ಬೆಂಗಳೂರು, ಅ. 2: ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಹಿಂದೂ-ಮುಸ್ಲಿಮ್ ಏಕತೆಗಾಗಿ ಹೋರಾಡಿದರು. ಈ ಕಾರಣ ಕ್ಕಾಗಿಯೇ ಅವರು ದುರುಳನೊಬ್ಬನ ಗುಂಡೇಟಿನಿಂದ ಪ್ರಾಣ ಕಳೆದುಕೊಳ್ಳಬೇಕಾಯಿತು. ಕೋಮು ದ್ವೇಷದ ಹೆಡೆ ಮತ್ತೆ ಬಿಚ್ಚ ಲಾರಂಭಿಸಿರುವ ಇಂದಿನ ದಿನಗಳಲ್ಲಿ ಗಾಂಧೀಜಿ ಚಿಂತನೆ ನಮ್ಮ ಒಳಗಣ್ಣು ತೆರೆಸಬೇಕು. ಕೋಮು ಸೌಹಾರ್ದವನ್ನು ಕಾಪಾಡಿಕೊಳ್ಳುವುದೇ ಅವರಿಗೆ ನಾವು ಅರ್ಪಿಸುವ ನಿಜವಾದ ಶ್ರದ್ಧಾಂಜಲಿ ಎಂದು ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ರಾಜ್ಯದ ಜನತೆ ಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಗ್ರಾಮ ಸ್ವರಾಜ್ಯ’ ಮಹಾತ್ಮ ಗಾಂಧಿ ಅವರ ಅಚ್ಚುಮೆಚ್ಚಿನ ಕಾರ್ಯಕ್ರಮ. ಪಂಚಾ ಯತ್ ರಾಜ್ ವ್ಯವಸ್ಥೆಯನ್ನು ಸಮಗ್ರ ಮತ್ತು ಸಮರ್ಥವಾಗಿ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ಅವರು ಹೇಳಿದರು.
ಅಸ್ಪಶ್ಯತಾ ನಿವಾರಣೆ, ರೈತರ ಏಳಿಗೆ, ಖಾದಿ ಮತ್ತು ಗ್ರಾಮೋ ದ್ಯೋಗ, ಕಾರ್ಮಿಕರ ಕಲ್ಯಾಣ, ಮಹಿಳೆಯರ ರಕ್ಷಣೆ, ಗ್ರಾಮ ಸ್ವಚ್ಛತೆ, ಆರ್ಥಿಕ ಸಮಾನತೆ, ಸಾರ್ವಜನಿಕ ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ‘ರಾಷ್ಟ್ರಪಿತ’ ಮಹಾತ್ಮ ಗಾಂಧೀಜಿ ಹೊಂದಿದ್ದ ವಿಚಾರಧಾರೆಗಳು ನಮ್ಮ ಸರಕಾರದ ಪಾಲಿಗೆ ಮಾರ್ಗದರ್ಶಿ ಸೂತ್ರಗಳು ಆಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗ್ರಾಮಗಳ ವಿಕಾಸಕ್ಕಾಗಿ 21 ಅಂಶಗಳ ಹೊಸ ಕಾರ್ಯಕ್ರಮ ಗಳನ್ನು ರೂಪಿಸಿದ್ದೇವೆ. ಗ್ರಾಮ ನೈರ್ಮಲ್ಯದ ವಿಷಯದಲ್ಲಿ ಇಡೀರಾಷ್ಟ್ರಕ್ಕೆ ಮಾದರಿಯಾಗಿದ್ದು, ವೈಯಕ್ತಿಕ ಶೌಚಾಲಯಗಳ ನಿರ್ಮಾಣದಲ್ಲಿ ಇಡೀ ರಾಷ್ಟ್ರದಲ್ಲಿಯೆ ನಾವು ಪ್ರಥಮ ಸ್ಥಾನದ ಲ್ಲಿದ್ದೇವೆ. ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರನ್ನು ಅತ್ಯಲ್ಪದರದಲ್ಲಿ ಗ್ರಾಮೀಣ ಜನರಿಗೆ ಒದಗಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
‘ಹಸಿದವನಿಗೆ ಭಗವಂತನು ಕೇವಲ ರೊಟ್ಟಿ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ’, ಬಡವರಿಗೆ ಆರ್ಥಿಕತೆಯೆ ಆಧ್ಯಾತ್ಮಿಕತೆ ಎಂದು ಗಾಂಧೀಜಿ ಹೇಳಿದ್ದರು. ಕಡು ಬಡವರು ಅನ್ನಕ್ಕಾಗಿ ಯಾರ ಬಳಿಯೂ ಕೈ ಚಾಚದೆ ಸ್ವಾಭಿಮಾನದಿಂದ ಬದುಕಬೇಕು ಎನ್ನುವ ಆಶಯದಿಂದ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೊಳಿಸಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು. ಅಸ್ಪಶ್ಯತಾ ನಿವಾರಣೆ, ಜಾತಿ ವ್ಯವಸ್ಥೆಯ ವಿರುದ್ಧದ ಹೋರಾ ಟದಲ್ಲಿ ಕರ್ನಾಟಕಕ್ಕೆ ದೀರ್ಘ ಪರಂಪರೆಯಿದೆ. ಅಸ್ಪಶ್ಯತೆ ಎನ್ನುವುದು ಕೇವಲ ಕಾನೂನಿನ ಮೂಲಕ ನಿವಾರಣೆಯಾಗು ವಂತಹ ಪಿಡುಗಲ್ಲ. ಅಸ್ಪಶ್ಯ ಸಮುದಾಯವನ್ನು ಶೈಕ್ಷಣಿಕವಾಗಿ ಸದೃಢರನ್ನಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಅಗತ್ಯ. ನಮ್ಮ ಸರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಒಳಿತನ್ನೇ ಕೇಂದ್ರೀಕರಿಸಿ ಆಡಳಿತ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಸಮುದಾಯದ ಜನರಿಗಾಗಿ ಮೀಸಲಿಟ್ಟಿರುವ ಅನುದಾನವು ಸಂಪೂರ್ಣವಾಗಿ ಆಯಾ ವರ್ಷದಲ್ಲಿಯೆ ವಿನಿಯೋಗಿಸಲು ವಿಶೇಷ ಕಾಯ್ದೆಯನ್ನೇ ಜಾರಿಗೆ ತರಲಾಗಿದೆ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ವಿತರಣೆ, ರೈತರ ಬೆಳೆಗೆ ಯೋಗ್ಯಬೆಲೆ, ಸಾವಯವ ಕೃಷಿಗೆ ಉತ್ತೇಜನ, ಕೃಷಿ ಯಾಂತ್ರೀಕರಣಕ್ಕೆ ನೆರವು ನೀಡಲಾಗುತ್ತಿದೆ. ಮಳೆ ಆಶ್ರೀತ ರೈತರಿಗಾಗಿಯೆ ಕೃಷಿ ಭಾಗ್ಯ ಎಂಬ ವಿಶೇಷ ಯೋಜನೆಯನ್ನು ರೂಪಿಸಿ, 500 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿರುವ ಪ್ರತಿಯೊಂದು ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿದ್ದೇವೆ. ಈ ಸಮೀಕ್ಷೆಯಿಂದ ದೊರೆಯುವ ಮಾಹಿತಿಯನ್ನು ಆಧರಿಸಿ ಹಿಂದುಳಿದ ಜನ ಸಮುದಾಯಗಳ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಲಿದ್ದೇವೆ ಎಂದು ಅವರು ಅವರು ತಿಳಿಸಿದರು. ಮಳೆಯರಿಗೆ ಸರಕಾರಿ ಉದ್ಯೋಗಗಳಲ್ಲಿ ಶೇ.35ರಷ್ಟು ಮೀಸಲಾತಿ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ರಾಜಕೀ ಯ ಮೀಸಲಾತಿ ಕಲ್ಪಿಸಲಾಗಿದೆ. ಮಹಿಳೆಯರನ್ನು ಸಂಘಟಿಸಿ ಅವರಿಗೆ ಆರ್ಥಿಕ ಚೈತನ್ಯ ತುಂಬಲು ರಾಜ್ಯದಲ್ಲಿ ಆರಂಭಿಸಿದ ‘ಸ್ತ್ರೀ ಶಕ್ತಿ’ ಯೋಜನೆ ಈಗ ಒಂದು ಬೃಹತ್ ಆಂದೋಲನವಾಗಿ ಬೆಳೆದು ನಿಂತಿದೆ. ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಲು ಹೆಣ್ಣು ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸಲಾಗುತ್ತಿದೆ. ಅಂಗನ ವಾಡಿ ಕೇಂದ್ರಗಳಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ಮತ್ತು ಕಲಿಯುತ್ತಿರುವ ಒಂದು ಕೋಟಿಗೂ ಹೆಚ್ಚು ಶಾಲಾಮಕ್ಕಳಿಗೆ ವಾರದಲ್ಲಿ ಮೂರು ದಿನ ಉಚಿತವಾಗಿ ಬಿಸಿಹಾಲು ನೀಡಿ ಮಕ್ಕಳಲ್ಲಿನ ಪೌಷ್ಟಿಕತೆಯ ಪ್ರಮಾಣವನ್ನು ವೃದ್ಧಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಗಾಂಧೀಜಿ ಅವರ ಚಿಂತನೆಗಳ ಹಾದಿಯಲ್ಲಿ ನಡೆಯುತ್ತಿರುವ, ದುಡಿಯುತ್ತಿರುವ ಹಿರಿಯ ಚೇತನಗಳನ್ನು ಗುರುತಿಸಿ ಐದು ಲಕ್ಷ ರೂ.ನಗದು ಒಳಗೊಂಡ ‘ಕರ್ನಾಟಕ ಗಾಂಧೀ ಸೇವಾ ಪ್ರಶಸ್ತಿ’ ನೀಡಲಾಗುತ್ತಿದೆ. ಶಾಲಾ ಮಕ್ಕಳಲ್ಲಿ ಮತ್ತು ಯುವ ಜನರಲ್ಲಿ ಗಾಂಧೀಜಿ ಅವರ ಜೀವನ ಮೌಲ್ಯಗಳನ್ನು ಬಿತ್ತಿ ಉತ್ತಮ ಸಮಾಜ ಸೃಷ್ಠಿಸಲು ನಮ್ಮ ಸರಕಾರ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಮೂರು ಕಿವಿ ಮಾತುಗಳನ್ನು ಹೇಳಿದ್ದರು. ಹಳ್ಳಿಗಳನ್ನು ಮರೆಯಬೇಡಿ, ಖಾದಿಯನ್ನು ಕೈ ಬಿಡಬೇಡಿ, ಕೋಮು ಸೌಹಾರ್ದವನ್ನು ಕಾಪಾಡಿಕೊಳ್ಳಿ ಎಂಬುದು ಗಾಂಧೀಜಿ ಅವರ ಹಿತ ನುಡಿಗಳಾಗಿದ್ದವು.
ಸಿದ್ದರಾಮಯ್ಯ, ಮುಖ್ಯಮಂತ್ರಿ