ಬೆಂಗಳೂರು,ಅ.3: ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಕುರಿತ ತನಿಖೆಯ ನಿಧಾನಗತಿ ಯನ್ನು ಖಂಡಿಸಿ, 6ಯುವ ಲೇಖಕರು ಕನ್ನಡ ಸಾಹಿತ್ಯಪರಿಷತ್ 4 ವರ್ಷಗಳ ಹಿಂದೆ ತಮಗೆ ನೀಡಿದ್ದ ಅರಳುಪ್ರಶಸ್ತಿಯನ್ನು ಶನಿವಾರ ಹಿಂದಿರುಗಿಸಿದರು.
ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿಯವರು ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿ ಕೊಂಡರೂ ಅದನ್ನು ಒಪ್ಪದ ಈ ಲೇಖಕರು, ತಮಗೆ ಪ್ರದಾನ ಮಾಡಿದ್ದ ಪ್ರಶಸ್ತಿ ಫಲಕ ಮತ್ತು ತಲಾ 11 ಸಾವಿರ ರೂ.ನಗದು ಚೆಕ್‌ಗಳನ್ನು ವಾಪಸ್ ನೀಡಿದರು. ಹೀಗೆ ಪ್ರಶಸ್ತಿ ಹಿಂದಿರುಗಿಸಿದ ಯುವಲೇಖಕರೆಂದರೆ ಚಿದಾನಂದ ಸಾಲಿ, ಹನುಮಂತ ಹಾಲಿಗೇರಿ, ಟಿ. ಸತೀಶ್ ಜವರೇಗೌಡ, ಸಂಗಮೇಶ ಮೆಣಸಿನಕಾಯಿ, ವೀರಣ್ಣ ಮಡಿವಾಳರ ಮತ್ತು ಶ್ರೀದೇವಿ ವಿ.ಆಲೂರು. ಇವರೆಲ್ಲರೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯು ಕನ್ನಡ ಸಾಹಿತ್ಯ ಪರಿಷತ್‌ನ ಜೊತೆಗೂಡಿ ನೀಡುವ ‘ಅರಳು ಪ್ರಶಸ್ತಿ’ಗೆ 2011ನೆ ಸಾಲಿನಲ್ಲಿ ಭಾಜನರಾಗಿದ್ದರು.
ಇಷ್ಟೂ ಲೇಖಕರು ಕಲಬುರ್ಗಿ ಅವರ ಹತ್ಯೆ ಕುರಿತ ತನಿಖೆಯನ್ನು ಚುರುಕುಗೊಳಿಸಿ, ಹಂತಕರನ್ನು ಬಂಧಿಸ ಬೇಕೆಂದು ಸೆ.7ರಂದು ಸರಕಾರಕ್ಕೆ ಒಂದು ತಿಂಗಳ ಗಡುವು ಕೊಟ್ಟಿದ್ದರು. ತನಿಖೆಯಲ್ಲಿ ಪ್ರಗತಿ ಕಾಣದೆ ಹೋದರೆ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಶಸ್ತಿ ಹಿಂದಿರುಗಿಸುವುದಾಗಿ ಹೇಳಿದ್ದರು. ಕಲಬುರ್ಗಿ ಹತ್ಯೆ ಸಂಬಂಧದ ತನಿಖೆಯ ಕುರಿತು ಸರಕಾರ ತಾನು ವಹಿಸಬೇಕಾದಷ್ಟು ಮುತುವರ್ಜಿಯನ್ನು ವಹಿಸುತ್ತಿಲ್ಲ ಎನ್ನುವುದು ಇವರೆಲ್ಲರ ಅಭಿಪ್ರಾಯವಾಗಿದೆ.
