ಬೆಂಗಳೂರು, ನ.10: ರಾಜ್ಯ ಸರ್ಕಾರ 2016ನೆ ಸಾಲಿನ ರಾಷ್ಟ್ರೀಯ ಹಾಗೂ ವಿವಿಧ ಹಬ್ಬಗಳಿಗೆ ಸಂಬಂಧಿಸಿದಂತೆ 22 ಸಾರ್ವತ್ರಿಕ ರಜಾ ದಿನಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.
ಭಾನುವಾರಗಳಂದು ಬರುವ ಕಾರ್ಮಿಕರ ದಿನಾಚರಣೆ, ಗಾಂಧಿಜಯಂತಿ ಹಾಗೂ ಕ್ರಿಸ್‌ಮಸ್ ರಜಾ ದಿನಗಳು ಈ ಪಟ್ಟಿಯಲ್ಲಿ ಸೇರಿಲ್ಲ. ಅ.17ರಂದು ತುಲಾ ಸಂಕ್ರಮಣ ಹಾಗೂ ಡಿ.14ರಂದು ಬರುವ ಹುತ್ತರಿ ಹಬ್ಬ ಆಚರಿಸಲು ಕೊಡಗು ಜಿಲ್ಲೆಗೆ ಸೀಮಿತವಾಗಿ ಸರ್ಕಾರ ರಜಾ ಘೋಷಿಸಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಲಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವತ್ರಿಕ ರಜಾದಿನಗಳ ಜತೆಗೆ ಎರಡು ದಿನಗಳಿಗೆ ಮೀರದಂತೆ ರಾಜ್ಯ ಸರ್ಕಾರಿ ನೌಕರರು ಪರಿಮಿತಿ ರಜೆಯನ್ನು ಪೂರ್ವಾನುಮತಿ ಪಡೆದು ಬಳಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲು ನಿರ್ದೇಶಿಸಲಾಗಿದೆ. ಜನವರಿ 15ರಂದು ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬ. ಜ.26 ಗಣರಾಜ್ಯೋತ್ಸವ, ಮಾ.7 ಮಹಾಶಿವರಾತ್ರಿ, ಮಾ.25 ಗುಡ್‌ಫ್ರೈಡೆ, ಏ.8ಚಾಂದ್ರಮಾನ ಯುಗಾದಿ, ಏ.14 ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಏ.19 ಮಹಾವೀರ ಜಯಂತಿ, ಮೇ 9 ಬಸವಜಯಂತಿ, ಜುಲೈ 6 ಖುತುಬ್-ಎ-ರಂಜಾನ್, ಆ.15 ಸ್ವಾಂತಂತ್ರ್ಯ ದಿನಾಚರಣೆ. ಸೆ.5 ವರಸಿದ್ಧಿ ವಿನಾಯಕ ವ್ರತ, ಸೆ.12 ಬಕ್ರಿದ್, ಸೆ.30 ಮಹಾಲಯ ಅಮವಾಸ್ಯೆ, ಅ.10 ಮಹಾನವಮಿ ಆಯುಧಪೂಜೆ, ಅ.11 ವಿಜಯದಶಮಿ, ಅ.12 ಮೊಹರಂ ಕಡೇ ದಿನ. ಅ.15 ಮಹರ್ಷಿ ವಾಲ್ಮೀಕಿ ಜಯಂತಿ, ಅ.29 ನರಕಚತುರ್ದಶಿ, ಅ.31 ಬಲಿಪಾಡ್ಯಮಿ ದೀಪಾವಳಿ, ನ.1ಕನ್ನಡ ರಾಜ್ಯೋತ್ಸವ, ನ.17 ಕನಕದಾಸ ಜಯಂತಿ, ಡಿ.12 ಈದ್‌ಮಿಲಾದ್‌ಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
