ಬೆಂಗಳೂರು, ಅ. 10: ಕೋಮುವಾದಿಗಳು ಹಿರಿಯ ಸಂಶೋಧಕ ಕಲಬುರ್ಗಿಯನ್ನು ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಸಿಪಿಎಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅಭಿಪ್ರಾಯಿಸಿದ್ದಾರೆ.
ಗ್ರಾಮಭಾರತ ಸಾಂಸ್ಕೃತಿಕ ವೇದಿಕೆ ನಗರದ ವಾಡಿಯಾ ಸಭಾಂಗ ಣದಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಭೋಗ ಭಾರತ/ಸುಖಿ ಭಾರತ’ ಹಾಗೂ ‘ಗಾಂಧಿ: ನಾಲಿಗೆಯನ್ನು ನಂಬಿದ ನಾಯಕ’ ಪುಸ್ತಕಗಳನ್ನು ಲೋಕಾ ರ್ಪಣೆ ಮಾಡಿ ಅವರು ಮಾತನಾಡಿದರು.
ಸಂಶೋಧಕ ಕಲಬುರ್ಗಿಯವರ ಹತ್ಯೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಜೊತೆಗೆ ಹಿರಿಯ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ಸರಕಾರಕ್ಕೆ ಹಿಂದಿರುಗಿಸಿದ್ದಾರೆ. ಆ ಮೂಲಕ ಸರಕಾರದ ಮೇಲೆ ಒತ್ತಡ ತಂದಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಿಸಿದರು.
ಮಹಾರಾಷ್ಟ್ರದಲ್ಲಿ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಹತ್ಯಾ ಸರಣಿಗಳು ಮುಂದುವರಿಯುತ್ತಿವೆ. ಇತ್ತೀಚೆಗಷ್ಟೆ ದಾದ್ರಿಯಲ್ಲಿ ದನದ ಮಾಂಸವನ್ನು ಸಂಗ್ರಹಿಸಿದ್ದಾನೆ ಎಂಬ ಕಾರಣಕ್ಕೆ ಮುಸ್ಲಿಮ್ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಂತಹ ಹತ್ಯಾ ಸರಣಿಗಳು ನಿಲ್ಲಬೇಕಾದರೆ ಪ್ರಗತಿಪರರು ಸಂಘಟಿತಗೊಂಡು, ತಮ್ಮ ಶಕ್ತಿಯನ್ನು ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದು ಯೆಚೂರಿ ತಿಳಿಸಿದರು.
ದೇಶದಲ್ಲಿ ಶೇ.90ರಷ್ಟು ಕುಟುಂಬಗಳ ಆದಾಯ 10 ಸಾವಿರ ಕ್ಕಿಂತಲೂ ಕಡಿಮೆಯಿದೆ. ಅದೇ ಹೊತ್ತಿನಲ್ಲಿ ಭಾರತದ ಇಡೀ ಸಂಪತ್ತು ಕೇವಲ ನೂರು ಮಂದಿಯ ಬಳಿಯಿದೆ. ಇಂತಹ ಬಂಡವಾಳಶಾಹಿಗ ಳನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತೀ ತಿಂಗಳು ವಿದೇಶ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆಂದು ಅವರು ಲೇವಡಿ ಮಾಡಿದರು. ಕೇಂದ್ರ ಸರಕಾರ ದೇಶದ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹೀಗಾಗಿ ಅನ್ಯಮಾರ್ಗ ಕಾಣದ ರೈತ ರು ಆತ್ಮಹತ್ಯೆಗೆ ಈಡಾಗುತ್ತಿದ್ದಾರೆ. ಈ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದ ಮೋದಿ ವಿಶೇಷ ಆರ್ಥಿಕ ವಲಯಗಳನ್ನು ನಿರ್ಮಿಸಿ, ಮತ್ತಷ್ಟು ರೈತರ ನ್ನು ಬೀದಿಪಾಲು ಮಾಡಲು ಹೊರಟಿದ್ದಾರೆಂದು ಖಂಡಿಸಿದರು.
