ಅಂತರಾಷ್ಟ್ರೀಯ

ಅಮೆರಿಕದ ಕಾಲೇಜಿನಲ್ಲಿ ಗುಂಡು ಹಾರಾಟ: 10 ಸಾವು

Pinterest LinkedIn Tumblr

123___________________________________________________ರೋಸ್‌ಬರ್ಗ್, ಅ. 2: ಅಮೆರಿಕದ ಒರೆಗಾನ್ ರಾಜ್ಯದ ರೋಸ್‌ಬರ್ಗ್‌ನಲ್ಲಿರುವ ಸಮುದಾಯ ಕಾಲೇಜೊಂದರ ಆವರಣದಲ್ಲಿ ಬಂದೂಕುಧಾರಿಯೊಬ್ಬ ಗುರುವಾರ ಮನಬಂದಂತೆ ನಡೆಸಿದ ಗುಂಡಿನ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಹಾಗೂ 7 ಮಂದಿ ಗಾಯಗೊಂಡಿದ್ದಾರೆ.

ಬಂದೂಕು ಪರವಾನಿಗೆ ಕಾನೂನನ್ನು ಬಿಗಿಗೊಳಿಸಬೇಕೆ ಎಂಬ ಬಗ್ಗೆ ಅಮೆರಿಕದಲ್ಲಿ ಇನ್ನೊಂದು ಸುತ್ತಿನ ಕಾವೇರಿದ ಚರ್ಚೆಗೆ ಈ ಘಟನೆ ನಾಂದಿ ಹಾಡಿದೆ.

ಕಾಲೇಜ್‌ನ ಹ್ಯುಮೇನಿಟೀಸ್ ಕಟ್ಟಡದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಭಾಷಣ ಕಲೆ ತರಗತಿಯಲ್ಲಿ ಹತ್ಯಾಕಾಂಡ ನಡೆಯಿತು. ಗುಂಡಿನ ಸದ್ದು ಕೇಳುತ್ತಲೇ ಜನರು ದಿಕ್ಕಾಪಾಲಾಗಿ ಓಡಿದರು.

ಅಂತಿಮವಾಗಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 26 ವರ್ಷದ ದಾಳಿಕೋರನೂ ಮೃತಪಟ್ಟನು.
ಪತ್ರಿಕಾಗೋಷ್ಠಿಯಲ್ಲಿ ಘಟನೆಯ ಮಾಹಿತಿ ನೀಡಿದ ಡಗ್ಲಾಸ್ ಕೌಂಟಿಯ ಶರೀಫ್ ಜಾನ್ ಹ್ಯಾನ್ಲಿನ್, ಹತ್ಯಾಕಾಂಡದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು. ಆದರೆ, ಇದರಲ್ಲಿ ಬಂದೂಕುಧಾರಿಯೂ ಸೇರಿದ್ದಾನೆಯೇ ಎಂಬುದನ್ನು ತಿಳಿಸಲು ಅವರು ನಿರಾಕರಿಸಿದರು.

ದುಷ್ಕರ್ಮಿಯನ್ನು ಕ್ರಿಸ್ ