ಕರ್ನಾಟಕ

ಪೊಲೀಸರಿಗೆ ಮತ್ತು ಅವರ ಕುಟುಂಬದವರಿಗಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್

Pinterest LinkedIn Tumblr

paraಬೆಂಗಳೂರು, ನ.6-ಮಿಲಿಟರಿ ಆಸ್ಪತ್ರೆ ಮಾದರಿಯಲ್ಲಿ ಪೊಲೀಸರು ಮತ್ತು ಅವರ ಕುಟುಂಬದವರಿಗೆ ಚಿಕಿತ್ಸೆ ನೀಡಲು ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು. ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಿಲಿಟರಿ, ಏರ್‌ಫೋರ್ಸ್ಾ, ರಕ್ಷಣಾ ದಳಗಳಿಗೆ ಪ್ರತ್ಯೇಕ ಆಸ್ಪತ್ರೆಗಳಿರುವಂತೆ ಪೊಲೀಸ್ ಇಲಾಖೆಗಾಗಿ ಪತ್ಯೇಕ ಆಸ್ಪತ್ರೆ ಸ್ಥಾಪಿಸುವ ಅಗತ್ಯವಿದೆ. ಇಲ್ಲಿ ಶ್ರೇಣೀಕೃತ ವ್ಯವಸ್ಥೆ ಇದೆ. ಎಲ್ಲ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಒಂದೇ ರೀತಿಯ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆ ಸ್ಥಾಪಿಸಲು ಹಣದ ಕೊರತೆ ಇಲ್ಲ. ಹೆಡ್‌ಕ್ವಾರ್ಟರ್ ಬಳಿ 3.5ಎಕರೆ ಜಾಗ ಲಭ್ಯವಿದೆ. ಅದರಲ್ಲಿ 1.5ಎಕರೆ ಬಳಕೆ ಮಾಡಿಕೊಂಡು ಆಸ್ಪತ್ರೆ ಸ್ಥಾಪಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದರು.

ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗೆ ಉದ್ಯೋಗ ತರಬೇತಿ ನೀಡಲು ಪ್ರತ್ಯೇಕ ತರಬೇತಿ ಕೇಂದ್ರ ಮತ್ತು ಐಟಿಐ ಸಂಸ್ಥೆ ಸ್ಥಾಪಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಪೊಲೀಸ್ ಸಿಬ್ಬಂದಿಗಳ ವಸತಿ ಗೃಹದ ಅವ್ಯವಸ್ಥೆ ಬಗ್ಗೆಯೂ ಪರಮೇಶ್ವರ್ ಕಿಡಿಕಾರಿದರು. ನಾನು ಇತ್ತೀಚೆಗೆ ಮೈಸೂರಿನಲ್ಲಿ ಪೊಲೀಸ್ ವಸತಿ ಗೃಹಕ್ಕೆ ಭೇಟಿ ನೀಡಿದ್ದೆ. ಅಲ್ಲಿ ನೀರಿಲ್ಲ, ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಇಂತಹ ಸ್ಥಿತಿಯಲ್ಲಿ ಕಾನ್ಸ್‌ಟೆಬಲ್‌ಗಳಿಂದ ಕೆಲಸ ತೆಗೆದುಕೊಳ್ಳುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ಪೊಲೀಸ್ ವಸತಿ ಗೃಹಗಳನ್ನು ಸುಸಜ್ಜಿತಗೊಳಿಸಬೇಕು. ಸ್ಥಳೀಯ ಸಂಸ್ಥೆಗಳ ಜತೆ ಸೇರಿ ಸೌಲಭ್ಯಗಳನ್ನು ಉನ್ನತೀಕರಣಗೊಳಿಸಬೇಕು. ಠಾಣೆಗಳ ಮುಂದಿರುವ ಹಳೆಯ ವಾಹನಗಳನ್ನು ಕಾಲ-ಕಾಲಕ್ಕೆ ಹರಾಜು ಹಾಕಬೇಕೆಂದು ಸೂಚಿಸಿದರು. ಪೊಲೀಸ್ ವಸತಿ ಗೃಹ ನಿಗಮದಲ್ಲಿ ಗುತ್ತಿಗೆ ದಾರರು ಬಹಳಷ್ಟು ಅವ್ಯವಹಾರ ನಡೆಸುತ್ತಿದ್ದಾರೆ. ಕೆಲವು ಗುತ್ತಿಗೆ ಕಾಮಗಾರಿಗಳಲ್ಲಿ ನಿಗದಿತ ದರಕ್ಕಿಂತಲೂ ಶೇ.30ಕ್ಕಿಂತ ಕಡಿಮೆ ವೆಚ್ಚದಲ್ಲಿ ಕೆಲಸ ಮಾಡಲು ಕೆಲವರು ಒಪ್ಪಿಕೊಂಡಿದ್ದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಕೆಲಸ ಆರಂಭವಾದ ನಂತರ ಶೇ.50ಕ್ಕಿಂತಲೂ ಹೆಚ್ಚು ಯೋಜನಾ ವೆಚ್ಚವನ್ನು ಪಡೆದಿರುವ ಉದಾಹರಣೆಗಳಿವೆ. ಇವುಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಅವರು ಹೇಳಿದುರು.

ಇನ್ನು ಮುಂದೆ ಪ್ರತಿ ವಲಯವಾರು 15ದಿನಗಳಿಗೊಮ್ಮೆ ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸುವುದಾಗಿ ಪರಮೇಶ್ವರ್ ತಿಳಿಸಿದರು. ಡಿಜಿಪಿ ಓಂಪ್ರಕಾಶ್ ಮಾತನಾಡಿ, ಗುಲ್ಬರ್ಗ ಪೊಲೀಸ್ ಆಯುಕ್ತಾಲಯಕ್ಕೆ ಹಾಗೂ ಕರಾವಳಿ ಭಾಗದಲ್ಲಿ ಮತೀಯ ಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸಲು ಕ್ಷಿಪ್ರ ಕಾರ್ಯಪಡೆ ಸ್ಥಾಪನೆಗೆ ಅನುಮತಿ ಕೊಡಿಸುವಂತೆ ಮನವಿ ಮಾಡಿದರು. ತುಮಕೂರಿನಲ್ಲಿ ಭಾರತೀಯ ಮೀಸಲು ಪೊಲೀಸ್ ಪಡೆ ಸ್ಥಾಪನೆಗೆ ಅನುಮತಿ ಕೊಡಿಸಬೇಕೆಂದು ಅವರು ಕೋರಿದರು.

ಕೆಎಸ್‌ಆರ್‌ಪಿಯಲ್ಲಿ 30 ವರ್ಷಗಳಿಂದಲು ಪರಿಷ್ಕರಣೆಯಾಗಿರಲಿಲ್ಲ. ಇತ್ತೀಚೆಗೆ ಬಡ್ತಿ ಹಾಗೂ ನೇಮಕಾತಿಯ ಮೂಲಕ ಪರಿಷ್ಕರಣೆ ಮಾಡಲಾಗಿದೆ ಎಂದರು. ರಾಜ್ಯದ ಪೊಲೀಸ್ ತರಬೇತಿ ಶಾಲೆಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ. ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ 309 ಹುದ್ದೆಗಳ ನೇಮಕಾತಿಗೆ ಮಂಜೂರಾತಿ ದೊರೆತಿದೆ ಎಂದು ಓಂಪ್ರಕಾಶ್ ತಿಳಿಸಿದರು. ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Write A Comment