ರಾಷ್ಟ್ರೀಯ

ಅಮರಾವತಿ: ಭವಿಷ್ಯದ ವಿಶ್ವದರ್ಜೆಯ ನಗರ

Pinterest LinkedIn Tumblr

amravati-ap-Lಆಂಧ್ರಪ್ರದೇಶದ ರಾಜಧಾನಿ ಅಮರಾವತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಂಟೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ ಶಿಲಾನ್ಯಾಸ ಮಾಡಿದರು. ಇದೊಂದು ಬೃಹತ್ ಕಾರ್ಯಕ್ರಮವಾಗಿದ್ದು ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಿತ್ತು. ಈ ವಿದ್ಯಮಾನದ ಬಗ್ಗೆ ನಾವೆಲ್ಲಾ ತಿಳಿದುಕೊಳ್ಳಬೇಕಾದ ಸಂಗತಿಗಳು ಕೆಲವು ಇಲ್ಲಿವೆ.
ಕಾರ್ಯಕ್ರಮ: ಕೃಷ್ಣಾ ನದಿ ದಂಡೆ ಮೇಲಿರುವ ಉದ್ದಂಡರಾಯನಿ ಪಾಲೇಂ ಹಳ್ಳಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ಜನರು ಸೇರಿದ್ದರು. ಆಂಧ್ರಪ್ರದೇಶ ವಾಣಿಜ್ಯ ರಾಜಧಾನಿ ವಿಜಯವಾಡಕ್ಕೆ ಸುಮಾರು 40 ಕಿಲೋ ಮೀಟರ್ ದೂರದಲ್ಲಿರುವ ಈ ಪ್ರದೇಶದಲ್ಲಿ ಶಿಲಾನ್ಯಾಸ ಬಳಿಕ ಪ್ರಧಾನಿ ನೆರೆದಿದ್ದವರನ್ನುದ್ದೇಶಿಸಿ ಮಾತ ನಾಡಿದರು. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಪ್ರಧಾನಿ ಭಾಷಣವನ್ನು ತೆಲುಗಿಗೆ ಭಾಷಾಂತರಿಸಿದರು.
ನಗರಗಳ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ ಎಂದ ಮೋದಿ ಜನರು ಇದನ್ನು ಸಮಸ್ಯೆ ಎಂದು ಪರಿಗಣಿಸದೆ ಅವಕಾಶ ಎಂದು ಪರಿಗಣಿಸಬೇಕು ಎಂದರು. ಹಿಂದಿನ ಯುಪಿಎ ಸರಕಾರವನ್ನು ಎಂದಿನ ಶೈಲಿಯಲ್ಲಿ ಜರಿದ ಪ್ರಧಾನಿಯವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಶ್ಲಾಘಿಸಿದರು.
ಆಂಧ್ರಪ್ರದೇಶ ರಾಜ್ಯಪಾಲ ಎಎಸ್‌ಎಲ್ ನರಸಿಂಹನ್, ತಮಿಳು ನಾಡು ರಾಜ್ಯಪಾಲ ಕೆ.ರೋಸಯ್ಯ, ಅಸ್ಸಾಂ ಮತ್ತು ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್, ಕೇಂದ್ರ ಸರಕಾರದ ಸಚಿವರಾದ ನಿರ್ಮಲಾ ಸೀತಾರಾಮನ್, ವೈ.ಎಸ್. ಚೌಧುರಿ, ಬಂಡಾರು ದತ್ತಾತ್ರೇಯ, ಜಪಾನ್ ಮತ್ತು ಸಿಂಗಾಪುರಗಳ ಸಚಿವರು, ನಿಯೋಗದ ಸದಸ್ಯರು ಪಾಲ್ಗೊಂಡಿದ್ದರು.ಸುಮಾರು 8,000 ಪೊಲೀಸರನ್ನು ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲಾಗಿತ್ತು.
ಯಾಕೆ ಅಮರಾವತಿ?: ಗುಂಟೂರು ಜಿಲ್ಲೆಯ ಅಮರಾವತಿ ಒಂದು ಕಾಲದಲ್ಲಿ ಶಾತವಾಹನ ಅರಸರ ರಾಜಧಾನಿ ಯಾಗಿತ್ತು. ಈ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವವಲ್ಲದೆ ಈ ಪಟ್ಟಣ ಕೇಂದ್ರ ಭಾಗದಲ್ಲಿದೆ. ಇದು ರಾಯಲ್ ಸೀಮಾ ವಲಯ, ಕರಾವಳಿ ಜಿಲ್ಲೆಗಳು, ಉತ್ತರ ಮತ್ತು ದಕ್ಷಿಣ ಭಾಗದಿಂದ ಸುಲಭದಲ್ಲಿ ತಲುಪಲು ಸಾಧ್ಯವಿದೆ.
