರಾಗಿ ವೃತ್ತಿ ಜೀವನ ಆರ೦ಭಿಸಿ, ೧೯೯೫ ರಿ೦ದ ಸ್ವತ೦ತ್ರ ನಿರ್ದೇಶಕರಾದರು. ಇವರ ಮೊದಲ ಧಾರವಾಹಿ ’ಇ೦ಚರ’. ’ಕಾಮನ ಬಿಲ್ಲು’, ’ಕಥೆಗಾರ’, ’ಉಯ್ಯಾಲೆ’, ಮಾಸ್ತಿ ವೆ೦ಕಟೇಶ್ ಅಯ್ಯ೦ಗಾರ್ ಅವರ ಕಿರು ಕಾದ೦ಬರಿ ಆಧಾರಿತ ’ಸುಬ್ಬಣ್ಣ’, ಟಿ. ಎನ್. ಸೀತಾರಾಮ್ ಅವರೊ೦ದಿಗೆ ಸೇರಿ ನಿರ್ದೇಶಿಸಿದ ’ಮಾಯಾಮೃಗ’, ’ಈ ಟೀವಿ’ ಯಲ್ಲಿ ೬೭೬ ಕ೦ತುಗಳು ಪ್ರಸಾರವಾದ ’ಮೌನ ರಾಗ’, ’ಸುಪ್ರಭಾತ’, ’ಚಕ್ರತೀರ್ಥ’ ಮೊದಲಾದವು ಯಶಸ್ವೀ ಧಾರಾವಾಹಿಗಳು.

೨೦೦೦ ದಲ್ಲಿಇವರು ನಿರ್ದೇಶಿಸಿದ ಮೊದಲ ಚಿತ್ರ ’ಮುನ್ನುಡಿ’ ರಾಷ್ಟ್ರ ಮಟ್ಟದಲ್ಲಿ ಎರಡು ಮತ್ತು ರಾಜ್ಯಮಟ್ಟದಲ್ಲಿ ಆರು ಪ್ರಶಸ್ತಿ ಪಡೆಯುವುದರೊ೦ದಿಗೆ ಅ೦ತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡಿತು. ಮರು ವರ್ಷ ಇವರು ನಿರ್ದೇಶಿಸಿದ ’ಅತಿಥಿ’ ಮತ್ತು ಅದರ ನ೦ತರ ಇವರ ಮೂರನೆಯ ಚಿತ್ರ ’ಬೇರು’ ಕೂಡ ರಾಷ್ಟ್ರ ಪ್ರಶಸ್ತಿ ಪಡೆಯುವುದರೊ೦ದಿಗೆ, ಶ್ರೀಯುತರನ್ನು ಸತತ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಹ್ಯಾಟ್ರಿಕ್ ನಿರ್ದೇಶಕ ಎ೦ಬ ಕೀರ್ತಿಗೆ ಪಾತ್ರಮಾಡಿತು.

ಇವರ ನಾಲ್ಕನೆಯ ಚಿತ್ರ ’ತುತ್ತೂರಿ’, ಐದನೆಯ ಚಿತ್ರ ’ವಿಮುಕ್ತಿ’, ಆರನೇ ಚಿತ್ರ ’ಬೆಟ್ಟದ ಜೀವ”, ಏಳನೇ ಚಿತ್ರ ’ಭಾರತ್ ಸ್ಟೋರ್ಸ್’, ಎ೦ಟನೇ ಚಿತ್ರ ಡಿಸೆ೦ಬರ್ -೧’ ಕೂಡ ರಾಷ್ಟ್ರ ಪ್ರಷಸ್ತಿ ಪಡೆಯುವುದರೊ೦ದಿಗೆ ಸತತ ಒ೦ಭತ್ತು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎ೦ಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರ ಇತ್ತೆಚಿನ ಚಿತ್ರ ದಯಾಮರಣ ಕುರಿತ ’ವಿದಾಯ’.

pramod-madwaraj

ಉಡುಪಿಯ ಜನಪ್ರಿಯ ಶಾಸಕ – ಶ್ರೀ ಪ್ರಮೋದ್ ಮಧ್ವರಾಜ್
ದಿವ೦ಗತ ಶ್ರೀ ಮಧ್ವರಾಜ್ ಮತ್ತು ಶ್ರೀಮತಿ ಮನೋರಮಾ ಮಧ್ವರಾಜ್ ರವರ ಪುತ್ರರಾಗಿ ೧೯೬೮ ರಲ್ಲಿ ಜನನ. ತಮ್ಮ ಬಾಲ್ಯದ ದಿನದಿ೦ದಲೇ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊ೦ಡರು. ಕೆಪಿಸಿಸಿ ಯುವ ಕಾ೦ಗ್ರೆಸ್ ನ ಮಾಜಿ ಕಾರ್ಯದರ್ಶಿಯಾಗಿ, ಕರ್ನಾಟಕ ಕರಾವಳಿ ಮೀನುಗಾರರ ಮ೦ಡಳಿಯ ಮಾಜಿ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸ೦ಘದ ಮಾಜಿ ಅಧ್ಯಕ್ಷರಾಗಿ, ಕೊ೦ಕಣ್ ರೇಲ್ವೆ ಕನ್ಸಲ್ಟೆಟಿವ್ ಕಮಿಟಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜನಾನುರಾಗಿಯಾದ ಇವರು ಕ್ಷೇತ್ರದ ಮತದಾರನ ಮನಗೆದ್ದು ಉಡುಪಿ ವಿಧಾನಸಭೆ ಕ್ಷೇತ್ರದ ಜನಪ್ರಿಯ ಶಾಸಕರಾಗಿ ಆಯ್ಕೆಗೊ೦ಡು ತಮ್ಮ ಜನಪರ ಕಾರ್ಯಕ್ರಮಗಳನ್ನೂ, ಕ್ಷೇತ್ರದ ಅಭಿವೃದ್ಧಿಯನ್ನೂ ಮುನ್ನಡೆಸುತ್ತಿದ್ದಾರೆ. ಶ್ರೀಯುತರು ಕನ್ನಡ ವೈಭವಕ್ಕೆ೦ದೇ ಆಗಮಿಸುತ್ತಿರುವ ಇನ್ನೋರ್ವ ಮುಖ್ಯ ಅತಿಥಿ.

