ರಾಷ್ಟ್ರೀಯ

ಭಾರತದ ನೆಲೆಗಳ ಮೇಲೆ ಪಾಕ್ ದಾಳಿ : ರಾತ್ರಿಯಿಡೀ ಗುಂಡಿನ ಚಕಮಕಿ

Pinterest LinkedIn Tumblr

pakಜಮ್ಮು, ಅ.25- ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಭಾರತದ ಸೇನಾಪಡೆಗಳ ಮೇಲೆ ಇಂದು ದಾಳಿ ನಡೆಸಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಸೈನಿಕರು ಇಂದು ಮುಂಜಾನೆ ಸಾಂಬಾ ವಲಯದಲ್ಲಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ನಾಗರಿಕರಿಗೆ ಗಾಯವಾಗಿದ್ದು, ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಕಳೆದ ರಾತ್ರಿಯಿಂದಲೇ ಪಾಕ್ ಸೈನಿಕರು ಎಲ್‌ಒಸಿ ಬಳಿ ಇರುವ ಭಾರತದ ಗಡಿ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದಾರೆ.

ಪಾಕ್ ಸೈನಿಕರ ಪುಂಡಾಟಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ. ಎರಡೂ ಕಡೆ ಗುಂಡಿನ ಚಕಮಕಿ ನಡೆದಿದ್ದು, ದಾಳಿ ಮುಂದುವರೆದಿದೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ. ನಿನ್ನೆ ಮುಂಜಾನೆಯಷ್ಟೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಓರ್ವ ನಾಗರಿಕ ಮೃತಪಟ್ಟು ಇತರೆ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿರುವುದರಿಂದ ಗಡಿ ಗ್ರಾಮದಲ್ಲಿರುವ ನಾಗರಿಕರು ಗ್ರಾಮ  ಬಿಟ್ಟು ಸುರಕ್ಷಿತ ಸ್ಥಳಗಳತ್ತ ತೆರಳುತ್ತಿದ್ದಾರೆ.

ನಮಗೆ ಯಾವ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಯುತ್ತದೆ ಎಂಬುದು ತಿಳಿಯುತ್ತಿಲ್ಲ. ಪದೇ ಪದೇ ನಮ್ಮ ಮೇಲೆ ದಾಳಿ ನಡೆಸಲಾಗುತ್ತದೆ. ಜೀವ ಭಯದಲ್ಲೇ ಕಾಲ ನೂಕುವಂತಾಗಿದೆ. ಹೀಗಾಗಿ ನಾವು ಗ್ರಾಮ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಹೋಗುತ್ತಿದ್ದೇವೆಂದು ಚರಣ್‌ಸಿಂಗ್ ಎಂಬ ನಿವಾಸಿ ಹೇಳಿದ್ದಾನೆ. ಪಾಕ್ ಸೈನಿಕರು ಉದ್ದೇಶಪೂರ್ವಕವಾಗಿ ಗಡಿಯಲ್ಲಿರುವ ಭಾರತೀಯರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿದೆ. ಹಬ್ಬ-ಹರಿದಿನಗಳಲ್ಲಿ ಅಸ್ಥಿರತೆ ಮತ್ತು ಭಯದ ವಾತಾವರಣ ಮೂಡಿಸುವುದು ಅದರ ಉದ್ದೇಶ. ನಮಗೆ ಇಲ್ಲಿನ ಪರಿಸ್ಥಿತಿ ಭಯ ಉಂಟುಮಾಡಿರುವುದರಿಂದ ಗ್ರಾಮ ತೊರೆಯಲು ತೀರ್ಮಾನಿಸಿದ್ದೇವೆ ಎಂದು ಮತ್ತೋರ್ವ ನಿವಾಸಿ ರಮೇಶ್ ಭಾರತಿ ತನ್ನ ನೋವು ತೋಡಿಕೊಂಡಿದ್ದಾನೆ.

Write A Comment