ಕರ್ನಾಟಕ

ಜಾತಿಯ ವಿಷ ಬೀಜ ಬಿತ್ತುವ ಕೆಲಸ ಸಲ್ಲದು’: ಸುಭಾಷ್ ಸಿಂಗ್ ಜಮೇದಾರ್ ಆತಂಕ

Pinterest LinkedIn Tumblr

pusthaka__fi______ಬೆಂಗಳೂರು/ಚಿತ್ರದುರ್ಗ, ನ. 6: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಜಾತಿಯ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದ್ದು, ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹುಬ್ಬಳ್ಳಿಯ ಬಿಎಂಎಸ್ ಅಧ್ಯಕ್ಷ ಸುಭಾಷ್ ಸಿಂಗ್ ಜಮೇದಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಚಿತ್ರದುರ್ಗದ ಮುರುಘಾ ಮಠದಲ್ಲಿ ಏರ್ಪಡಿಸಿದ್ದ ಪ್ರೊ.ಎಚ್.ಲಿಂಗಪ್ಪ ಅವರ ‘ಮಹಾತಾಯಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಕ್ತಿ, ಜ್ಞಾನ ಹಾಗೂ ಕರ್ಮದ ಹಿನ್ನೆಲೆಯಲ್ಲಿ ಮೂರು ಮಾರ್ಗಗಳಿವೆ. ಶರಣ ಪರಂಪರೆಯು ಭಕ್ತಿ, ಜ್ಞಾನ, ಕರ್ಮ ಮಾರ್ಗ ಈ ಮೂರು ಪರಂಪರೆಗಳ ಸಂಗಮ ಎಂದರು. ದಾಸ ಪರಂಪರೆ ಸಾಲ ಮಾಡಬಾರದು, ಅಲ್ಪ ತೃಪ್ತನಾಗಬೇಕು ಮತ್ತು ಭಗವಂತನಿಗೆ ದಾಸನಾಗಬೇಕು, ಲೋಕದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ದಾಸರು ಮಾಡಿದರು. ‘ನಾನು’ ಎಂಬ ಭಾವನೆ ಹೋಗುವವರೆಗೆ ಮಾನವರಾಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.ಶರಣ ಪರಂಪರೆ ಮುಖ್ಯ ಉದ್ದೇಶ ತಳಸಮುದಾಯಗಳನ್ನು ಮೇಲೆತ್ತುವ ಕೆಲಸ ಮಾಡುವುದು. ಆಯ್ದಕ್ಕಿ ಲಕ್ಕಮ್ಮ ಇಂದು ನಮ್ಮ ಬದುಕಿಗೆ ಆದರ್ಶವಾಗಿ ನಿಲ್ಲುತ್ತಾಳೆ. ಜಾತಿಯ ವಿಷಬೀಜ ಕಿತ್ತೊಗೆಯಲು ಶರಣರು ಪ್ರಯತ್ನಿಸಿದರು. ಬುದ್ಧ, ಬಸವ ಸಮಾಜೋದ್ಧಾರದ ಕೆಲಸ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆಂದರು. ಸಾನಿಧ್ಯ ವಹಿಸಿದ್ದ ಶ್ರೀಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಶರಣ ಸಿದ್ಧಾಂತದ ಮುಖ್ಯಧ್ಯೇಯ ಕಾಯಕ, ದಾಸೋಹ ಮತ್ತು ಅನುಭಾವ. ಶರಣರು ತಮ್ಮ ಬದುಕನ್ನು ಬೋಧನೆಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರು ತಮ್ಮ ಪಾಲಿನ ಕಾಯಕ ಮಾಡಬೇಕು ಎಂದು ತಿಳಿಸಿದ್ದಾರೆಂದು ಉಲ್ಲೇಖಿಸಿದರು. ಭಕ್ತಿಪರಂಪರೆಯ ಮೂಲ ಹರಿ ಸರ್ವೋತ್ತಮ. ಅಂದರೆ ವೇದಾಂತ ಕಡೆಯವರು ಗುರು ಸರ್ವೋತ್ತಮ ಎನ್ನುತ್ತಾರೆ. ಮೂರನೆಯದು ಶರಣ ಪರಂಪರೆ ‘ಕಾಯಕ’ ಮೂಲದ್ದು ಎಂದ ಅವರು, ನಮ್ಮ ಕಾಯಕ್ಕೆ ಕಷ್ಟ ಕೊಡಬೇಕು. ಕಾಯಕ ಸಿದ್ಧಾಂತ ಸಮಷ್ಟಿ ಸಿದ್ಧಾಂತ ಎಂದರು. ಕೃತಿಯ ಕುರಿತು ಮಾತನಾಡಿದ ಮೈಸೂರಿನ ಪ್ರಾಧ್ಯಾಪಕ ಡಾ.ಬಿ.ವಿ. ವಸಂತ ಕುಮಾರ್, ಜೀವ ನೀಡುವುದು ದೈಹಿಕ ಕ್ರಿಯೆಯಲ್ಲ. ಅದು ಪ್ರೀತಿಯ ಕ್ರಿಯೆ. ಇಂದು ವಿದ್ವಾಂಸರು ವಾಗ್ವಾದಕ್ಕೀಡಾಗುತ್ತ ವಿದ್ವ್ವಂಸಕರಾಗುತ್ತಿದ್ದಾರೆ. ಇದು ಬೇಸರದ ಸಂಗತಿ ಎಂದು ವಿಶ್ಲೇಷಿಸಿದರು. ಸಮಾರಂಭದಲ್ಲಿ ಧಾರವಾಡದ ಪತ್ರಕರ್ತ ವೀರಕುಮಾರ ಕಗ್ಗಣ್ಣವರ ಮತ್ತು ಟಿಪ್ಪು ಅಭಿಮಾನಿಗಳ ವೇದಿಕೆ ಜಿಲ್ಲಾಧ್ಯಕ್ಷ ಅಲಹಾಜ್ ಎಚ್.ಅನ್ವರ್‌ಸಾಬ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೃತಿಯ ಲೇಖಕ ಲಿಂಗಪ್ಪ ಉಪಸ್ಥಿತರಿದ್ದರು.

Write A Comment