ರಾಷ್ಟ್ರೀಯ

2016 ಮಾರ್ಚ್‌ನಲ್ಲಿ ರಾಹುಲ್ ಪಟ್ಟಾಭಿಷೇಕ

Pinterest LinkedIn Tumblr

Rahul____________

ಹೈದರಾಬಾದ್,ಅ.19: ರಾಹುಲ್ ಗಾಂಧಿಯವರು ಮುಂದಿನ ವರ್ಷದ ಮಾರ್ಚ್ ನಲ್ಲಿ ಅಥವಾ ಅದಕ್ಕೂ ಮೊದಲು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಲಿದ್ದು, ಅವರು ತನ್ನೊಂದಿಗೆ ಹೊಸ ತಂಡವನ್ನೇ ತರಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಪರಿಸರ ಸಚಿವ ಜೈರಾಂ ರಮೇಶ್ ಅವರು ರವಿವಾರ ಇಲ್ಲಿ ಹೇಳಿದರು. ಆದರೆ ಅಧಿಕಾರ ಸ್ವೀಕಾರ ನಿಖರವಾಗಿ ಎಂದು ನಡೆಯುತ್ತದೆ ಎನ್ನುವುದು ಸೋನಿಯಾ ಗಾಂಧಿ ಮತ್ತು ರಾಹುಲ್ ಅವರಿಗೆ ಮಾತ್ರ ಗೊತ್ತು ಎಂದರು.

ನೂತನ ವ್ಯವಸ್ಥೆಯಡಿ 60ವರ್ಷಕ್ಕೂ ಹೆಚ್ಚಿನ ಪ್ರಾಯದ ನಾಯಕರ ಪಾತ್ರ ಸಲಹೆಗಳನ್ನು ನೀಡುವುದಕ್ಕಷ್ಟೇ ಸೀಮಿತವಾಗಬಹುದು ಎಂದು ಅವರು ಸುಳಿವು ನೀಡಿದರು. ರಾಹುಲ್ ಅಧಿಕಾರ ಸ್ವೀಕರಿಸಿದಾಗ ಯಾವುದೇ ಅವಾಂತರಗಳಾಗುವುದಿಲ್ಲ. ಮೋದಿಯವರು ಹಿರಿಯ ನಾಯಕರನ್ನು ನಡೆಸಿಕೊಂಡಂತೆ ರಾಹುಲ್ ನಡೆಸಿಕೊಳ್ಳುತ್ತಾರೆಂದು ತಾನು ಭಾವಿಸಿಲ್ಲ. ಎಲ್.ಕೆ.ಆಡ್ವಾಣಿ,ಮುರಳಿ ಮನೋಹರ ಜೋಶಿ,ಯಶವಂತ್ ಸಿನ್ಹಾ,ಜಸ್ವಂತ್ ಸಿಂಗ್…ಹೀಗೆ ಪ್ರತಿಯೊಬ್ಬರನ್ನೂ ಮೋದಿ ‘ಸೈಬೀರಿಯಾ’ಕ್ಕೆ ರವಾನಿಸಿದ್ದಾರೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿರುವ ರಮೇಶ್ ಇಲ್ಲಿ ಸಂದರ್ಶನವೊಂದರಲ್ಲಿ ಹೇಳಿದರು.

ರಾಹುಲ್ ಅಧಿಕಾರ ಸ್ವೀಕರಿಸುವಾಗ ಇಡೀ ತಂಡವೊಂದು ಅವರೊಂದಿಗೆ ಇರಲಿದೆ. ಹೀಗಾಗಿ ಪಕ್ಷದ ಸ್ವರೂಪ ಮತ್ತು ತನ್ನ ಹೊಸ ತಂಡದಲ್ಲಿರುವವರನ್ನು ಗುರುತಿಸುವಲ್ಲಿ ಅವರು ಬಹಳಷ್ಟು ಸಮಯವನ್ನು ಕಳೆಯುತ್ತಿದ್ದಾರೆ ಎಂದರು.

ಕಾಂಗ್ರೆಸ್ ನಾಯಕತ್ವದ ನಿರೀಕ್ಷಿತ ಬದಲಾವಣೆಯು ನಿಸ್ಸಂಶಯವಾಗಿ ಒಂದು ತಲೆಮಾರಿನ ಬದಲಾವಣೆಯಾಗಲಿದೆ. ಇಂತಹ ಬದಲಾವಣೆ 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ರಾಜೀವ್ ಗಾಂದಿಯವರು ಪ್ರಧಾನಿಯಾದಾಗ ಮೊದಲ ಬಾರಿ ಕಂಡು ಬಂದಿತ್ತು ಎಂದ ಅವರು, ನಮಗೀಗ ಕಾಂಗ್ರೆಸಿನ ಪ್ರಮುಖ ಹುದ್ದೆಗಳಲ್ಲಿ 30-40 ವರ್ಷ ವಯೋಮಾನದವರು ಬೇಕು. 60-80ರ ವಯೋಮಾನದವರ ಕಾಲವೀಗ ಮುಗಿಯಿತು. ಭಾರತದ ಸರಾಸರಿ ವಯೋಮಾನ ಈಗ 28 ವರ್ಷ. ಪಕ್ಷವೂ ಭಾರತವನ್ನು ಪ್ರತಿಬಿಂಬಿಸಬೇಕಾಗಿದೆ. ಹೀಗಾಗಿ ತಲೆಮಾರು ಬದಲಾವಣೆ ಅಗತ್ಯವಿದೆ ಎಂದರು.

Write A Comment