ನ್ಯೂಯಾರ್ಕ್, ಅ. 2: ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಬುಧವಾರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿ ದಾಳಿ ನಡೆಸಿದರು. ಪಾಕಿಸ್ತಾನ ಭಯೋತ್ಪಾದಕ ದೇಶ ಎಂದು ಬಣ್ಣಿಸಿದ ಅವರು, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಶಾಂತಿ ಮಾತುಕತೆಗಳು ಆರಂಭವಾಗಬೇಕಾದರೆ ಅದು ಭಯೋತ್ಪಾದಕ ದಾಳಿಗಳನ್ನು ನಿಲ್ಲಿಸಬೇಕು ಎಂದು ಹೇಳಿದರು.
ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಬುಧವಾರ ಮಾಡಿದ ಭಾಷಣಕ್ಕೆ ಸುಶ್ಮಾ ತನ್ನ ಭಾಷಣದಲ್ಲಿ ತಿರುಗೇಟು ನೀಡಿದರು. ಶರೀಫ್ ತನ್ನ ಭಾಷಣದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದರು ಹಾಗೂ ತನ್ನ ನಾಲ್ಕು ಅಂಶಗಳ ‘‘ಶಾಂತಿ ಉಪಕ್ರಮ’’ದ ಪ್ರಸ್ತಾಪವನ್ನು ಮುಂದಿಟ್ಟಿದ್ದರು.
‘‘ನಾವು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಬೆದರಿಕೆ ಭಯೋತ್ಪಾದನೆಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದರ ಮೇಲೆ ಅಂತಾರಾಷ್ಟ್ರೀಯ ಸಮುದಾಯದ ಭವಿಷ್ಯ ನಿಂತಿದೆ. ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳು ಅದಕ್ಕೆ ಭಾರೀ ಪ್ರಮಾಣದ ಬೆಲೆ ತೆರುವಂತೆ ಮಾಡಬೇಕಾಗಿದೆ’’ ಎಂದು ಸುಶ್ಮಾ ನುಡಿದರು. ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರರು ಪಾಕಿಸ್ತಾನದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದರು. ‘‘ಹೊಸದಾಗಿ ದಾಳಿಗಳು ನಡೆಯುತ್ತಿವೆ. ಇತ್ತೀಚೆಗೆ ನಾವು ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಜೀವಂತವಾಗಿ ಹಿಡಿದಿದ್ದೇವೆ’’ ಎಂದು ವಿದೇಶಾಂಗ ಸಚಿವೆ ಹೇಳಿದರು.
‘‘ಭಾರತವನ್ನು ಅಸ್ಥಿರಗೊಳಿಸಲು ಹಾಗೂ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳ ಅಕ್ರಮ ಒತ್ತುವರಿಯನ್ನು ಕಾನೂನುಬದ್ಧಗೊಳಿಸಲು ಭಯೋತ್ಪಾದಕ ದಾಳಿಗಳನ್ನು ನಡೆಸಲಾಗುತ್ತಿದೆ’’ ಎಂದರು.
ಬಿಕ್ಕಟ್ಟುಗಳನ್ನು ನಿಭಾಯಿಸಲು ವಿಶ್ವಸಂಸ್ಥೆ ವಿಫಲ ಭದ್ರತಾ ಮಂಡಳಿಯ ಸುಧಾರಣೆ ತಕ್ಷಣದ ಅಗತ್ಯ: ಸುಶ್ಮಾ ಸ್ವರಾಜ್
ವಿಶ್ವಸಂಸ್ಥೆ, ಅ. 2: ಜಗತ್ತಿನಲ್ಲಿ ನಡೆಯುತ್ತಿರುವ ಹಲವು ಬಿಕ್ಕಟ್ಟುಗಳನ್ನು ನಿಭಾಯಿಸುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಗುರುವಾರ ಹೇಳಿದ್ದಾರೆ.
ಅವರು ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕೆಲವು ಪ್ರಕರಣಗಳಲ್ಲಿ ವಿಶ್ವಸಂಸ್ಥೆ ಯಶಸ್ಸು ಗಳಿಸಿರುವುದನ್ನು ಒಪ್ಪಿಕೊಂಡ ಅವರು, ಇನ್ನು ಹಲವು ಪ್ರಕರಣಗಳಲ್ಲಿ ವಿಶ್ವಸಂಸ್ಥೆಯನ್ನು ಟೀಕಿಸಿದರು.