ಯೋಜನೆ: ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇದು ವಿಶ್ವದರ್ಜೆಯ ಮತ್ತು ಜನತೆಯ ರಾಜಧಾನಿಯಾಗಲಿದೆ ಎಂದಿದ್ದಾರೆ. 54,000 ಎಕರೆ ಪ್ರದೇಶದಲ್ಲಿ ಮೈದಾಳಲಿರುವ ಈ ನಗರ 10 ವರ್ಷಗಳಲ್ಲಿ ರಾಜ್ಯ ಸಚಿವಾಲಯ, ಹೈಕೋರ್ಟ್, ವಿಧಾನ ಸಭೆ ಮತ್ತು ಇತರ ಆವಶ್ಯಕತೆಗಳನ್ನು ಹೊಂದಲಿದೆ. ಸಿಂಗಾಪುರ ಸರಕಾರದ ಏಜೆನ್ಸಿಗಳು ರಾಜಧಾನಿಯ ಕೇಂದ್ರ, ರಾಜಧಾನಿ ನಗರ, ಮತ್ತು ರಾಜಧಾನಿ ವಲಯ ಎಂದು ಮೂರು ಹಂತದ ರಾಜಧಾನಿ ರೂಪಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿವೆ. ಆಂಧ್ರಪ್ರದೇಶ ಪುನರ್ಸಂಘಟನೆ ಕಾಯ್ದೆ ಪ್ರಕಾರ ಕೇಂದ್ರ ಸರಕಾರವು ವಿಧಾನಸಭೆ ಕಟ್ಟಡ ರಚನೆಗೆ ಹಣಕಾಸು ಒದಗಿಸಲಿದೆ. ರಾಜ್ಯ ಸರಕಾರ ಕ್ರೀಡಾ, ಮನೋರಂಜನೆ ಮತ್ತು ಆರ್ಥಿಕ ಚಟುವಟಿಕೆ ಪ್ರೇರೇಪಿಸುವ ವಲಯಗಳನ್ನು ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ.

ತೆಲುಗು ರಾಜ್ಯದಿಂದ ಹೊರಗಿ ರುವ ಅತಿ ದೊಡ್ಡ ತೆಲುಗು ಭಾಷಿಕರ ಸಂಸ್ಥೆಯಾದ ಉತ್ತರ ಅಮೆರಿಕದ ತೆಲುಗು ಭಾಷಿಕರ ಸಂಘಟನೆ (ಟಿಎಎನ್‌ಎ) ‘ನನ್ನ ಇಟ್ಟಿಗೆ- ನನ್ನ ಅಮರಾವತಿ’ ಆಂದೋಲನ ಮೂಲಕ ಈ ನಗರದ ಅಭಿವೃದ್ಧಿಗೆ ಹಣ ಸಂಗ್ರಹಿಸಲಿದೆ. ದೇಣಿಗೆ ನೀಡಲು ಇಚ್ಛಿಸುವ ಅನಿವಾಸಿ ತೆಲುಗರಿಂದ ಅದು ದೇಣಿಗೆ ಸಂಗ್ರಹಿಸುತ್ತದೆ. ಆಸಕ್ತರು 10 ರೂ.ಗೆ ಒಂದು ಇಟ್ಟಿಗೆಯನ್ನು ಪ್ರಾಯೋಜಿಸಬಹುದು.
ನಾಯ್ಡು ಅವರ ಕರೆಯಂತೆ ರಾಜ್ಯದ 16,000 ಗ್ರಾಮಗಳಿಂದ ಹಾಗೂ ದೇಶದ ಪವಿತ್ರ ಕ್ಷೇತ್ರಗಳಿಂದ ಮಣ್ಣು ಮತ್ತು ಪವಿತ್ರ ಜಲವನ್ನು ತರಲಾಗಿದೆ. ಅದನ್ನುರಾಜಧಾನಿ ನಗರ ನಿರ್ಮಾಣಕ್ಕೆ ಬಳಸಲಾಗುವುದು. ಜನತೆಯಲ್ಲಿ ಭಾವನಾತ್ಮಕ ಸಂಬಂಧ ಈ ರಾಜಧಾನಿಯ ಬಗ್ಗೆ ಉಂಟಾಗುವಂತೆ ಮಾಡುವುದು ಈ ಯೋಜನೆಯ ಹಿಂದಿನ ಉದ್ದೇಶ.
