ಹಾವೇರಿ/ಬೆಂಗಳೂರು, ಅ.10: ಕಳಸಾ-ಬಂಡೂರಿ ಯೋಜನೆಯ ವಿವಾದ ಇತ್ಯರ್ಥ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆಯುವೆನೆಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ರಾಣೆಬೆನ್ನೂರಿನ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.
ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿದ್ದು, ರೈತರ ಹೋರಾಟಕ್ಕೆ ತಾನು ಸ್ಪಂದಿಸುವೆ, ಸಮಸ್ಯೆ ಪರಿಹಾರಕ್ಕೆ ಬದ್ಧ ಎಂದರು.
ಕಳಸಾ-ಬಂಡೂರಿ ಯೋಜನೆ ವಿವಾದ ಇತ್ಯರ್ಥಕ್ಕೆ ಮಹಾರಾಷ್ಟ್ರ, ಗೋವಾ, ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಾಲೋಚನೆ ನಡೆಸಬೇಕು ಎಂದ ಅವರು, ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವಂತೆ ಉಭಯ ನಾಯಕರಿಗೆ ಪತ್ರ ಬರೆಯುವೆ ಎಂದು ಭರವಸೆ ನೀಡಿದರು. ಕಳಸಾ-ಬಂಡೂರಿ ಸಮಸ್ಯೆ ಇತ್ಯರ್ಥಕ್ಕೆ ಪ್ರಧಾನಿ ಮೋದಿ ನಿರ್ಲಕ್ಷ ವಹಿಸಿದ್ದು, ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಆದುದರಿಂದ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದ ಅವರು, ಆರೇಳು ಜಿಲ್ಲೆಗಳ ಜನತೆಗೆ ಕುಡಿಯುವ ನೀರು ನೀಡುವ ಯೋಜನೆಗೆ ಪ್ರಧಾನಿ ವಿಶೇಷ ಆದ್ಯತೆ ನೀಡಬೇಕೆಂದು ಕೋರಿದರು.
ರೈತ ಸಾಂತ್ವನ ಯಾತ್ರೆ
ರಾಣೆಬೆನ್ನೂರು ತಾಲೂಕಿನಲ್ಲಿ 9 ಕಿ.ಮೀ. ಪಾದಯಾತ್ರೆ ನಡೆಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದರು. ಇಲ್ಲಿನ ಮೈದೂರಿನಲ್ಲಿ ಆತ್ಮಹತ್ಯೆಗೆ ಶರಣಾದ ರೈತ ಅಶೋಕ್ ಮಡಿವಾಳರ ಮನೆಗೆ ಭೇಟಿ ನೀಡಿ 2 ಲಕ್ಷ ರೂ.ಪರಿಹಾರದ ಚೆಕ್ ಅನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು.