ಕರ್ನಾಟಕ

ಕ್ರೈಸ್ತ ಧರ್ಮಗುರು ಥಾಮಸ್ ಕೊಲೆ ಪ್ರಕರಣ: ಅಮಾಯಕರ ಬಿಡುಗಡೆಗೆ ಆಗ್ರಹಿಸಿ ಬೃಹತ್ ರ್ಯಾಲಿ

Pinterest LinkedIn Tumblr

Protest______ಬೆಂಗಳೂರು, ನ.29: ಕ್ರೈಸ್ತ ಧರ್ಮಗುರು ಕೆ.ಜೆ.ಥಾಮಸ್ ಕೊಲೆ ಪ್ರಕರಣ ಸಂಬಂಧ ಪೊಲೀಸರು ಅಮಾಯಕರನ್ನು ಬಂಧಿಸಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪುರಭವನದಿಂದ ಸಿಎಂ ನಿವಾಸಕ್ಕೆ ಬೃಹತ್ ರ್ಯಾಲಿ ನಡೆಸಿದರು.

ರವಿವಾರ ಇಲ್ಲಿನ ಪುರಭವನದಿಂದ ಮುಖ್ಯಮಂತ್ರಿ ನಿವಾಸಕ್ಕೆ ರ್ಯಾಲಿ ಆರಂಭಿಸಿದ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಥಾಮಸ್ ಕೊಲೆ ಪ್ರಕರಣದಲ್ಲಿ ಬಂಧಿಸಿರುವ ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒಕ್ಕೊರಳಿನಿಂದ ಒತ್ತಾಯಿಸಿದರು.

ಕುತಂತ್ರ: ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್‌ರ ಕುತಂತ್ರದಿಂದಲೇ ಥಾಮಸ್ ಕೊಲೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿನ ಕನ್ನಡ ಕ್ರೈಸ್ತ ಧರ್ಮಗುರುಗಳ ಧ್ವನಿಯನ್ನು ಅಡಗಿಸಲು ಬರ್ನಾಡ್ ಮೊರಾಸ್ ಕನ್ನಡ ಕ್ರೈಸ್ತರ ಮೇಲೆ ಪೊಲೀಸರ ಮೂಲಕ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಾ.ಡಾ.ಐ.ಅಂತಪ್ಪ ಮತ್ತು ರಫಾಯಲ್ ರಾಜ್ ಅವರನ್ನು ಬಂಧಿಸಲಾಗಿದೆ ಎಂದು ಅವರು ದೂರಿದರು.

ಪೊಲೀಸರು ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಅವರ ಕೈಗೊಂಬೆಗಳಂತೆ ವರ್ತಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಮರುಳಸಿದ್ದಪ್ಪ, ಕ್ರೈಸ್ತ ಧರ್ಮಗುರು ಥಾಮಸ್ ಕೊಲೆ ಪ್ರಕರಣ ಗೊಂದಲದಿಂದ ಕೂಡಿದೆ. ಆದುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಮತ್ತು ಸಚಿವ ಕೆ.ಜೆ.ಜಾರ್ಜ್ ಸೇರಿ ಕನ್ನಡ ಕ್ರೈಸ್ತರ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಥಾಮಸ್ ಕೊಲೆ ಪ್ರಕರಣದಲ್ಲಿ ಕನ್ನಡ ಕ್ರೈಸ್ತ ಧರ್ಮಗುರುಗಳ ವಿರುದ್ಧ ಸಂಚು ಹೆಣೆಯಲಾಗಿದೆ ಎಂದು ಆಪಾದಿಸಿದರು.

ಫಾದರ್ ಥಾಮಸ್ ಕೊಲೆ ಪ್ರಕರಣದಲ್ಲಿ ಬಂಧಿಸಿರುವ ಎಲ್ಲ ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು. ಮೊರಾಸ್ ಹೊರಡಿಸಿರುವ ಕನ್ನಡ ವಿರೋಧಿ ಸುತ್ತೋಲೆಗಳನ್ನು ವಾಪಸ್ ಪಡೆಯಬೇಕು. ರಾಜ್ಯದ ಎಲ್ಲ ಚರ್ಚ್‌ಗಳಲ್ಲಿ ಕನ್ನಡ ಭಾಷೆಯಲ್ಲೇ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕು. ಕನ್ನಡ ಕ್ರೈಸ್ತರ ಮೇಲಿನ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು.

ಆ ಬಳಿಕ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಸಾಹಿತಿಗಳು ಸಿಎಂ ಸಿದ್ದರಾಮಯ್ಯನವರಿಗೆ ಮನವಿಯನ್ನು ಸಲ್ಲಿಸಿದರು. ಮುಖಂಡರ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಥಾಮಸ್ ಕೊಲೆ ಪ್ರಕರಣ ಸಂಬಂಧ ತನಿಖಾಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು, ಪ್ರಕರಣದ ಮರುತನಿಖೆಗೆ ಆದೇಶಿಸಲಾಗುವುದೆಂದು ಭರವಸೆ ನೀಡಿದ್ದಾರೆಂದು ಮುಖಂಡರು ತಿಳಿಸಿದ್ದಾರೆ.

ರ್ಯಾಲಿಯಲ್ಲಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್, ಮಾನವ ಹಕ್ಕುಗಳ ಹೋರಾಟಗಾರ ಪ್ರೊ.ನಗರಿಬಾಬಯ್ಯ, ಪ್ರೊ.ನಗರಗೆರೆ ರಮೇಶ್, ಲೇಖಕ ಕೋಟಿಗಾನಹಳ್ಳಿ ರಾಮಯ್ಯ, ಮುಖಂಡರಾದ ಸಮೀವುಲ್ಲಾ ಖಾನ್, ಪಾರ್ವತೀಶ್, ತಿಮ್ಮಯ್ಯ, ತಿಮ್ಮೇಶ್, ಮಾಯಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Write A Comment