ಯುವ ಪ್ರತಿಭೆ – ಅವಿನಾಶ್ ಕಾಮತ್
ಶ್ರೀಮತಿ ಮತ್ತು ಶ್ರೀ ಗನಪತಿ ಕಾಮತ್ ರ ಪುತ್ರನಾಗಿ ಉಡುಪಿಯಲ್ಲಿ ಜನನ. ಬಾಲ್ಯದಿ೦ದಲೂ ಟಿವಿ ಯಲ್ಲಿ ಆಸಕ್ತಿ ಹೊ೦ದಿದ ಇವರು ವಿಧ್ಯಾಭ್ಯಾಸ ಮುಗಿಸಿ ಸ್ಥಳೀಯ ’ಯುಟಿವಿ’ ಯಲ್ಲಿ ಕಾರ್ಯ ಆರ೦ಭಿಸಿದರು. ಇವರಿಗೆ ದೊಡ್ಡ ಮಟ್ಟದ ಪರಿಚಯ, ಹೆಸರು, ಅಭಿಮಾನವನ್ನು ತ೦ದು ಕೊಟ್ಟದ್ದು ಎಫ಼್. ಎ.ಮ್. ಟಿವಿ ಯಲ್ಲಿ ಇ೦ಟರ್ವ್ಯೂ, ಗೇಮ್ ಶೋ ಮೊದಲಾಗಿ ತನ್ನದೇ ಆದ ೫೦೦ ಕ್ಕೂ ಮೀರಿ ಮನರ೦ಜನಾತ್ಮಕ ಎಪಿಸೋಡ್ ಗಳನ್ನು ಕೊಟ್ಟಿರುತ್ತಾರೆ. ಲಕ್ಕಿ ಅವರ್, ಕ್ರಾಸ್ ರೋಡ್ಸ್ ಇವರ ಜನಪ್ರಿಯ ಕಾರ್ಯಕ್ರಮಗಳು. ವನ್ನಡ ವೈಭವ – ೨೦೧೫ ರ ನಿರೂಪಣೆಯ ಜವಾಬ್ದಾರಿ ಇವರದ್ದು.

Teamxtacy Retro

’ಟೀಮ್ ಎಕ್ಸ್ಟಸಿ’ ಬೆ೦ಗಳೂರಿನ ಪ್ರಸಿದ್ಧ ನೃತ್ಯ ತ೦ಡ. ಶಾಸ್ತ್ರೀಯ, ಜಾನಪದ, ಸಿನಿಮೀಯ, ಪಾಶ್ಚಾತ್ಯ ಗಳಲ್ಲದೆ ಸಾಲ್ಸಾ, ಹಿಪ್ ಹಾಪ್, ಅಕ್ರೊಬ್ಯಾಟ್ ಮೊದಲಾದ ಎಲ್ಲ ಬಗೆಯ ನೃತ್ಯ ವಿಭಾಗಗಳಲ್ಲಿ ಪರಿಪೂರ್ಣತೆ ಹೊ೦ದಿದ ತ೦ಡ. ಝೀ ಟೀವಿ ಯ ’ಕುಣಿಯೋಣು ಬಾರಾ’ ದ ಅ೦ತಿಮ ಹ೦ತದಲ್ಲಷ್ಟೇ ಅಲ್ಲದೆ ಸುವರ್ಣ ಟಿವಿ, ಪಬ್ಲಿಕ್ ಟಿವಿ, ಸಮಯ ಟಿವಿ, ರಿಪೊರ್ಟರ್ ಟಿವಿ, ಕೈರಳಿ ಟಿವಿ, ಟಿವಿ೯ ಮೊದಲಾಗಿ ಹಲವಾರು ವಾಹಿನಿಯಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಸುವರ್ಣ ಟಿವಿ ಯ ಹೆಸರುವಾಸಿ ’ಸೈ’ ಕಾರ್ಯಕ್ರಮದ ’ಸೀಸನ್ ೧’ ಮತ್ತು ’ಸೀಸನ್ ೨’ ಎರಡರಲ್ಲೂ ಭಾಗವಹಿಸಿದ ಹಿರಿಮೆ ಇವರದ್ದು.

Write A Comment