ಕರ್ನಾಟಕ

ಹುಬ್ಬಳ್ಳಿಗೆ ಐಐಟಿ ನೀಡಿರುವ ವಿಚಾರದಲ್ಲಿ ಪ್ರಾಮಾಣಿಕತೆ ಇಲ್ಲ: ಬಿಎಸ್‌ವೈ

Pinterest LinkedIn Tumblr

yadiರಾಯಚೂರು; ಸಾಲಬಾಧೆ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಎದುರಿಸಲಾಗದೆ ರಾಜ್ಯದಲ್ಲಿ 565ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಿರುವಾಗ ಸರ್ಕಾರ ರೈತರ ಸಮಸ್ಯೆ ಆಲಿಸದೆ ಕುಂಭಕರ್ಣ ನಿದ್ರೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಎರಡನೇ ಹಂತದ ಬಿಜೆಪಿ ರೈತ ಚೈತನ್ಯ ಯಾತ್ರೆಯಲ್ಲಿ ಪಾಲ್ಗೊಂಡು ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ರೈತರು ಸಾಲಬಾಧೆ, ಕಬ್ಬಿನ ಬಾಕಿ ಹಣ ವಾಪಾಸಾತಿ, ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಅಲ್ಲದೆ ಇಲ್ಲಿಯವರೆಗೂ ಸುಮಾರು 565ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ, ವಿದ್ಯುತ್ ಕೂಡ ನೀಡಲಾಗುತ್ತಿಲ್ಲ. ಇದರಿಂದ ಜನರು ಇತರೆ ಪ್ರದೇಶಗಳೆಡೆಗೆ ಗುಳೆ ಹೋಗುತ್ತಿದ್ದಾರೆ. ಆಧರೆ ಸರ್ಕಾರ ಮಾತ್ರ ಇದಾವುದರಕ್ಕೂ ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಎಂಬ ಅನುಮಾನ ಕಾಡುತ್ತಿದೆ. ಹಾಗಾಗಿ ಸರ್ಕಾರ ಕುಂಭಕರ್ಣ ನಿದ್ರೆ ಮಾಡುವುದನ್ನು ಬಿಟ್ಟು ಕೂಡಲೇ ರೈತರ ಸಮಸ್ಯೆ ಆಲಿಸಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ಒಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಪೈಕಿ 150 ಮಂದಿಗೂ ಕೂಡ ಸರ್ಕಾರ ಪರಿಹಾರ ಕೊಟ್ಟಿಲ್ಲ. ಸಿದ್ದರಾಮಯ್ಯ ಸರ್ಕಾರವು ವಾಸ್ತವತೆ ಮುಚ್ಚಿಡಲು ಕುತಂತ್ರ ನಡೆಸುತ್ತಿದೆ. ನಾನು ಸಿಎಂ ಆಗಿದ್ದಾಗ ಸಾಲ ಮನ್ನಾ ಮಾಡಿದ್ದೆ. ಅಂತೆಯೇ ಅವರೂ ಕೂಡ ಸಾಲ ಮನ್ನಾ ಮಾಡಲಿ. ಅಲ್ಲದೆ ವಿಶೇಷ ಅಧಿವೇಶನ ಕರೆದು ಪರಿಹಾರ ನೀಡಲಿ ಎಂದು ಆಗ್ರಹಿಸಿದರು.

ಬಳಿಕ, ವಿರೋಧ ಪಕ್ಷವಾದ ನಾವು ಸರ್ಕಾರ ಮಾಡದ ಕೆಲಸವನ್ನು ನಾವು ಮಾಡಲು ಯತ್ನಿಸುತ್ತಿದ್ದು, ರೈತ ಚೈತನ್ಯ ಯಾತ್ರೆಯನ್ನು ಆಯೋಜಿಸುವ ಮೂಲಕ ರೈತರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದೇವೆ. ಈಗಾಗಲೇ ಹಾವೇರಿಯಿಂದ ಮೈಸೂರಿನವರೆಗೆ ಹಮ್ಮಿಕೊಂಡಿದ್ದ ರೈತ ಚೈತನ್ಯ ಯಾತ್ರೆ ಈಗಾಗಲೇ ಯಶಸ್ವಿಯಾಗಿದೆ. ಪ್ರಸ್ತುತ ಎರಡನೇ ಹಂತದ ಯಾತ್ರೆಯನ್ನು ಬಳ್ಳಾರಿ ನಗರದಿಂದ ಆರಂಭಿಸಿದ್ದು, ರಾಯಚೂರಿನಲ್ಲಿದ್ದೇವೆ ಎಂದರು.

ಇನ್ನು ರಾಯಚೂರಿಗೆ ಐಐಟಿ ಕೈತಪ್ಪಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ನಂಜುಂಡಪ್ಪ ವರದಿ ಪ್ರಕಾರ ಐಐಟಿಯನ್ನು ರಾಯಚೂರಿಗೇ ಕೊಡಬೇಕಿತ್ತು. ನಮ್ಮ ಬಿಜೆಪಿ ಸರ್ಕಾರವಿದ್ದ ವೇಳೆಯಲ್ಲಿ ಜಗದೀಶ್ ಶೆಟ್ಟರ್ ಕೂಡ ಇದೇ ನಿರ್ಧಾರಕ್ಕೆ ಬಂದಿದ್ದರು. ಆದರೆ ಸರ್ಕಾರ ನಾಲ್ಕು ನಗರಗಳ ಹೆಸರನ್ನು ಸಿಫಾರಸು ಮಾಡುವ ಮೂಲಕ ಉದ್ದೇಶ ಪೂರ್ವಕವಾಗಿ ಐಐಟಿ ವಿಚಾರದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದೆ. ಹುಬ್ಬಳ್ಳಿಗೆ ಐಐಟಿ ನೀಡಿರುವ ವಿಚಾರದಲ್ಲಿ ಪ್ರಾಮಾಣಿಕತೆ ಇಲ್ಲ ಎಂದರು.

Write A Comment