ಕರ್ನಾಟಕ

ಕಾರವಾರದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ ದರೋಡೆಗೆ ವಿಫಲ ಯತ್ನ; ಮೂವರ ಬಂಧನ

Pinterest LinkedIn Tumblr

kallaru111

ಕಾರವಾರ: ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ಗೆ ನುಗ್ಗಿ ದರೋಡೆಗೆ ಯತ್ನಿಸಿದ ಐವರು ಆರೋಪಿಗಳಲ್ಲಿ ಮೂವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ಮುಂಜಾನೆ ತಾಲ್ಲೂಕಿನ ಅಮದಳ್ಳಿಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ಮಣಿಕಂಠ, ರಾಜಶೇಖರ್‌ ಹಾಗೂ ಸಂಪತ್‌ ಬಂಧಿತ ಆರೋಪಿಗಳು. ಸಾರ್ವಜನಿಕರಿಂದ ಪೆಟ್ಟು ತಿಂದ ಈ ಆರೋಪಿಗಳು ಸದ್ಯ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಾರಿಯಾಗಿರುವ ಮತ್ತಿಬ್ಬರ ಸೆರೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

‘ಬಾವಿಗೆ ಬಿದ್ದು ಗಾಯಗೊಂಡಿರುವ ಕಳ್ಳರನ್ನು ಪ್ರಥಮ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ತಮಿಳುನಾಡು ಮೂಲದವರಾದ ಈ ಕಳ್ಳರ ಗುಂಪು ಬೇರೆಡೆಗಳಲ್ಲಿಯೂ ದರೋಡೆ ನಡೆಸಿದೆಯೇ ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗುವುದು’ ಎಂದು ಡಿವೈಎಸ್ಪಿ ಪ್ರಮೋದ್‌ರಾವ್ ತಿಳಿಸಿದರು.

‘ಬ್ಯಾಂಕ್​ನಲ್ಲಿ ಸುಮಾರು ₨ 2 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಇತ್ತು. ಸ್ಥಳೀಯರ ಸಮಯ ಪ್ರಜ್ಞೆಯಿಂದ ಕಳ್ಳರ ಸಂಚು ವಿಫಲವಾಗಿದೆ’ ಎಂದು ಶಾಖೆಯ ವ್ಯವಸ್ಥಾಪಕಿ ಶಿಲ್ಪಾ ತಿಳಿಸಿದರು.

ಘಟನೆ ವಿವರ: ತಾಲ್ಲೂಕಿನ ಅಮದಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ–17 ಬದಿಯಲ್ಲೇ ಇರುವ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ಗೆ ಕನ್ನ ಹಾಕಲು ಭಾನುವಾರ ರಾತ್ರಿ ಐವರು ದರೋಡೆಕೋರರು ಮುಂದಾಗಿದ್ದಾರೆ. ಕಿಟಕಿಯನ್ನು ಮೀಟಿ ಬ್ಯಾಂಕ್‌ನೊಳಗೆ ನುಗ್ಗಿದ ಕಳ್ಳರು ಮೊದಲು ಸಿ.ಸಿ ಟಿವಿ ಕ್ಯಾಮೆರಾಗಳನ್ನು ನಾಶಪಡಿಸಿದ್ದಾರೆ. ಬಳಿಕ ಒಳಗಿನ ರೋಲಿಂಗ್‌ ಶೆಟರ್‌ ಮೇಲೆತ್ತಿ ಸೇಫ್‌ಲಾಕರ್ ಅನ್ನು ಒಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ಜೋರಾದ ಶಬ್ದ ಕೇಳಿಬಂದಿದೆ. ಜನರು ಒಟ್ಟಾಗಿ ಬ್ಯಾಂಕ್‌ನತ್ತ ಧಾವಿಸಿಸುತ್ತಿದ್ದಂತೆ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ತಪ್ಪಿಸಿಕೊಳ್ಳುವ ಭರದಲ್ಲಿದ್ದ ಮೂವರು ಕಳ್ಳರು ಮನೆಯೊಂದರ ಆವರಣದಲ್ಲಿದ್ದ 20 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಆ ಸಂದರ್ಭದಲ್ಲಿ ಆಕ್ರೋಶಗೊಂಡಿದ್ದ ಸ್ಥಳೀಯರು ಆರೋಪಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Write A Comment