ರಾಷ್ಟ್ರೀಯ

ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಯೋಚಿಸಿದ ಕಲಾಂ

Pinterest LinkedIn Tumblr

abdul-kalamಭುವನೇಶ್ವರ, ನ.29: 2006ರಲ್ಲಿ ಬಿಹಾರ ವಿಧಾನಸಭೆಯನ್ನು ವಿಸರ್ಜಿಸಿ ತಾನು ಹೊರಡಿಸಿದ್ದ ಘೋಷಣೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದ ಸಂದರ್ಭದಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ, ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಲು ಯೋಚಿಸಿದ್ದರೆಂದು ಅವರ ಮಾಜಿ ಪತ್ರಿಕಾ ಕಾರ್ಯದರ್ಶಿ ಎಸ್.ಎಂ.ಖಾನ್ ಬಹಿರಂಗಪಡಿಸಿದ್ದಾರೆ.

2006ರಲ್ಲಿ ಆಗಿನ ಬಿಹಾರ ರಾಜ್ಯಪಾಲ ಬೂಟಾಸಿಂಗ್ ಅವರು ವಿಧಾನಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಿದ ಬಳಿಕ, ಕೇಂದ್ರ ಸಂಪುಟವು ತನ್ನ ಅನುಮೋದನೆಯನ್ನು ನೀಡಿತ್ತು ಹಾಗೂ ಅದು ಆದೇಶವನ್ನು ಕಲಾಂ ಅವರ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಆಗ ಕಲಾಂ ಅವರು ರಶ್ಯ ಪ್ರವಾಸದಲ್ಲಿದ್ದರು.ಕಲಾಂ ಮೊದಲಿಗೆ ಬಿಹಾರ ವಿಧಾನಸಭೆ ವಿಸರ್ಜಿಸುವ ಕುರಿತಾದ ಘೋಷಣೆಗೆ ಒಲ್ಲದ ಮನಸ್ಸಿನಿಂದಲೇ ಸಹಿ ಹಾಕಿದ್ದರೆಂದು ಅವರು ಹೇಳಿದ್ದರು.

ಖಾನ್ ಅವರು ಭುವನೇಶ್ವರದ ಎಸ್‌ಓಎ ವಿವಿಯಲ್ಲಿ ರವಿವಾರ ‘ಶ್ರೇಷ್ಠ ಮಾನವ ಆತ್ಮದೊಂದಿಗೆ ನನ್ನ ದಿನಗಳು’’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ, ಕಲಾಂ ಜೊತೆಗಿನ ತನ್ನ ಒಡನಾಟದ ದಿನಗಳನ್ನು ಸ್ಮರಿಸಿಕೊಂಡರು. ಬಿಹಾರ ವಿಧಾನಸಭೆಯನ್ನು ವಿಸರ್ಜಿಸಿ, ತಾನು ಹೊರಡಿಸಿದ ಘೋಷಣೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದಾಗ ಕಲಾಂ ಅವರಿಗೆ ಪಶ್ಚಾತ್ತಾಪವಾಗಿತ್ತು. ಆಗ ಅವರಿಗೆ ತಾನು ಸಂಪುಟದ ನಿರ್ಧಾರವನ್ನು ತಿರಸ್ಕರಿಸಬೇಕಿತ್ತು ಹಾಗೂ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು ಎಂಬ ಯೋಚನೆ ಮೂಡಿತ್ತು ಎಂದು ಖಾನ್ ಹೇಳಿದರು. ಪ್ರಸ್ತುತ ಖಾನ್ ಅವರು ಭಾರತೀಯ ಸುದ್ದಿಪತ್ರಿಕೆಗಳ ಮಹಾ ನೋಂದಣಿ ನಿರ್ದೇಶಕರಾಗಿದ್ದಾರೆ.

ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಕಲಾಂ ಅವರು ರಾಮೇಶ್ವರಂನಲ್ಲಿರುವ ತನ್ನ ಹಿರಿಯ ಸೋದರನ ಜೊತೆಗೂ ಚರ್ಚಿಸಿದ್ದರು. ಆದರೆ ಅಂತಹ ಯಾವುದೇ ನಡೆಯು ಅಂತಿಮವಾಗಿ ಸಂವಿಧಾನದ ಬಿಕ್ಕಟ್ಟಿಗೆ ಕಾರಣವಾಗುವುದೆಂಬುದನ್ನು ಮನಗಂಡು ಅವರು ರಾಜೀನಾಮೆ ನಿರ್ಧಾರದಿಂದ ದೂರಸರಿದಿದ್ದರು ಎಂದು ಖಾನ್ ಹೇಳಿದ್ದಾರೆ.

ಅಧುನಿಕ ತಂತ್ರಜ್ಞಾನದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಕಲಾಂ ಒಂದೊಮ್ಮೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಅವರ ಸಂಪುಟ ಸಹದ್ಯೋಗಿಗಳಿಗೆ 2020ರ ವೇಳೆಗೆ ಭಾರತ ಯಾವ ಮಟ್ಟಿಗೆ ಅಭಿವೃದ್ಧಿ ಹೊಂದಬೇಕೆಂಬ ಕುರಿತು ಎರಡೂವರೆ ತಾಸುಗಳ ಉಪನ್ಯಾಸವನ್ನೂ ನೀಡಿದ್ದರೆಂದು ಖಾನ್ ಸ್ಮರಿಸಿಕೊಂಡಿದ್ದಾರೆ

Write A Comment