ಭೂಸ್ವಾಧೀನ: ಅವಶ್ಯ ಭೂಮಿಯನ್ನು ಸ್ವಾಧೀನ ಮಾಡಲು ಹೊಸ ಯೋಜನೆಯನ್ನು ರೂಪಿಸಿರುವುದು ಈ ಯೋಜನೆಯ ಹೆಗ್ಗಳಿಕೆ. ಸಿಎನ್‌ಬಿ ಸಿ -ಟಿ.ವಿ.18 ರ ವರದಿಯನ್ನುಲ್ಲೇಖಿಸಿ ಹೇಳುವುದಾದರೆ ಅಗತ್ಯವಿರುವ 54,000 ಎಕರೆಯಲ್ಲಿ 21,000 ಎಕರೆ ಸರಕಾರಿ ಭೂಮಿ ಇದೆ. ಉಳಿದದ್ದು 29 ಹಳ್ಳಿಗಳ 23,000 ರೈತರ ಕೈಯಲ್ಲಿ ಇದೆ. ಸರಕಾರ ಭೂಮಿ ಸ್ವಾಧೀನಕ್ಕೆ ಪ್ರತ್ಯೇಕವಾದ ಭೂ ಸಂಗ್ರಹ ಯೋಜನೆಯನ್ನು ಹಮ್ಮಿಕೊಂಡಿದೆ. ಇಂಡಿಯನ್‌ಎಕ್ಸ್‌ಪ್ರೆಸ್ ವರದಿಯನ್ನಾಧರಿಸಿ ಹೇಳುವುದಾದರೆ ಸರಕಾರ 18,000 ರೈತರಿಂದ 31,000 ಎಕರೆ ಭೂಮಿಯನ್ನು ಸಂಗ್ರಹಿಸಿದೆ. ಈ ಯೋಜನೆಯಡಿ ರೈತರುಎಕರೆಯೊಂದಕ್ಕೆ ವರ್ಷವೊಂದಕ್ಕೆ 50,000 ರೂ. ಗಳಂತೆ 10 ವರ್ಷ ಪರಿಹಾರ ಪಡೆಯುತ್ತಾರೆ. ಜೊತೆಗೆ ಅವರಿಗೆ 1250 ಚದರ ಯಾರ್ಡ್ ನಿವೇಶನ ಸ್ಥಳ ಮತ್ತು 200 ಚದರ ಯಾರ್ಡ್ ವಾಣಿಜ್ಯ ಸ್ಥಳ ಅಮರಾವತಿ ನಗರದಲ್ಲಿ ದೊರೆಯುತ್ತದೆ. ಇದು ಪ್ರತೀ ಎಕರೆಯೊಂದಕ್ಕೆ ಅವರಿಗೆ ದೊರೆಯುವ ಸೌಲಭ್ಯ. ಸಿಎನ್. ಬಿ.ಸಿ. ಟಿವಿ-18 ವರದಿ ಸಾಮಾನ್ಯ ಇರುವ ಮಾದರಿಯಲ್ಲಿ ಭೂಸ್ವಾಧೀನಕ್ಕೆ ಹೊರಟರೆ ಆಂಧ್ರಪ್ರದೇಶ ಸರಕಾರಕ್ಕೆ ಭೂಸ್ವಾಧೀನಕ್ಕೆ 7,500 ಕೋಟಿ ರೂ. ಬೇಕು ಮತ್ತು ಅದು ಹಲವು ವರ್ಷ ತಗಲಬಹುದು ಎಂದು ಹೇಳುತ್ತದೆ.
ವಿರೋಧ: ಹೌದು, ಈ ಯೋಜನೆಗೆ ವಿರೋಧವೂ ಇದೆ. ನಾಯ್ಡು ಅವರ ತೆಲುಗುದೇಶಂ ಪಕ್ಷ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಸಹಭಾಗಿ. ಮೋದಿ ಅವರು ಚುನಾವಣಾ ಪ್ರಚಾರದಲ್ಲಿ ಭರವಸೆ ಕೊಟ್ಟಂತೆ ವಿಷೇಶ ಸ್ಥಾನ ಮಾನ ಪಡೆಯಲು ನಾಯ್ಡು ವಿಫಲರಾದರೆಂಬ ಟೀಕೆಗೂ ಒಳಗಾಗಿದ್ದಾರೆ.
ಡೆಕ್ಕನ್ ಕ್ರಾನಿಕಲ್ ವರದಿ ಕಾಂಗ್ರೆಸ್ ಮತ್ತು ವೈಎಸ್ಸಾರ್ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಗೈರು ಹಾಜರಾಗು ವರೆಂದು ಹೇಳಿತ್ತು. ಸಿಪಿಎಂ ಅಮರಾವತಿ ಒಂದು ಹಗರಣ ಹಾಗೂ ವರ್ತಕ ಸಮುದಾಯಕ್ಕೆ ಲಾಭ ತರುವ ಯೋಜನೆ ಎಂದು ಟೀಕಿಸಿದೆ. ಮುಖ್ಯವಾದ ಸಂಗತಿಯೆಂದರೆ ಹಿಂದುಳಿದ ರಾಯಲ್ ಸೀಮಾದ ನಿವಾಸಿಗಳ ಒಂದು ವಲಯ ಅಮರಾವತಿಯನ್ನು ರಾಜಧಾನಿ ಮಾಡುವ ನಿರ್ಧಾರವೇ ಏಕಪಕ್ಷೀಯ ಎನ್ನುತ್ತಿದೆ. ‘ನಾವು ಅಮರಾವತಿ ವಿರೋಧಿಗಳು’ ಎಂದು ಸಾಫ್ಟ್‌ವೇರ್ ಇಂಜಿನಿಯರ್ ಓರ್ವರು ಆನ್ ಲೈನ್ ಪ್ರಚಾರಾಂದೋಲನ ಆರಂಭ ಮಾಡಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Write A Comment