
ಆರೋಪಿಗಳಾದ ಕೀರ್ತಿಗೌಡ, ಕಿರಣ್ಗೌಡ, ಮೋಹನ್ ಹಾಗೂ ಮಂಜುನಾಥ್
ಪಾಂಡವಪುರ: ಪ್ರೀತಿಸುವ ನೆಪದಲ್ಲಿ ಯುವತಿಯೊಬ್ಬಳನ್ನು ತಾಲ್ಲೂಕಿನ ಬೇಬಿಬೆಟ್ಟಕ್ಕೆ ಕರೆದೊಯ್ದ ಪ್ರಿಯತಮ, ತನ್ನಿಬ್ಬರು ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಇಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರಕ್ಕೆ ಸಹಕರಿಸಿದ ಯುವಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಕೆಆರ್ಎಸ್ ಸಮೀಪದ ಪಂಪ್ಹೌಸ್ ಬಳಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಅತ್ಯಾಚಾರಕ್ಕೀಡಾದ ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ಯಾಚಾರ ಮತ್ತು ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಕೆ.ಆರ್. ಮಿಲ್ ಕಾಲೊನಿಯ ಶ್ರೀನಿವಾಸ್ ಅವರ ಪುತ್ರ, ಯುವತಿಯ ಪ್ರಿಯತಮ ಕೀರ್ತಿಗೌಡ (23), ಬಸವರಾಜು ಅವರ ಪುತ್ರ ಕಿರಣ್ಗೌಡ (23), ದೇವರಾಜು ಅವರ ಪುತ್ರ ಮೋಹನ್ (26) ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಇವರು ಮೂಲತಃ ಶ್ರೀರಂಗಪಟ್ಟಣ ತಾಲ್ಲೂಕಿನ ಮೇಳಾಪುರ ಗ್ರಾಮದವರು. ಪಾಂಡವಪುರ ತಾಲ್ಲೂಕಿನ ಡಾಮಡಹಳ್ಳಿ ಗ್ರಾಮದ ಕೆಂಪೂಗೌಡ ಅವರ ಪುತ್ರ ಮಂಜುನಾಥ್ (21) ಎಂಬಾತನನ್ನು ಅತ್ಯಾಚಾರಕ್ಕೆ ಸಹಕರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಘಟನೆ ವಿವರ: ಅತ್ಯಾಚಾರ ಸಂತ್ರಸ್ತೆ ಮೈಸೂರಿನ ಕಾಲೇಜೊಂದರ ಪದವಿ ವಿದ್ಯಾರ್ಥಿನಿ. ತಂದೆ ಮೃತಪಟ್ಟಿದ್ದು, ಜೀವನೋಪಾಯಕ್ಕಾಗಿ ತಾಯಿ ಮನೆಗೆಲಸ ಮಾಡಿಕೊಂಡಿದ್ದಾರೆ. ಯುವತಿಗೆ ಕೀರ್ತಿಗೌಡ ಮೊಬೈಲ್ ಮೂಲಕ ಪರಿಚಿತನಾಗಿದ್ದ. ಬಳಿಕ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಅ. 9ರಂದು ಇಬ್ಬರೂ ದ್ವಿಚಕ್ರ ವಾಹನದಲ್ಲಿ ಕೆಆರ್ಎಸ್ಗೆ ತೆರಳಿದ್ದರು. ಪ್ರವಾಸಿ ತಾಣ ವೀಕ್ಷಿಸಿದ ನಂತರ ಕೆಆರ್ಎಸ್ ಸಮೀಪದ ಬೇಬಿಬೆಟ್ಟಕ್ಕೆ ಕರೆದೊಯ್ದ ಕೀರ್ತಿಗೌಡ, ಯುವತಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯೊಂದಿಗೆ ಬೇಬಿಬೆಟ್ಟಕ್ಕೆ ತೆರಳುವ ವಿಚಾರವನ್ನು ಕೀರ್ತಿಗೌಡ ತನ್ನ ಸ್ನೇಹಿತರಾದ ಕಿರಣ್ಗೌಡ ಹಾಗೂ ಮೋಹನ್ಗೆ ಮುಂಚೆಯೇ ತಿಳಿಸಿದ್ದ. ಮಂಜುನಾಥ ಸೇರಿದಂತೆ ಮೂವರು ಆರೋಪಿಗಳು ಅಲ್ಲಿಗೆ ಬಂದಿದ್ದಾರೆ. ಯುವತಿಯ ಮೇಲೆ ಹಲ್ಲೆ ನಡೆಸಿದ ಕಿರಣ್ ಹಾಗೂ ಮೋಹನ್ ಅತ್ಯಾಚಾರ ಎಸಗಿದ್ದಾರೆ. ಇದಕ್ಕೆ ಯುವತಿಯ ಪ್ರಿಯತಮ ಕೀರ್ತಿಯೇ ಕುಮ್ಮಕ್ಕು ನೀಡಿದ್ದ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಮಾಹಿತಿ ನೀಡಿದ್ದಾಳೆ.
ಘಟನೆಯ ಬಳಿಕ ಪ್ರೇಮಿಗಳ ನಡುವೆ ಗಲಾಟೆ ನಡೆದಿದೆ. ವಿಷಯವನ್ನು ಬಹಿರಂಗ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪಿಗಳು, ಯುವತಿಯನ್ನು ದ್ವಿಚಕ್ರ ವಾಹನದಲ್ಲಿ ಮೈಸೂರಿಗೆ ಕರೆತಂದು ಬಿಟ್ಟಿದ್ದಾರೆ. ವಿಷಯ ತಿಳಿದ ಪೋಷಕರು ಅ. 10ರಂದು ಪಾಂಡವಪುರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.