ಕರ್ನಾಟಕ

ಅಸಹಿಷ್ಣುತೆ ಅಪಾಯಕಾರಿ: ಕನಕ ಜಯಂತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

Dasaಬೆಂಗಳೂರು, ನ.28: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಸಮಾಜ ಮತ್ತು ಮನುಕುಲಕ್ಕೆ ಅತ್ಯಂತ ಅಪಾಯಕಾರಿ ಮಾತ್ರವಲ್ಲ; ಆತಂಕಕಾರಿಯೂ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಸಂತ ಶ್ರೇಷ್ಠ ಕನಕದಾಸ ಜಯಂತಿ ಹಾಗೂ ‘ಕನಕ ಶ್ರೀ’ ಮತ್ತು ‘ಕನಕ ಗೌರವ ಪುರಸ್ಕಾರ’ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ-ಜಾತಿಗಳು, ಧರ್ಮ- ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಹಿಂದೆಯೂ ನಡೆದಿತ್ತು. ಇಂದಿಗೂ ನಡೆಯುತ್ತಿದೆ ಎಂದು ಹೇಳಿದರು.

ಕನಕದಾಸರು ‘ಕುಲ ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ?’ ಎಂದು ಸಂಕುಚಿತ ಮನೋಭಾವವುಳ್ಳ ಜನರನ್ನು ಪ್ರಶ್ನಿಸಿದ್ದರು. ಕನಕದಾಸರ ಕೀರ್ತನೆ, ಸಾಹಿತ್ಯವನ್ನು ಜನರಿಗೆ ಹೆಚ್ಚು ಹೆಚ್ಚು ತಿಳಿಸಬೇಕಾಗಿದೆ. ಯುವ ಜನಾಂಗದಲ್ಲಿ ಈ ವಿಚಾರದ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಇಲ್ಲವಾದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ ಎಂದು ನುಡಿದರು.

ದಾಸ ಸಾಹಿತ್ಯಕ್ಕೆ ವೈಚಾರಿಕ ಚೌಕಟ್ಟು: ಕನಕದಾಸರು ದಾಸ ಸಾಹಿತ್ಯಕ್ಕೆ ವೈಚಾರಿಕ ಮತ್ತು ಜಾತ್ಯತೀತ ಚೌಕಟ್ಟು ತಂದು ಕೊಟ್ಟವರು. ಈ ಕಾರಣಕ್ಕಾಗಿ ಅವರು ಇಂದಿಗೂ ಎಂದೆಂದಿಗೂ ಪ್ರಸ್ತುತ. ಕನಕದಾಸರು ವಿಶ್ವ ಮಾನವ. ಜಾತಿ-ಧರ್ಮ, ಪಂಥಗಳನ್ನು ಮೀರಿ ಬೆಳೆದವರು. ಮಾತ್ರವಲ್ಲ, ಸೀಮಾತೀತರು ಎಂದು ಅವರು ಬಣ್ಣಿಸಿದರು.

ಬಸವಣ್ಣನವರ ತತ್ವದ ಬಗ್ಗೆ ಮಾತನಾಡುವವರು ಅದಕ್ಕೆ ವಿರುದ್ಧವಾಗಿ ನಡೆದು ಕೊಳ್ಳುವ ಪ್ರವೃತ್ತಿ ಸರಿಯಲ್ಲ. ಇದು ಕನಕದಾಸರ ಸಿದ್ಧಾಂತಗಳಿಗೂ ಅನ್ವಯಿಸುತ್ತದೆ. ಹಿಂದುತ್ವ, ಹಿಂದೂಧರ್ಮದ ಹೆಸರಿನಲ್ಲಿ ಅದರ ಮೂಲ ತತ್ವಕ್ಕೆ ವಿರುದ್ಧ ವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಇದೇ ವೇಳೆ ಟೀಕಿಸಿದರು.

ಬಸವಣ್ಣ, ಕನಕದಾಸರ ಜಯಂತಿಗಳನ್ನು ಆಚರಿಸುವುದು ಅವರನ್ನು ವೈಭವೀಕರಿಸುವ ಉದ್ದೇಶದಿಂದ ಅಲ್ಲ. ಅವರ ವಿಚಾರಗಳನ್ನು ಪಸರಿಸುವುದು, ಆ ತತ್ವಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಸಿದ್ದರಾಮಯ್ಯ ಹೇಳಿದರು.

ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಕನಕದಾಸರ ಸಾಹಿತ್ಯ ವಿಚಾರಧಾರೆಗಳನ್ನು ಬೇರೆ ಭಾಷೆಗಳಿಗೆ ತರ್ಜುಮೆ ಮಾಡಿ ಪ್ರಚುರಪಡಿಸಲು ಕಾರ್ಯಕ್ರಮ ರೂಪಿಸಲಾಗಿದೆ. ತುಳಿತಕ್ಕೊಳಗಾದ ಸಮುದಾಯದ ಕನಕದಾಸರು ಸಂತ ಶ್ರೇಷ್ಠರ ಸಾಲಿನಲ್ಲಿ ಗುರುತಿಸಿಕೊಂಡವರು ಎಂದು ವರ್ಣಿಸಿದರು.

ಇದೇ ಸಂದರ್ಭದಲ್ಲಿ ದಾಸ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಕಲಬುರ್ಗಿಯ ಡಾ.ಸ್ವಾಮಿರಾವ್ ಕುಲಕರ್ಣಿಯವರಿಗೆ 2015ನೆ ಸಾಲಿನ ‘ಕನಕ ಶ್ರೀ’ ಪ್ರಶಸ್ತಿ ಹಾಗೂ ವಿಜಯಪುರದ ಚಂದ್ರಕಾಂತ ಬಿಜ್ಜರಗಿ ಅವರಿಗೆ 2015ರ ‘ಕನಕ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಾರ್ತಾ ಸಚಿವ ಆರ್.ರೋಷನ್ ಬೇಗ್ ವಹಿಸಿದ್ದರು. ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ.ಜಾರ್ಜ್, ಸಮಾಜ ಕಲ್ಯಾಣ ಸಚಿವ ಆಂಜನೇಯ, ಮೇಲ್ಮನೆ ಸದಸ್ಯರಾದ ಮೋಟಮ್ಮ, ಎಚ್.ಎಂ.ರೇವಣ್ಣ, ಬೈರತಿ ಸುರೇಶ್, ಆರ್.ವಿ.ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Write A Comment