‘‘ಮೂರನೆ ಮಹಾಯುದ್ಧವನ್ನು ತಡೆಯುವಲ್ಲಿ, ವಸಾಹತುಶಾಹಿ ನಿರ್ಮೂಲನೆಗೆ ನೆರವು ನೀಡುವಲ್ಲಿ, ವರ್ಣಭೇದ ವ್ಯವಸ್ಥೆಯನ್ನು ಹೋಗಲಾಡಿಸುವುದರಲ್ಲಿ, ಜಾಗತಿಕ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಟ ನಡೆಸುವುದರಲ್ಲಿ, ಜಾಗತಿಕ ಹಸಿವನ್ನು ಕಡಿಮೆ ಮಾಡುವುದರಲ್ಲಿ ಹಾಗೂ ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳನ್ನು ಬೆಂಬಲಿಸುವಲ್ಲಿ ವಿಶ್ವಸಂಸ್ಥೆ ಯಶಸ್ವಿಯಾಗಿದೆ’’ ಎಂದು ಸುಶ್ಮಾ ನುಡಿದರು.
ಬಳಿಕ, ವಿಶ್ವಸಂಸ್ಥೆಗೆ ಸಾಧಿಸಲು ಸಾಧ್ಯವಾಗದ ಸಂಗತಿಗಳನ್ನು ಪಟ್ಟಿಮಾಡಿದರು.
‘‘ಪ್ರಪಂಚದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ತಡೆಯಲು ನಮಗೆ ಸಾಧ್ಯವಾಗಿದೆಯೇ ಎಂದು ನಾವು ಕೇಳಿದರೆ, ಅದಕ್ಕೆ ಉತ್ತರ ಇಲ್ಲ. ಹಿಂಸಾ ಮಾರ್ಗದಲ್ಲಿ ಸಾಗುತ್ತಿರುವ ಜಗತ್ತಿಗೆ ಶಾಂತಿಯ ಮಾರ್ಗವನ್ನು ತೋರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆಯೇ ಎಂದು ನಾವು ಕೇಳಿದರೆ, ಅದಕ್ಕೆ ಉತ್ತರ ಇಲ್ಲ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಹೇಳಿದರು.
‘‘ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಎದುರಾಗಿರುವ ನೂತನ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಅದು ವಿಫಲವಾಗಿದೆ’’ ಎಂದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನವೊಂದನ್ನು ಪಡೆಯುವ ಭಾರತದ ನಿರೀಕ್ಷೆಯನ್ನು ಪುನರುಚ್ಚರಿಸಿದ ಸುಶ್ಮಾ, ವಿಶ್ವಸಂಸ್ಥೆಯ ಸುಧಾರಣೆಗೆ ಇದು ಸಕಾಲ ಎಂದರು.
‘‘ಜಾಗತಿಕ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯ ಪಾಲಕ ಎಂಬ ವಿಶ್ವಸಂಸ್ಥೆಯ ಅಭಿದಾನವನ್ನು ನಾವು ಪೋಷಿಸಿಕೊಂಡು ಬರಬೇಕಾದರೆ, ಭದ್ರತಾ ಮಂಡಳಿಯ ಸುಧಾರಣೆ ಅತ್ಯಂತ ತುರ್ತಾಗಿ ಮತ್ತು ಪ್ರಮುಖವಾಗಿ ಆಗಬೇಕಾದ ಕೆಲಸವಾಗಿದೆ. ಈಗಲೂ 1945ರ ಭೌಗೋಳಿಕ ಹಾಗೂ ಆರ್ಥಿಕ ರಚನೆಯನ್ನು ಬಿಂಬಿಸುವ ಭದ್ರತಾ ಮಂಡಳಿಯೊಂದನ್ನು 2015ರಲ್ಲಿ ನಾವು ಹೇಗೆ ಒಪ್ಪಲು ಸಾಧ್ಯ? ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕಗಳಿಗೆ ಈಗಲೂ ಖಾಯಂ ಸದಸ್ಯ ಸ್ಥಾನಗಳನ್ನು ನೀಡದಿರುವ ಭದ್ರತಾ ಮಂಡಳಿ ಯೊಂದನ್ನು ನಾವು ಹೇಗೆ ಹೊಂದಲು ಸಾಧ್ಯ?’’ ಎಂದು ಸುಶ್ಮಾ ಸ್ವರಾಜ್ ಪ್ರಶ್ನಿಸಿದರು.