ಶನಿವಾರ ಸಾಹಿತ್ಯ ಪರಿಷತ್‌ನಲ್ಲಿ ಇವರೆಲ್ಲರ ಪ್ರಶಸ್ತಿ ವಾಪಸಾತಿ ಕೂಡ ಅಂದುಕೊಂಡಷ್ಟು ಸುಲಭ ವಾಗಿಯೇನೂ ಆಗಲಿಲ್ಲ. ಪ್ರಶಸ್ತಿಯನ್ನು ವಾಪಸ್ ತೆಗೆದು ಕೊಳ್ಳುವುದಕ್ಕೂ ಮುನ್ನ ಮಾತನಾಡಿದ ಹಾಲಂಬಿ ಯವರು ಹಿರಿಯರಾದ ಚಂಪಾ ಅವರು ಪ್ರಶಸ್ತಿ ನಿರಾಕ ರಿಸಿರುವುದು ನಿಜ. ಅವರಿಗೆ ಈಗ ಪ್ರಶಸ್ತಿ, ಮಾನ- ಸನ್ಮಾನಗಳ ಆವಶ್ಯಕತೆಯೇನೂ ಇಲ್ಲ. ಪ್ರಶಸ್ತಿ ವಾಪಸ್ ಮಾಡಿದ ಅವರ ನಿಲುವನ್ನು ನಾನು ಒಪ್ಪುತ್ತೇನೆ. ಅರಳು ಪ್ರಶಸ್ತಿಯನ್ನು ಯುವಲೇಖಕರನ್ನು ಪ್ರೋತ್ಸಾಹಿಸಲೆಂದು ಕೊಡಲಾಗಿದೆ. ಕಲಬುರ್ಗಿಯವರ ಹತ್ಯೆ ವಿಷಯದಲ್ಲಿ ಪರಿಷತ್ ಯುವಲೇಖಕರ ಜೊತೆಗೇ ಇದೆ. ಆದರೆ ತನಿಖೆಯ ವಿಷಯದಲ್ಲಿ ಪರಿಷತ್ತೇ ನೇರವಾಗಿ ಏನನ್ನೂ ಮಾಡಲಾಗದು. ಆದುದರಿಂದ, ಪ್ರಶಸ್ತಿ ವಾಪಸ್ ಮಾಡುವ ಮೊದಲು ಯೋಚಿಸಿ, ಅದನ್ನು ಮರುಪರಿ ಶೀಲಿಸಿ ಎಂದು ಹದಿನೈದು ನಿಮಿಷ ಕಾಲಾವಕಾಶ ಕೊಟ್ಟರು. ಹಿರಿಯ ಲೇಖಕ ಚಂಪಾ ಅವರು ಇದೇ ಘಟನೆಗೆ ಸಂಬಂಧಿಸಿ ಸರಕಾರವು ತಮಗೆ ಕೊಟ್ಟಿದ್ದ ಪಂಪ ಪ್ರಶಸ್ತಿಯನ್ನು ಸರಕಾರಕ್ಕೆ ಹಿಂದಿರುಗಿಸಿದ್ದಾರೆ.
ಪರಿಷತ್‌ನ ಕುವೆಂಪು ಸಭಾಂಗಣದಲ್ಲಿ ಕೂತು ಪರಸ್ಪರ ಚರ್ಚಿಸಿದ ಯುವಲೇಖಕರು ಕೊನೆಗೂ ಸೆ.7ರ ತಮ್ಮ ನಿಲುವನ್ನು ಸಡಿಲಿಸಲಿಲ್ಲ. ಪ್ರಶಸ್ತಿ ಮತ್ತು ಅದ ರೊಂದಿಗೆ ಕೊಟ್ಟ ಚೆಕ್‌ಗಳನ್ನು ತೆಗೆದುಕೊಂಡ ಹಾಲಂಬಿ ಯವರು ನಂತರವೂ ‘‘ಇನ್ನೊಂದು ತಿಂಗಳಲ್ಲಿ ಕಲಬುರ್ಗಿ ಹತ್ಯೆ ತನಿಖೆ ಪ್ರಗತಿ ಕಂಡು, ತಪ್ಪಿತಸ್ಥರು ಸಿಕ್ಕಿಬೀಳಬಹುದು. ಹಾಗೇನಾದರೂ ಆದರೆ ಈ ಲೇಖಕರು ಪುನಹಾ ತಮ್ಮ ಪ್ರಶಸ್ತಿ ಮತ್ತು ನಗದನ್ನು ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ಈ ಪ್ರಶಸ್ತಿ ಮತ್ತು ಚೆಕ್‌ಗಳು ಕಸಾಪದ ಬೀರುನಲ್ಲಿಯೇ ಇರುತ್ತವೆ. ಇದರ ಜೊತೆಗೆ ಈ ಪ್ರಶಸ್ತಿಯನ್ನು ಸಾರಿಗೆ ನಿಗಮದವರು ನ ಮ್ಮಿಂದಿಗೆ ಸೇರಿ ಕೊಡುವುದರಿಂದ ಪರಿಷತ್ ಏಕಪಕ್ಷೀಯ ವಾಗಿ ತೀರ್ಮಾನ ತೆಗೆದುಕೊಳ್ಳಲು ಆಗು ವುದಿಲ್ಲ’’ ಎಂದುಮನವಿಯ ದಾಟಿಯಲ್ಲೇ ಹೇಳಿದರು.
2011ರಲ್ಲಿ ಈ ಲೇಖಕರಿಗೆ ಪ್ರಶಸ್ತಿ ಕೊಟ್ಟ ದಿನವೇ ಕಲಬುರ್ಗಿ ಅವರಿಗೆ ಅದೇ ವೇದಿಕೆಯಲ್ಲಿ ‘ನೃಪತುಂಗ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗಿತ್ತು. ಈ ಪ್ರಶಸ್ತಿ ಯನ್ನು ಕೂಡ ಕರಾರಸಾನಿ ಕನ್ನಡ ಕೇಂದ್ರ ಕ್ರಿಯಾ ಸಮಿತಿ ಯು ಪರಿಷತ್‌ನ ಜೊತೆಗೂಡಿ ಕೊಡುತ್ತದೆ.