ಮನೋರಂಜನೆ

ಮಕಾವ್ ಓಪನ್: ಸಿಂಧು ಹ್ಯಾಟ್ರಿಕ್

Pinterest LinkedIn Tumblr

Sivndhuಮಾಕಾವು, ನ.29: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಮಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ರವಿವಾರ ಪ್ರಶಸ್ತಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ.
ಫೈನಲ್‌ನಲ್ಲಿ ಜಪಾನ್‌ನ ಆರನೆ ಶ್ರೇಯಾಂಕದ ಮಿನಾತ್ಸು ಮಿತಾನಿ ಅವರನ್ನು 21-9, 21-23, 21-14 ಅಂತರದಲ್ಲಿ ಮಣಿಸಿ ಮೂರನೆ ಬಾರಿ ಪ್ರಶಸ್ತಿ ಬಾಚಿಕೊಂಡರು.
ಸಿಂಧು 2013 ಮತ್ತು 2014ರಲ್ಲಿ ಪ್ರಶಸ್ತಿ ಜಯಿಸಿದ್ದರು. ಇದೀಗ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ಮೂಲಕ ದಾಖಲೆ ಬರೆದಿದ್ದಾರೆ. ಸಿಂಧು ಮತ್ತು ಎದುರಾಳಿ ಮಿನಾತ್ಸು ನಡುವೆ ಒಂದು ಗಂಟೆ ಹಾಗೂ ಆರು ನಿಮಿಷಗಳ ಕಾಲ ಪ್ರಬಲ ಹಣಾಹಣಿ ನಡೆಯಿತು.

ವಿಶ್ವದ 12ನೆ ಶ್ರೆಯಾಂಕದ ಆಟಗಾರ್ತಿ ಸಿಂಧು ಅವರು ತನ್ನ ಎದುರಾಳಿ ಮಿನಾತ್ಸು ವಿರುದ್ಧ ಪಂದ್ಯದ ಆರಂಭದಿಂದಲೇ ಮೇಲುಗೈ ಸಾಧಿಸಿ, ಪ್ರಶಸ್ತಿಯನ್ನು ಜಯಿಸಿದರು. ಸಿಂಧು ಅವರ ಬಿರುಸಿನ ಆಟದ ಮುಂದೆ ಮಿನಾತ್ಸು ಕಂಗಾಲಾದರು. ಅವರಿಗೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಕೆಯ ತಪ್ಪು ಹೆಜ್ಜೆಗಳು ಸಿಂಧುವಿಗೆ ವರದಾನವಾಗಿ ಪರಿಣಮಿಸಿತು.
ನಿರ್ಣಾಯಕ ಗೇಮ್‌ನಲ್ಲಿ ಸಿಂಧು ಮಿನಾತ್ಸುವಿಗೆ ಪಾಯಿಂಟ್ ಗಳಿಸುವ  ಅವಕಾಶವನ್ನು ನೀಡದೆ ಆಕೆಯನ್ನು ಒತ್ತಡಕ್ಕೆ ಸಿಲುಕಿಸಿದರು. ಸಿಂಧು ಅವರ ಅಪೂರ್ವ ಆಟದ ಮುಂದೆ ಮಿನಾತ್ಸು ಯಶಸ್ಸು ಗಳಿಸಲಿಲ್ಲ.
ಮೊದಲ ಗೇಮ್‌ನಲ್ಲಿ ಸಿಂಧು ಮೇಲುಗೈ ಸಾಧಿಸಿದ್ದರು. ಆದರೆ ಬಳಿಕ ಮಿನಾತ್ಸು ತಿರುಗೇಟು ನೀಡಿದರು. ಮೂರನೆ ಗೇಮ್‌ನಲ್ಲಿ ಸಿಂಧು ತಿರುಗೇಟು ನೀಡಿ ಮಿನಾತ್ಸುವಿಗೆ ಪ್ರಶಸ್ತಿ ಗೆಲ್ಲುವ ಕನಸನ್ನು ವಿಫಲಗೊಳಿಸಿದರು. ಸತತ ಮೂರನೆ ಬಾರಿ ಮಕಾವು ಓಪನ್ ಕಿರೀಟವನ್ನು ಮುಡಿಗೇರಿಸಿಕೊಂಡರು.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಸಿಂಧು ಜಪಾನ್‌ನ ಎರಡನೆ ಶ್ರೇಯಾಂಕದ ಅಕಾನೆ ಯಮಗುಚಿ ಅವರನ್ನು 21-8, 15-21, 21-16 ಅಂತರದಿಂದ ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು.

Write A Comment