ರಾಷ್ಟ್ರೀಯ

ಶಾಲೆಗಳಲ್ಲಿ ಜಂಕ್‌ಫುಡ್ ನಿರ್ಬಂಧ: ಎಫ್‌ಎಸ್‌ಎಸ್‌ಎಐ ಚಿಂತನೆ

Pinterest LinkedIn Tumblr

food-debate

ಹೊಸದಿಲ್ಲಿ, ಅ.19: ಶಾಲೆಗಳಲ್ಲಿ ಹಾಗೂ ಸುತ್ತಮುತ್ತ ನೂಡಲ್ಸ್, ಚಿಪ್ಸ್, ಕಾರ್ಬೊನೇಟೆಡ್ ಪಾನೀಯಗಳು ಹಾಗೂ ಮಿಠಾಯಿಗಳು ಸಹಿತ ಜಂಕ್ ಆಹಾರ ವಸ್ತುಗಳ ಮಾರಾಟಕ್ಕೆ ನಿರ್ಬಂಧ ಹೇರಲು ಆಹಾರ ಸುರಕ್ಷಾ ನಿಯಂತ್ರಕ ಎಫ್‌ಎಸ್‌ಎಸ್‌ಎಐ ಚಿಂತನೆ ನಡೆಸಿದೆ.

ಮಕ್ಕಳಲ್ಲಿ ಜಂಕ್ ಆಹಾರ ಸೇವನೆಯ ಪ್ರವೃತ್ತಿಯನ್ನು ತಡೆಯಲು ಶಾಲೆಗಳಲ್ಲಿ ಪರಿಪೂರ್ಣ ಹಾಗೂ ಪೌಷ್ಟಿಕ ಆಹಾರದ ಲಭ್ಯತೆಯ ಬಗ್ಗೆ ತನ್ನ ಕರಡು ಮಾರ್ಗಸೂಚಿಯೊಂದಿಗೆ ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಚ್‌ಎಫ್‌ಎಸ್‌ಎಸ್) ಮುಂದೆ ಬಂದಿದೆ.

‘ಮಕ್ಕಳು ತಮ್ಮ ಆಹಾರದ ಅತ್ಯುತ್ತಮ ತೀರ್ಪುಗಾರರಲ್ಲ’ ಎಂದಿರುವ ಪ್ರಾಧಿಕಾರ, ಹೆಚ್ಚು ಕೊಬ್ಬು, ಉಪ್ಪು ಹಾಗೂ ಸಕ್ಕರೆಯಿರುವ (ಎಚ್‌ಎಫ್‌ಎನ್‌ಎಸ್) ಆಹಾರವನ್ನು ಪ್ರಾಯೋಜಿಸಲು ಶಾಲೆಗಳು ಸೂಕ್ತ ಸ್ಥಳಗಳಲ್ಲವೆಂದು ಅಭಿಪ್ರಾಯಿಸಿದೆ.

ಶಾಲೆಗಳಲ್ಲಿರುವ ಕ್ಯಾಂಟೀನುಗಳನ್ನು ವಾಣಿಜ್ಯಕ ಮಳಿಗೆಗಳಂತೆ ಪರಿಗಣಿಸಬಾರದು. ಪೌಷ್ಟಿಕ, ಪರಿಪೂರ್ಣ ಹಾಗೂ ಆರೋಗ್ಯಕರ ಆಹಾರವನ್ನು ಒದಗಿಸುವಂತಹ ಕ್ಯಾಂಟೀನ್ ನೀತಿಯೊಂದನ್ನು ಶಾಲೆಗಳು ಅಭಿವೃದ್ಧಿಪಡಿಸಬೇಕೆಂದು ಅದು ಹೇಳಿದೆ.

