ಕರ್ನಾಟಕ

ಮೋದಿ, ಮರ್ಕೆಲ್‌ ಮನಗೆದ್ದ 18ರ ಹುಡುಗಿ

Pinterest LinkedIn Tumblr

mooಬೆಂಗಳೂರು: ಬಾಷ್‌ ಕಂಪನಿಯ ತರಬೇತಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೋಬೋಟ್‌ ಪ್ರಾಜೆಕ್ಟ್ ಕುರಿತು ವಿವರಣೆ ನೀಡುವಾಗ ಬೆಂಗಳೂರಿನ ಇಂದಿರಾ ನಗರದ ಎನ್‌. ಮಮತಾ ಪುಳಕಿತಗೊಂಡರು.

ಐದು ನಿಮಿಷಗಳಲ್ಲೇ ಪ್ರಾಜೆಕ್ಟ್‌ನ ಪೂರ್ಣ ಮಾಹಿತಿ ನೀಡಿದ 18 ವರ್ಷದ ಮಮತಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನ್‌ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಮೆಚ್ಚುಗೆಗೂ ಪಾತ್ರರಾದರು.

ನಂತರ ಸುದ್ದಿಗಾರರ ಜತೆ ಸಂತಸ ಹಂಚಿಕೊಂಡ ಮಮತಾ, ಮೋದಿಯವರಿಗೆ ಪ್ರಾಜೆಕ್ಟ್ ಕುರಿತು ಮಾಹಿತಿ ನೀಡಿದ್ದು ಹೆಮ್ಮೆ ಎನಿಸುತ್ತಿದೆ. ನನಗೆ ಇದು ಅಮೂಲ್ಯ ಕ್ಷಣ, ಇಡೀ ಜೀವನ ನೆನಪಿನಲ್ಲಿಟ್ಟುಕೊಳ್ಳುವ ದಿನ ಎಂದು ಹೇಳಿದರು.

ಇಂತಹ ಅವಕಾಶವನ್ನು ನನಗೆ ಕೊಟ್ಟ ಬಾಷ್‌ ಕಂಪನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ಬರುತ್ತಾರೆ ಎಂದು ನಾವು ಪ್ರಾಜೆಕ್ಟ್ ಸಿದ್ಧಪಡಿಸಿಲ್ಲ, ನಾವು ಪ್ರಾಜೆಕ್ಟ್ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದ್ದಾಗ ಪ್ರಧಾನಿಗಳ ಆಗಮನವಾಗಿದೆ. ಈ ಬಗ್ಗೆ ನಮಗೂ ಮೊದಲೇ ಮಾಹಿತಿ ಇರಲಿಲ್ಲ ಎಂದು ತಿಳಿಸಿದರು.

ಮಮತಾ ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದು, ಮೆಕ್ಯಾನಿಕ್‌ ವಿಭಾಗದ ಕಿರಣ್‌, ನಿಖೀಲ್‌, ಸೈಯದ್‌ ಅವರ ಜತೆಗೂಡಿ ಮಾನವ ಸಂಪನ್ಮೂಲ ಕಡಿಮೆ ಮಾಡುವ ರೋಬೋಟ್‌ ಪ್ರಾಜೆಕ್ಟ್ ರೂಪಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿ ತೀವ್ರ ಆಸಕ್ತಿಯೊಂದಿಗೆ ಬಾಷ್‌ ಸಂಸ್ಥೆಯಲ್ಲಿ ಮೂರು ವರ್ಷದ ತರಬೇತಿ ಪಡೆಯಲು ಸೇರಿ ಒಂದೂವರೆ ವರ್ಷ ಪೂರ್ಣಗೊಳಿಸಿದ್ದಾರೆ.

ಜರ್ಮನಿ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌, ನಿನಗೆ ಈ ಪ್ರಾಜೆಕ್ಟ್‌ನಲ್ಲಿ ಸಹೋದ್ಯೋಗಿ ಯುವಕರು ಸಹಕಾರ ನೀಡುತ್ತಿದ್ದಾರೆಯೇ? ನಿಮ್ಮ ಕುಟುಂಬದವರು ನೀವು ತರಬೇತಿ ಪಡೆಯಲು ಒಪ್ಪಿಗೆ ಕೊಟ್ಟರಾ ಎಂದು ಪ್ರಶ್ನಿಸಿದರು.

ಎರಡೂ ಪ್ರಶ್ನೆಗಳಿಗೆ ಉತ್ತರಿಸಿದ ಮಮತಾ, ಸಹೋದ್ಯೋಗಿಗಳ ಸಂಪೂರ್ಣ ಸಹಕಾರ ಇದೆ. ನಾನೇ ಇಷ್ಟಪಟ್ಟು ಈ ತರಬೇತಿ ಪಡೆಯಲು ಬಂದಿದ್ದೇನೆ. ಮನೆಯವರೂ ಒಪ್ಪಿದ್ದಾರೆ ಎಂದು ತಿಳಿಸಿದರು.
-ಉದಯವಾಣಿ,

Write A Comment