ಬಾಗಲಕೋಟೆ: ತಾಲ್ಲೂಕಿನ ಭಗವತಿ ಗ್ರಾಮದ ಬಳಿ ಬಾಗಲಕೋಟೆ– ಆಲಮಟ್ಟಿ ಮುಖ್ಯ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಾಟಾ–ಏಸ್ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 20 ದಿನಗಳ ಹಸುಗೂಸು ಸೇರಿದಂತೆ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಒಂಬತ್ತು ಜನರಿಗೆ ಗಾಯವಾಗಿರುವ ಘಟನೆ ಗುರುವಾರ ನಡೆದಿದೆ.
ಬಾಗಲಕೋಟೆ ತಾಲ್ಲೂಕಿನ ಭೈರಮಟ್ಟಿ ಗ್ರಾಮದ ಒಂದೇ ಕುಟುಂಬಕ್ಕೆ ಸೇರಿದ ಅತ್ತೆ ಯಲ್ಲವ್ವ ವಡ್ಡರಕಲ್(62), ಸೊಸೆ ಯಂಕವ್ವ ವಡ್ಡರಕಲ್ (25) ಮತ್ತು ಮೃತ ಯಂಕವ್ವಳ 20 ದಿನಗಳ ಹಸುಗೂಸು ಅಪ್ಪಣ್ಣ ವಡ್ಡರಕಲ್ ಮತ್ತು ಟಾಟಾ ಯೆಸ್ ವಾಹನದ ಚಾಲಕ ಮಂಜಪ್ಪ ಕಂಬಾರ (28), ರಾಮಣ್ಣ ಬಾಳಣ್ಣವರ (60) ಹಾಗೂ ಹಳ್ಳೂರು ಗ್ರಾಮದ ಪಾರ್ವತವ್ವ ಶಿಕ್ಕೇರಿ(65) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಒಂಬತ್ತು ಜನರನ್ನು ಬಾಗಲಕೋಟೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಿಂದ ಬಾಗಲಕೋಟೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬಾಗಲಕೋಟೆಯಿಂದ ಭೈರಮಟ್ಟಿಗೆ ತೆರಳುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಟಾಟಾ ಏಸ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಬಸ್ ರಸ್ತೆ ಪಕ್ಕಕ್ಕೆ ಉರುಳಿಬಿದ್ದಿದೆ. ಟಾಟಾ ಏಸ್ ಚಾಲಕನ ಅಜಾಗರೂಕತೆ ಮತ್ತು ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಚ್.ವೈ.ಮೇಟಿ, ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಖ್ಯಮಂತ್ರಿ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಎಸ್‌ಪಿ ವಿಠಲ ಜಗಲಿ, ಸಿಪಿಐ ಯು.ಬಿ.ಚಿಕ್ಕಮಠ, ಪಿಎಸ್‌ಐ ರಮೇಶ್ ಕಾಂಬಳೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಜಿಲ್ಲೆಯ ಲೋಕಾಪುರ ಬಳಿ ಸೆಪ್ಟೆಂಬರ್ 18 ರಂದು ಟಾಟಾ ಏಸ್ ಮತ್ತು ಡೀಸೆಲ್ ಟ್ಯಾಂಕರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಟಾಟಾ ಏಸ್‌ನಲ್ಲಿದ್ದ 13 ಜನ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ.