ಸಿನೆಮಾ ಜಗತ್ತಿನ ನಾಯಕರಿಗಿಂತಲೂ ಪ್ರಧಾನಿ ನರೇಂದ್ರ ಮೋದಿ ಶೋಕಿಲಾಲರಾಗಿದ್ದಾರೆ. ದಿನಕ್ಕೆ ಕನಿಷ್ಠ ಆರು ಬಾರಿ ತಮ್ಮ ಉಡುಪು ಗಳನ್ನು ಬದಲಾಯಿಸುತ್ತಾರೆ. ಇಂತಹ ವ್ಯಕ್ತಿತ್ವವನ್ನು ಹೊಂದಿರುವ ಮೋದಿ ಬಡವರ, ದೀನ ದಲಿತರ, ಕಾರ್ಮಿಕರ ಹಾಗೂ ಮಹಿಳೆ ಯರ ಬಗ್ಗೆ ಎಂದಿಗೂ ಚಿಂತಿಸಲು ಸಾಧ್ಯವಿಲ್ಲವೆಂದು ಅವರು ತಿಳಿಸಿದರು.
ವಿಮರ್ಶಕ ಡಾ.ರಹಮತ್ ತರೀಕೆರೆ ಮಾತನಾಡಿ, ದೇಶದಲ್ಲಿ ಪ್ರಗತಿಪರರ ಸರಣಿ ಕೊಲೆಗಳು ನಡೆಯುತ್ತಿವೆ. ದೇಶದ ಮೂಲ ಸಂಸ್ಕೃತಿಯಾದ ಬಹುತ್ವ ನಾಶ ಮಾಡಲು ಕೋಮುವಾದಿಗಳು ಹಂತ, ಹಂತವಾಗಿ ಪ್ರಯತ್ನಿಸುತ್ತಿವೆ. ಇವರ ಈ ದುಷ್ಕೃತ್ಯವನ್ನು ವಿಫಲಗೊಳಿ ಸಲು ಪ್ರಗತಿಪರರು ಒಂದಾಗಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಬರಗೂರು ರಾಮಚಂದ್ರಪ್ಪ, ಹಿರಿಯ ಚಿಂತಕ ಡಾ.ಸಿ.ರಾಮಕೃಷ್ಣ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ಈ ಬಗ್ಗೆ ಸಾಹಿತಿಗಳು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ. ಹೀಗಾಗಿ ಬಂಡಾಯ ಚಳವಳಿಯ ರೂವಾರಿ ಬರಗೂರು ರಾಮಚಂದ್ರಪ್ಪ ಬದಲಾದ ಕಾಲಘಟ್ಟದಲ್ಲಿ ಮತ್ತೊಮ್ಮೆ ಬಂಡಾಯ ಚಳವಳಿಯನ್ನು ಪುನರ್ ಆರಂಭಿಸಲಿ.
ಸೀತಾರಾಂ ಯೆಚೂರಿ,
ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ವಿಮೋಚನಾಕಾರರಾದ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಯನ್ನು ಬದಲಾದ ಸಂದರ್ಭಕ್ಕೆ ಅನುಗುಣವಾಗಿ ಇಂದಿನ ಯುವಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಬಸವಣ್ಣ ಲಿಂಗಾಯತ ಸಮುದಾಯ ಹಾಗೂ ಅಂಬೇಡ್ಕರ್ ದಲಿತ ಸಮುದಾಯದ ಬಂಧನದಲ್ಲಿದ್ದಾರೆ. ಇವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಸಾರ್ವತ್ರಿಕಗೊಳಿಸಬೇಕು ಹಾಗೂ ಅವರ ಚಿಂತನೆಗಳು ಪ್ರತಿಯೊಬ್ಬರ ಎದೆಯಲ್ಲೂ ಬಿತ್ತುವಂತಹ ಕೆಲಸವಾಗಬೇಕು.
ಡಾ.ರಹಮತ್ ತರೀಕೆರೆ, ಚಿಂತಕ