ಬೇಲೂರು,ಅ.25-ವಿಶ್ವ ವಿಖ್ಯಾತ ಪ್ರವಾಸಿ ತಾಣ ಹಾಗೂ ಶಿಲ್ಪ ಕಲೆಗಳ ತವರೂರೆಂದು ಹೆಸರಾಗಿರುವ ಬೇಲೂರಿಗೆ ಕಳೆದ ಎರಡು ದಿನಗಳಿಂದ ಪ್ರವಾಸಿಗರ ದಂಡೆ ಹರಿದು ಬರುತ್ತಿರುವ ಕಾರಣ ಪಟ್ಟಣದಲ್ಲಿ ಬಾರಿ ವಾಹನ ದಟ್ಟಣೆ ಸಮಸ್ಯೆಯಿಂದ ಪೊಲೀಸರು ಹರಸಾಹಸಪಡುವಂತಾಗಿದೆ. ಇಲ್ಲಿನ ಚನ್ನಕೇಶವ ದೇವರನ್ನು ಹಾಗೂ ದೇವಸ್ಥಾನದಲ್ಲಿನ ಶಿಲ್ಪಕಲೆಗಳ ಕಲಾ ವೈಭವವನ್ನು ವೀಕ್ಷಿಸಲು ಭಕ್ತರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಕಾರಣ ಜನಜಂಗುಳಿಯೇ ಏರ್ಪಟ್ಟಿದೆ. ಪಟ್ಟಣದಲ್ಲಿನ ವಸತಿ ಗೃಹಗಳಲ್ಲಿ ಕೊಠಡಿಗಳಿಲ್ಲದೆ ಪ್ರವಾಸಿಗರು ತಮ್ಮ ವಾಹನಗಳಲ್ಲೆ ಕಾಲ ಕಳೆಯಂತಾಯಿತು.
ಮತ್ತೆ ಕೆಲವರು ಪಕ್ಕದ ಚಿಕ್ಕಮಗಳೂರು, ಹಾಸನಗಳಿಗೆ ಹೋಗುತ್ತಿದ್ದದು ಗೋಚರಿಸುತಿತ್ತು. ದೇವಾಸ್ಥಾನದ ಎದುರು ಭಾಗದಲ್ಲಿಯೇ ಅನ್ನದಾಸೋಹ ಕೇಂದ್ರವಿರುವುದರಿಂದ, ದಾಸೋಹ ಕೇಂದ್ರಕ್ಕೆ ಊಟಕ್ಕಾಗಿ ಭಕ್ತರು ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತು ಕಾಯುವಂತಾಯಿತು.ಕಳೆದ ಎರೆಡು ದಿನಗಳಿಂದ ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾದ್ದರಿಂದ ಎರಡು ಸಾವಿರದ ಐನೂರಕ್ಕೂ ಹೆಚ್ಚು ಜನರು ದಾಸೋಹ ಸ್ವೀಕರಿಸಿದ್ದಾರೆ. ಇಂದು ಭಾನುವಾರವಾದ್ದರಿಂದ ಬೇಲೂರಿಗೆ ಬರುವವರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂಬ ನಿರೀಕ್ಷೆ ಇದೆ. ಪಟ್ಟಣಕ್ಕೆ ಬರುತ್ತಿರುವ ಪ್ರವಾಸಿಗರ ಹೆಚ್ಚಳದಿಂದ ಅಂಗಡಿ ಮುಂಗಟ್ಟುಗಳಲ್ಲಿ, ಹೊಟೆಲ್ಗಳಲ್ಲಿ ವ್ಯಾಪಾರ ವಹಿವಾಟುಗಳು ಭರದಿಂದ ಸಾಗಿದ್ದು, ವರ್ತಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಪಟ್ಟಣದಲ್ಲಿ ಎಲ್ಲೆಂದರಲ್ಲೆ ವಾಹನಗಳ ನಿಲುಗಡೆಯ ಕಾರುಬಾರು ಣಬಹುದಾಗಿದ್ದು, ವಾಹನಗಳನ್ನು ಸರಿಯಾದ ರೀತಿಯಲ್ಲಿ ನಿಲುಗಡೆಗೊಳಿಸುವಲ್ಲಿ ಬೇಲೂರು ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದರು. ವಾಹನಗಳನ್ನು ಪ್ರವಾಸಿಗರು ಬಸ್ ನಿಲ್ದಾಣದಿಂದ ದೇವಸ್ಥಾನದ ರಸ್ತೆ, ದೇವಸ್ಥಾನದ ವಾಹನಗಳ ಪಾರ್ಕಿಂಗ್ ಜಾಗ, ಹಾಗೂ ಅಕ್ಕ ಪಕ್ಕದ ಜಾಗಗಳಲ್ಲಿ, ದೇವಸ್ಥಾನದ ಹಿಂಬಾಗದಲ್ಲಿ ಹಾಗೂ ದೇವಸ್ಥಾನದ ಪಕ್ಕದ ಬೀದಿಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದದು ಎದ್ದು ಕಾಣುತಿತ್ತು. ಇದರಿಂದ ದೇವಸ್ಥಾನದ ಸಮೀಪ ವಾಹನ ದಟ್ಟಣೆ ಸರಿಪಡಿಸುವಲ್ಲಿ ಪೊಲೀಸರು ಹರ ಸಾಹಸಪಡುತ್ತಿದ್ದಾರೆ.