ಬಂಟ್ವಾಳ, ಅ.3: ಬೆಳ್ತಂಗಡಿ ತಾಲೂಕಿನ ನೆರಿಯ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಎಎಸ್ಪಿನೇತೃತ್ವದ ತಂಡ ಆರೋಪಿಗೆ ಸಹಕಾರ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಹತ್ತಿರದ ಸಂಬಂಧಿಯೊಬ್ಬರನ್ನು ಬಂಧಿಸಿದೆ.
ಬಂಧಿತ ಆರೋಪಿಯನ್ನು ಪ್ರದೀಪ್(40) ಎಂದು ಗುರುತಿಸಲಾಗಿದೆ.
ಆರೋಪಿ ಪ್ರದೀಪ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗೋಪಾಲ ಗೌಡ ಹಾಗೂ ಚಾಲಕ ವಸಂತನಿಗೆ ತಲೆಮರೆಸಿಕೊಳ್ಳಲು ಸಹಕರಿಸಿರುವುದು ತನಿಖೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ ಎನ್ನಲಾಗಿದೆ. ಗೋಪಾಲ ಗೌಡನ ಸಹೋದರಿ ದಮಯಂತಿಯ ಮಗಳ ಗಂಡನಾಗಿರುವ ಪ್ರದೀಪ್, ಸುಂದರ ಮಲೆಕುಡಿಯರ ಕೈ ಕತ್ತರಿಸಿದ ಪ್ರಕರಣದ ನಂತರ ಗೋಪಾಲ ಗೌಡನನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಕಾರಿನಲ್ಲಿ ವಿವಿಧ ಊರುಗಳಿಗೆ ಸುತ್ತಾಡಿಸಿದ್ದ ಅಲ್ಲದೆ ಆರೋಪಿಗೆ ಆಶ್ರಯ ನೀಡಿದ್ದ. ಗೋಪಾಲ ಗೌಡ ವಿಚಾರಣೆ ವೇಳೆ ಈ ವಿಷಯವನ್ನು ತಿಳಿಸಿದ್ದು, ಅದರಂತೆ ಐಪಿಸಿ ಸೆಕ್ಷನ್ 212ರಂತೆ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣದ ಮತ್ತೋರ್ವ ಆರೋಪಿ ದಮಯಂತಿ(71)ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಬಂಧಿಸಲು ಸಾಧ್ಯವಾಗಿಲ್ಲ, ಇನ್ನೆರಡು ದಿನಗಳಲ್ಲಿ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪೂಂಜಾಲಕಟ್ಟೆಯ ಠಾಣಾಧಿಕಾರಿ ಲತೀಶ್ ಕುಮಾರ್, ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಪಾಲ್ಗೊಂಡಿದ್ದರು.