ಕರ್ನಾಟಕ

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನರ ಹೆಸರನ್ನು ನಾಮಕರಣ ಮಾಡಿ: ಸಾಹಿತಿ ಗಿರೀಶ್ ಕಾರ್ನಾಡ್

Pinterest LinkedIn Tumblr

Girish-Karnad

ಬೆಂಗಳೂರು, ನ.10: ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೈಸೂರು ಹುಲಿ ಟಿಪ್ಪು ಸುಲ್ತಾನರ ಹೆಸರನ್ನು ನಾಮಕರಣ ಮಾಡಬೇಕೆಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇಂದಿಲ್ಲಿ ಸಲಹೆ ನೀಡಿದರು.

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ನಿರ್ದೇಶನಾಲಯ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೋಲ್ಕತ್ತಾದ ವಿಮಾನ ನಿಲ್ದಾಣಕ್ಕೆ ನೇತಾಜಿ ಸುಭಾಷ್‌ಚಂದ್ರಬೋಸ್ ಅವರ ಹೆಸರಿಡಲಾಗಿದೆ. ಮುಂಬೈನಲ್ಲಿ ಛತ್ರಪತಿ ಶಿವಾಜಿ ಹೆಸರನ್ನು ನಾಮಕರಣ ಮಾಡಲಾಗಿದೆ. ಅದೇ ರೀತಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಹೆಸರು ನಾಮಕರಣ ಮಾಡಬೇಕು. ಕೆಂಪೇಗೌಡ ಅವರು ಸ್ವಾತಂತ್ರ್ಯ ಹೋರಾಟಗಾರರಲ್ಲ. ನಾಡು ಕಟ್ಟಿದ ನಾಡಪ್ರಭು ಎಂದು ಹೇಳಿದರು.

ಟಿಪ್ಪು ಜಯಂತಿಯೊಂದಿಗೆ ಬಿಹಾರ ಜಯಂತಿಯನ್ನೂ ಆಚರಿಸಬೇಕು ಎಂದು ಪರೋಕ್ಷವಾಗಿ ಬಿಜೆಪಿಯ ಸೋಲಿನ ಬಗ್ಗೆ ಟೀಕಿಸಿದ ಅವರು, ಟಿಪ್ಪು ಬಗ್ಗೆ ಸರಿಯಾದ ಮೌಲ್ಯಮಾಪನವಾಗಿಲ್ಲ. ಮುಸ್ಲಿಂ ಎಂಬ ಕಾರಣಕ್ಕೆ ಟಿಪ್ಪು ಜಯಂತಿಯನ್ನು ವಿರೋಧಿಸಲಾಗುತ್ತಿದೆ ಎಂದರು.

ಟಿಪ್ಪು ರಾಜಕೀಯ ವ್ಯಕ್ತಿಯಲ್ಲ. ಕನ್ನಡ ಸಾಹಿತ್ಯ, ರಂಗಭೂಮಿಯ ಒಂದು ಭಾಗ ಎಂದ ಅವರು, ಕಳೆದ 300 ವರ್ಷಗಳ ಇತಿಹಾಸದಲ್ಲೇ ಟಿಪ್ಪು ಸುಲ್ತಾನ್‌ಗೆ ಸರಿಸಾಟಿಯಾದ ಮತ್ತೊಬ್ಬ ಕನ್ನಡಿಗ ಹುಟ್ಟಿಲ್ಲ.ವಿಜಯನಗರ ಸಾಮ್ರಾಜ್ಯ ಹರಿದು ಹಂಚಿ ಹೋಗಿದ್ದಾಗ ಕನ್ನಡ ನಾಡನ್ನು ಒಂದುಗೂಡಿಸಿದ ವ್ಯಕ್ತಿ ಎಂದು ಕಾರ್ನಾಡ್ ಗುಣಗಾನ ಮಾಡಿದರು.

ಧರ್ಮ ಸಹಿಷ್ಣು:

ಟಿಪ್ಪು ಸುಲ್ತಾನ್ ಜಾತ್ಯತೀತ ಮನೋಭಾವದ ಧರ್ಮ ಸಹಿಷ್ಣುವಾಗಿದ್ದರು ಎಂದು ಪೌರಾಡಳಿತ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ ಇಸ್ಲಾಂ ಅಭಿಪ್ರಾಯಪಟ್ಟರು.

ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಟಿಪ್ಪು ಸುಲ್ತಾನ್ ಮಂಗಳಾರತಿ ಮಾಡುತ್ತಿದ್ದರು. ಟಿಪ್ಪು ಜಯಂತಿ ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಐತಿಹಾಸಿಕ ತೀರ್ಮಾನವಾಗಿದೆ ಎಂದರು. ಮತಾಂಧ ಟಿಪ್ಪು ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಅವರೊಬ್ಬ ಅಪ್ರತಿಮ ದೇಶಭಕ್ತ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾರ್ತಾ ಸಚಿವ ಆರ್.ರೋಷನ್‌ಬೇಗ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ರಾಜ್ಯಸಭಾ ಸದಸ್ಯ ರೆಹಮಾನ್‌ಖಾನ್, ಮೇಯರ್ ಮಂಜುನಾಥರೆಡ್ಡಿ, ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಆರ್.ಪೇಟೆ ಕೃಷ್ಣ, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ನಿವೃತ್ತ ನ್ಯಾಯಮೂರ್ತಿ ಕೋ.ಚನ್ನಬಸಪ್ಪ, ಇತಿಹಾಸ ತಜ್ಞ ಎನ್.ವಿ.ನರಸಿಂಹಯ್ಯ, ತಲಕಾಡು ಚಿಕ್ಕರಂಗೇಗೌಡ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Write A Comment