ಶಾಲೆಗಳಲ್ಲಿ ಹಾಗೂ 50 ಮೀ. ವ್ಯಾಪ್ತಿಯಲ್ಲಿ ಅತ್ಯಂತ ಸಾಮಾನ್ಯ ಎಚ್‌ಎಫ್‌ಎಸ್‌ಎಸ್ ತಿನಸುಗಳ ಲಭ್ಯತೆಯನ್ನು ನಿರ್ಬಂಧಿಸುವಂತೆ ಅಥವಾ ಮಿತಗೊಳಿಸುವಂತೆ ಪ್ರಾಧಿಕಾರ ಸಲಹೆ ನೀಡಿದೆ. ಚಿಪ್ಸ್, ಸಿಹಿ ಕಾರ್ಬೊನೇಟೆಡ್ ಹಾಗೂ ನಾನ್ ಕಾರ್ಬೊನೇಟೆಡ್ ಪಾನೀಯಗಳು, ತಿನ್ನಲು ಸಿದ್ಧವಾದ ನೂಡಲ್‌ಗಳು, ಪಿಜ್ಜಾಗಳು, ಬರ್ಗರ್‌ಗಳು ಹಾಗೂ ಮಿಠಾಯಿ ವಸ್ತುಗಳಂತಹ ಅತ್ಯಂತ ಸಾಮಾನ್ಯ ಎಚ್‌ಎಫ್‌ಎಸ್‌ಎಸ್(ಜಂಕ್) ಆಹಾರ ವಸ್ತುಗಳ ಸೇವನೆ ಹಾಗೂ ಲಭ್ಯತೆಯನ್ನು ನಿರ್ಬಂಧಿಸುವುದು ಹಾಗೂ ಮಿತಗೊಳಿಸುವುದು ಇದರ ಉದ್ದೇಶವಾಗಿದೆಯೆಂದು ಆಹಾರ ಸುರಕ್ಷಾ ಕಾವಲು ನಾಯಿ ತಿಳಿಸಿದೆ.

ಮಗುವು ಹೆತ್ತವರ ನಿಗಾದಲ್ಲಿರದ ಶಾಲೆಗಳು ಹಾಗೂ ಸುತ್ತಲ 50 ಮೀ. ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಉತ್ತೇಜಿಸಲ್ಪಡುವ ಹಾಗೂ ಜಾಹೀರು ಮಾಡಲಾಗುತ್ತಿರುವ ಜಂಕ್ ಆಹಾರವನ್ನು ನಿರ್ಬಂಧಿಸಬೇಕು. ತನ್ನ ಈ ಪ್ರಸ್ತಾಪದ ಔಚಿತ್ಯವನ್ನು ವಿವರಿಸಿರುವ ಪ್ರಾಧಿಕಾರ, ಪೌಷ್ಟಿಕಾಂಶಗಳ ರಾಷ್ಟ್ರೀಯ ಸಂಸ್ಥೆಯ(ಎನ್‌ಐಎನ್) ಮಾರ್ಗಸೂಚಿಯ ಪ್ರಕಾರ ಈ ಆಹಾರ ವಸ್ತುಗಳು ಹೆಚ್ಚು ಕೊಬ್ಬು, ಸಕ್ಕರೆ, ಉಪ್ಪು ಹಾಗೂ ಕಡಿಮೆ ಸಾರಜನಕ, ನಾರು ಹಾಗೂ ಬೀಜಗಳನ್ನು ಹೊಂದಿರುವ ಕಾರಣ ಅನಾರೋಗ್ಯಕರವೆಂದು ಪರಿಗಣಿಸಲ್ಪಟ್ಟಿವೆ.

ಈ ಮಾರ್ಗ ಸೂಚಿಗಳನ್ನು ದೇಶಾದ್ಯಂತ ಜಾರಿಗೊಳಿಸುವುದಕ್ಕಾಗಿ ಮೂರು ತಿಂಗಳೊಳಗಾಗಿ ಅವುಗಳಿಗೆ ನಿರ್ಬಂಧ ಅಥವಾ ನಿವೇಶನಗಳ ರೂಪ ನೀಡುವಂತೆ 2015ರ ಮಾರ್ಚ್‌ನಲ್ಲಿ ದಿಲ್ಲಿ ಹೈಕೋರ್ಟ್ ಆಹಾರ ಸುರಕ್ಷಾ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು.

Write A Comment