ನವದೆಹಲಿ/ಮುಂಬೈ (ಪಿಟಿಐ): ಸುಧೀಂದ್ರ ಕುಲಕರ್ಣಿ ಅವರ ಮೊಗಕ್ಕೆ ಕಪ್ಪು ಬಣ್ಣ ಬಳಿದ ಘಟನೆಯನ್ನು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಎಎಪಿ ಕೂಡ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದೆ. ಆದರೆ, ಶಿವಸೇನೆ ಮಾತ್ರ ಘಟನೆಯನ್ನು ಸಮರ್ಥಿಸಿಕೊಂಡಿದೆ.
ದೇಶಕ್ಕೆ ಕಳಂಕ: ‘ಇದನ್ನು ಯಾರೇ ಮಾಡಿದ್ದರೂ ನಾನು ಖಂಡಿಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ಇಂಥ ಘಟನೆಗಳು ನಡೆದಿವೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ದೃಷ್ಟಿಕೋನದಿಂದಲೂ ಅದು ಸ್ವಾಗತಾರ್ಹ ಅಲ್ಲ. ಇದು ಹಿಂಸಾಚಾರ ಅಥವಾ ಅಸಹಿಷ್ಣುತೆಯಾಗಿ ಬದಲಾಗುತ್ತದೆ’ ಎಂದು ಅಡ್ವಾಣಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೇ, ‘ಇದು ದೇಶಕ್ಕೆ ಆಘಾತಕಾರಿ ಸಂಗತಿ. ವಿಭಿನ್ನ ದೃಷ್ಟಿಕೋನಕ್ಕಾಗಿ ಪ್ರಜಾಪ್ರಭುತ್ವ ಸಹನೆ ಖಚಿತಪಡಿಸಬೇಕು’ ಎಂದಿದ್ದಾರೆ. ‘ಇದನ್ನು ಯಾರು ಮಾಡಿದ್ದಾರೋ ನನಗೆ ಗೊತ್ತಿಲ್ಲ. ಆದ್ದರಿಂದ ನಾನು ಯಾರನ್ನೂ ಹೆಸರಿಸುವುದಿಲ್ಲ. ಆದರೆ, ಇದನ್ನು ಯಾರು ಮಾಡಿದ್ದಾರೋ ಅವರು ದೇಶದ ಒಳ್ಳೆಯ ಹೆಸರನ್ನು ಕೆಡಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಖಂಡನೆ: ಕುಲಕರ್ಣಿ ಅವರ ಮುಖಕ್ಕೆ ಮಸಿ ಬಳಿದ ಘಟನೆಯನ್ನು ಕೇಂದ್ರ ಸಚಿವರು ಖಂಡಿಸಿದ್ದಾರೆ.
‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕಿದೆ. ಆದರೆ, ಈ ಬಗೆಯ ಪ್ರತಿಭಟನೆ ಸಮರ್ಥನೀಯವಲ್ಲ. ಇದು ನಮ್ಮ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೆ ವಿರುದ್ಧವಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
‘ಇದೊಂದು ಕೆಟ್ಟ ಮನಸ್ಥಿತಿ. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಮೂಲಭೂತ ಹಕ್ಕಿದೆ. ಆದರೆ, ಪ್ರತಿಭಟನೆಗೂ ಒಂದು ಮಾರ್ಗವಿದೆ. ಯಾರಿಗೂ ದೈಹಿಕ ತೊಂದರೆ ನೀಡಬಾರದು. ಇದು ಸರಿ ಅಲ್ಲ’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿದ್ದಾರೆ.
ಶಿವಸೇನೆ ಸಮರ್ಥನೆ: ಕಾರ್ಯಕರ್ತರು ಮಸಿ ಬಳಿದ ಘಟನೆಯನ್ನು ಶಿವಸೇನೆ ಮುಖಂಡ ಸಂಜಯ ರಾವುತ್ ಸಮರ್ಥಿಸಿಕೊಂಡಿದ್ದಾರೆ.
‘ಮಸಿ ಬಳಿಯುವುದು ಪ್ರಜಾತಾಂತ್ರಿಕ ಪ್ರತಿಭಟನೆಯ ಸಾತ್ವಿಕ ವಿಧಾನ. ಅವರು ಮಸಿಯ ಬಗೆಗೆ ಅಷ್ಟೋಂದು ಚಿಂತಿತರಾಗಿದ್ದಾರೆ. ನಮ್ಮ ಸೈನಿಕರ ಸತ್ತಾಗ ಹಾಗೂ ಅವರ ರಕ್ತ ಚಿಮ್ಮಿದಾಗ ಏನಾಗಿರಬೇಡ ಊಹಿಸಿ. ಅದು ಮಸಿ ಅಲ್ಲ; ನಮ್ಮ ಯೋಧರ ರಕ್ತ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಸಾರ್ವಜನಿಕರ ಆಕ್ರೋಶ ಹೇಗೆ ಆಸ್ಫೋಟಿಸುತ್ತದೆ ಎಂಬುದನ್ನು ಭವಿಷ್ಯ ನುಡಿಯಲಾಗದು. ಪಾಕಿಸ್ತಾನದ ರಕ್ತಪಾತ ಹಾಗೂ ಹಿಂಸಾಚಾರದಿಂದ ದೇಶದಲ್ಲಿನ ಜನರು ಸಿಟ್ಟಿಗೆದ್ದಿದ್ದಾರೆ. ಕಸೂರಿ ಅಥವಾ ಇನ್ನಾವುದೇ ವ್ಯಕ್ತಿಯ ವಿರುದ್ಧ ನಮಗೆ ವೈಯಕ್ತಿಕ ದ್ವೇಷವೇನಿಲ್ಲ’ ಎಂದೂ ಅವರು ನುಡಿದಿದ್ದಾರೆ.
ಬಂಧನಕ್ಕೆ ಆಗ್ರಹ: ಕುಲಕರ್ಣಿ ಅವರ ಮೊಗಕ್ಕೆ ಮಸಿ ಬಳಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
