ಅಂತರಾಷ್ಟ್ರೀಯ

ಪ್ರಶಸ್ತಿ ವಾಪಸಿ: ಸಾಹಿತಿಗಳಿಗೆ ಪೆನ್ ಬೆಂಬಲ

Pinterest LinkedIn Tumblr

Jhon2

ವಾಶಿಂಗ್ಟನ್,ಅ.19: ಭಾರತದಲ್ಲಿ ಹೆಚ್ಚುತ್ತಿರುವ ‘ಅಸಹಿಷ್ಣುತೆ’ಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಸಾಹಿತಿಗಳಿಗೆ ಜಾಗತಿಕ ಬರಹಗಾರರ ಸಂಘ (ಪೆನ್) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಹಾಗೂ ಸಂವಿಧಾನವು ಖಾತರಿಪಡಿಸಿರುವ ವಾಕ್‌ಸ್ವಾತಂತ್ರದ ಹಕ್ಕನ್ನು ಕಾಪಾಡುವಂತೆ ಅದು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ದಾದ್ರಿ ಘಟನೆ, ಕಲಬುರ್ಗಿ ಹತ್ಯೆ ಸೇರಿದಂತೆ ದೇಶದಲ್ಲಿ ‘ಅಸಹಿಷ್ಣುತೆ’ಯ ವಿರುದ್ಧ ಪ್ರತಿಭಟನೆಯಾಗಿ ತಮ್ಮ ಪ್ರತಿಷ್ಠಿತ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಬರಹಗಾರರು ಹಾಗೂ ಕಲಾವಿದರಿಗೂ ಕೆನಡಾದ ಕ್ಯುಬೆಕ್ ನಗರದಲ್ಲಿ ನಡೆದ 81ನೆ ಪೆನ್ ಅಂತಾರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನವು ಬೆಂಬಲ ವ್ಯಕ್ತಪಡಿಸಿದೆ.

ಸಾಹಿತಿಗಳು ಹಾಗೂ ಬರಹಗಾರರು ಸೇರಿದಂತೆ ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಲು ಭಾರತ ಸರಕಾರವು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವ ಪತ್ರವೊಂದನ್ನು ರಾಷ್ಟ್ರಪತಿ, ಪ್ರಧಾನಿ ಹಾಗೂ ಸಾಹಿತ್ಯ ಅಕಾಡಮಿಗೆ, ಪೆನ್‌ಇಂಟರ್‌ನ್ಯಾಶನಲ್ ಅಧ್ಯಕ್ಷ ಜಾನ್ ರಾಲ್ಸೊಟನ್ ಸೌಲ್ ಬರೆದಿದ್ದಾರೆ.

ಅಕಾಡಮಿ ಪ್ರಶಸ್ತಿಗಳನ್ನು ಹಿಂದಿರುಗಿಸಿರುವ ಐವತ್ತಕ್ಕೂ ಅಧಿಕ ಕಾದಂಬರಿಕಾರರು, ವಿದ್ವಾಂಸರು, ಕವಿಗಳು ಹಾಗೂ ಚಿಂತಕರೊಂದಿಗೆ ನಾವು ಏಕತೆಯನ್ನು ಪ್ರದರ್ಶಿಸುತ್ತಿದ್ದೇವೆ’’ ಎಂದು ಪತ್ರವು ತಿಳಿಸಿದೆ.

ಪೆನ್ ಇಂಟರ್‌ನ್ಯಾಶನಲ್ ಅಸೋಸಿಯೇಶನ್‌ನ 81ನೆ ಕಾಂಗ್ರೆಸ್ ಅಧಿವೇಶನದಲ್ಲಿ 150 ದೇಶಗಳ ಸಾಹಿತಿಗಳು ಭಾಗವಹಿಸಿದ್ದರು. ಖ್ಯಾತ ವಿದ್ವಾಂಸ ಹಾಗೂ ಚಿಂತಕ ಎ.ಎಂ.ಕಲಬುರ್ಗಿ ಅವರ ಹತ್ಯೆಯ ಆನಂತರ ಭಾರತದಲ್ಲಿ ಭುಗಿಲೆದ್ದಿರುವ ಬಿಕ್ಕಟ್ಟಿನ ಬಗ್ಗೆ ಸಮಾವೇಶವು ತೀವ್ರ ಆತಂಕ ವ್ಯಕ್ತಪಡಿಸಿದೆಯೆಂದು ಸೌಲ್ ಪತ್ರದಲ್ಲಿ ತಿಳಿಸಿದ್ದಾರೆ.

ಸಾಹಿತಿಗಳು, ಕಲಾವಿದರು ಸೇರಿದಂತೆ ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಲು ಭಾರತ ಸರಕಾರವು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಮಾವೇಶದಲ್ಲಿ ಪಾಲ್ಗೊಂಡ ಪ್ರತಿನಿಧಿಗಳು ಆಗ್ರಹಿಸಿದ್ದಾರೆಂದು ಅವರು ಹೇಳಿದ್ದಾರೆ. ವಿಭಿನ್ನ ಅನಿಸಿಕೆಗಳಿಗೆ ತನ್ನ ಸಚಿವರು ಸಹಿಷ್ಣುತೆ ತೋರಬಲ್ಲರೆಂಬುದನ್ನು ಸರಕಾರವು ಸಾಹಿತಿ ಹಾಗೂ ಕಲಾವಿದ ಸಮುದಾಯಕ್ಕೆ ಭರವಸೆ ನೀಡಬೇಕು. ಎಂ.ಎಂ. ಕಲಬುರ್ಗಿ, ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಅವರ ಹತ್ಯೆ ಪ್ರಕರಣವು ತ್ವರಿತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು ಹಾಗೂ ಅವರ ಹಂತಕರಿಗೆ ಶಿಕ್ಷೆಯಾಗಬೇಕೆಂದು’’ ಅವರು ಹೇಳಿದ್ದಾರೆ.

ಪೆನ್‌ಇಂಟರ್‌ನ್ಯಾಶನಲ್, ಜಗತ್ತಿನಾದ್ಯಂತದ ಸಾಹಿತಿಗಳ ಮುಂಚೂಣಿ ಸಂಘಟನೆಯಾಗಿದ್ದು, ಸಾಹಿತ್ಯಕ್ಕೆ ಉತ್ತೇಜನ ನೀಡುವ ಹಾಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಿಸ ಶ್ರಮಿಸುತ್ತಿದೆ.

Write A Comment