ಹೊಸದಿಲ್ಲಿ, ಅ.19: ಪಟಾಕಿಗಳ ಕೆಟ್ಟ ಪರಿಣಾಮದ ಬಗ್ಗೆ ಜನರಿಗೆ ಮಾಹಿತಿ ನೀಡಿ ಸುಡುಮದ್ದನ್ನು ಉಪಯೋಗಿಸದಂತೆ ಅವರಿಗೆ ಸಲಹೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಸುಡುಮದ್ದಿನ ದುಷ್ಪರಿಣಾಮದ ಬಗ್ಗೆ ಕೇಂದ್ರ ಹಾಗೂ ಎಲ್ಲ ರಾಜ್ಯ ಸರಕಾರಗಳು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕು ಹಾಗೂ ಅದರಂತೆಯೇ ಜನರಿಗೆ ಸಲಹೆ ನೀಡಬೇಕು. ಅದರಂತೆಯೇ, ಸುಡುಮದ್ದಿನ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳಿಗೆ ಬೋಧಿಸುವಂತೆಯೂ ತಾವು ಶಾಲಾ-ಕಾಲೇಜುಗಳ ಅಧ್ಯಾಪಕರಿಗೆ, ಪ್ರಾಧ್ಯಾಪಕರಿಗೆ, ಸಹಾಯಕ ಪ್ರೊಫೆಸರರಿಗೆ, ನಿರ್ದೇಶನ ನೀಡುತ್ತಿದ್ದೇವೆಂದು ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಹಾಗೂ ಅಮಿತಾಭ್ ರಾಯ್‌ಯವರನ್ನೊಳಗೊಂಡ ಪೀಠವೊಂದು ಹೇಳಿದೆ.
6ರಿಂದ 14 ತಿಂಗಳು ಹರೆಯದೊಳಗಿನ ಮೂವರು ಹಸುಳೆಗಳ ಪರವಾಗಿ ಅವರ ತಂದೆಯಂದಿರು ದಾಖಲಿಸಿದ್ದ ಅರ್ಜಿಯೊಂದರ ವಿಚಾರಣೆಯನ್ನು ಪೀಠ ನಡೆಸುತ್ತಿತ್ತು. ಈ ವಿಷಯದಲ್ಲಿ ಸಂಬಂಧಿತ ಇಲಾಖೆಗಳೊಂದಿಗೆ ಸಮಾಲೋಚಿಸಿ, ಅರ್ಜಿದಾರ ಶಿಶುಗಳ ಪರ ಹಿರಿಯ ವಕೀಲ ಎ.ಎಂ. ಸಿಂಘ್ವಿ ನೀಡಿರುವ ಸಲಹೆಗಳ ಕುರಿತು ಒಂದು ವಾರದೊಳಗೆ ಉತ್ತರ ನೀಡುವಂತೆಯೂ ಅದು ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಸಿಂಘ್ವಿ ಭಾರೀ ಶಬ್ದದ ಪಟಾಕಿಗಳ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸುಡುಮದ್ದು ಸಿಡಿಸಲು ರಾತ್ರಿ 7ರಿಂದ 9 ಗಂಟೆಯ ವರೆಗೆ ಸಮಯ ಮಿತಿ ವಿಧಿಸಲು ಹಾಗೂ ಅಪಾಯಕಾರಿ ಪಟಾಕಿಗಳಿಗೆ ಪರವಾನಿಗೆ ನಿಯಂತ್ರಿಸಲು ಒಂದು ನಿಯಂತ್ರಣ ಕಿಂಡಿಯಿರಬೇಕು. ಸುಡುಮದ್ದಿನ ಕೆಟ್ಟ ಪರಿಣಾಮದ ಬಗ್ಗೆ ಸರಕಾರ ವ್ಯಾಪಕ ಪ್ರಚಾರ ನೀಡಬೇಕು ಹಾಗೂ ಅದರ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸಬೇಕೆಂದು ಸಿಂಘ್ವಿ ಸಲಹೆ ನೀಡಿದ್ದಾರೆ.
ಸುಡುಮದ್ದಿನ ದುಷ್ಪರಿಣಾಮದ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಕೇಂದ್ರ ಸರಕಾರವು ಈಗಾಗಲೇ ಸಾಕಷ್ಟು ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆಯೆಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು.
ಮಾಲಿನ್ಯ ಮುಕ್ತ ವಾತಾವರಣದಲ್ಲಿ ಬೆಳೆಯುವ ತಮ್ಮ ಹಕ್ಕುಗಳನ್ನು ಒತ್ತಿ ಹೇಳಿರುವ ಅರ್ಜಿದಾರರು, ದೇಶದ ರಾಜಧಾನಿಯಲ್ಲಿ ಪಟಾಕಿಗಳ ಮಾರಾಟಕ್ಕೆ ಸರಕಾರಿ ಸಂಸ್ಥೆಗಳು ಪರವಾನಿಗೆ ನೀಡದಂತೆ ಆದೇಶಿಸಬೇಕೆಂದು ಸುಪ್ರೀಂಕೋರ್ಟನ್ನು ಕೋರಿದ್ದಾರೆ.
ಹಬ್ಬಗಳ ಸಮಯದಲ್ಲಿ ದಿಲ್ಲಿಯಲ್ಲಿ ವ್ಯಾಪಕ ಸುಡುಮದ್ದಿನ ಬಳಕೆಯಿಂದ ಮಕ್ಕಳಲ್ಲಿ ಅಸ್ತಮಾದಂತಹ ತೀವ್ರ ಕಾಯಿಲೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ ಹಾಗೂ ಶ್ವಾಸಕೋಶಗಳ ಸ್ಥಿತಿಯು ಕೆಡುವ ಸಂಭವವಿದೆಯೆಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.
ತಾವು ಶ್ವಾಸಕೋಶದ ಕಾಯಿಲೆ, ಅಸ್ತಮಾ, ಕೆಮ್ಮು, ಬ್ರಾಂಕೈಟೀಸ್, ನರ ವ್ಯವಸ್ಥೆಯ ಕುಂಠಿತ ಹಾಗೂ ಶ್ರವಣ ದೋಷಗಳಿಗೆ ಈಡಾಗುವ ಅತೀ ಹೆಚ್ಚು ಅಪಾಯವಿದೆಯೆಂದು ಅರ್ಜಿದಾರ ಶಿಶುಗಳು ಹೇಳಿವೆ.
