ಕರ್ನಾಟಕ

ಶೌಚಗುಂಡಿಗೆ ಇಳಿದ ಕಾರ್ಮಿಕರಿಬ್ಬರು ಉಸಿರುಗಟ್ಟಿ ಸಾವು

Pinterest LinkedIn Tumblr

Scavengerತುಮಕೂರು, ನ.28: ಶೌಚಗುಂಡಿಗೆ ಇಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಕುರಿಪಾಳ್ಯದ ನಿವಾಸಿಗಳಾದ ಮೂರ್ತಿ (34) ಮತ್ತು ಚಿಕ್ಕಣ್ಣ (37) ಮೃತಪಟ್ಟವರು. ತುಮಕೂರು ನಗರದ ಸರಸ್ವತಿಪುರಂ ದೇವರಾಜ ಅರಸು ರಸ್ತೆಯ 6ನೆ ಕ್ರಾಸ್‌ನಲ್ಲಿರುವ ಗುತ್ತಿಗೆದಾರ ಕೆಂಪನರಸಯ್ಯ ಅವರ ಮನೆಯ 15 ಅಡಿ ಆಳದ ಶೌಚಗುಂಡಿಗೆ ಈ ಕಾರ್ಮಿಕರು ಇಳಿದಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ತಿಲಕ್‌ಪಾರ್ಕ್ ಪೊಲೀಸ್ ಠಾಣೆಯ ಸಿಪಿಐ ಬಾಳೇಗೌಡ ಮತ್ತು ಸಿಬ್ಬಂದಿ ಭೇಟಿ ನೀಡಿ ಶೌಚಗುಂಡಿಯ ಒಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಮನೆಯ ಮಾಲಕ ಕೆಂಪನರಸಯ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶೌಚಗುಂಡಿಯಿಂದ ಶವ ಹೊರ ತೆಗೆಯಲು ವಿರೋಧ:
ಮಲ ಹೊರುವ ಪದ್ಧತಿ ನಿಷೇಧವಿದ್ದರೂ ಕೂಲಿ ಕಾರ್ಮಿಕರನ್ನು ಶೌಚಗುಂಡಿಗೆ ಇಳಿಸಿದ ಮನೆಯ ಮಾಲಕನನ್ನು ಬಂಧಿಸಬೇಕು ಹಾಗೂ ಮೃತ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲಿಯವರೆಗೆ ಶವ ಮೇಲೆತ್ತಲು ಬಿಡುವುದಿಲ್ಲ ಎಂದು ಮೃತರ ಸಂಬಂಧಿಕರು ಪಟ್ಟು ಹಿಡಿದಿದ್ದು, ಸಿಐಟಿಯು ನೇತೃತ್ವದಲ್ಲಿ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸುತಿದ್ದಾರೆ. ಈ ಮಧ್ಯೆ ಮನೆಯ ಮಾಲಕ ಪರಾರಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತ ಕಾರ್ಮಿಕರ ಕುಟುಂಬಸ್ಥರು ಮತ್ತು ಸಂಬಂಧಿಕರ ರೋದನ ಮುಗಿಮುಟ್ಟಿದೆ.

ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ
ತುಮಕೂರು, ನ.28: ಶೌಚಗುಂಡಿಗೆ ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ ಇಬ್ಬರು ಕಾರ್ಮಿಕರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರಧನ ನೀಡಲು ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದ್ದಾರೆ.

ಶನಿವಾರ ಮಧ್ಯಾಹ್ನ ನಡೆದ ಈ ಘಟನೆಯನ್ನು ಖಂಡಿಸಿ, ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಬಿಡುವುದಿಲ್ಲ ಎಂದು ಸಿಐಟಿಯು, ದಲಿತ ಸಂಘರ್ಷ ಸಮಿತಿಯ ಸದಸ್ಯರು ಘಟನೆ ನಡೆದ ಮನೆಯ ಮುಂದೆ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ನಗರಪಾಲಿಕೆ ಮೇಯರ್ ಲಲಿತಾ ರವೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ್ ಅವರೊಂದಿಗೆ ಭೇಟಿ ನೀಡಿ ಪ್ರತಿಭಟನ ನಿರತರೊಂದಿಗೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್, ಪ್ರತಿಭಟನನಿರತ ಕೋರಿಕೆಯಂತೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಸಮಾಜ ಕಲ್ಯಾಣ ಇಲಾಖೆ, ಸಫಾಯಿ ಕರ್ಮಚಾರಿ ಆಯೋಗದಿಂದ ನೀಡುವ ಹೆಚ್ಚುವರಿ ಪರಿಹಾರಧನವನ್ನು ಒದಗಿಸುವ ಭರವಸೆ ನೀಡಿದರು. ಜಿಲ್ಲಾಧಿಕಾರಿ ಭರವಸೆಯ ನಂತರ ಶವದ ಮರಣೋತ್ತರ ಪರೀಕ್ಷೆಗೆ ಪ್ರತಿಭಟನನಿರತರು ಅವಕಾಶ ನೀಡಿದರು. ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಸೈಯದ್ ಮುಜೀಬ್, ದಲಿತ ಮುಖಂಡರಾದ ಬಂದಗುಂಟೆ ನಾಗರಾಜಯ್ಯ, ಪಿ.ಎನ್.ರಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Write A Comment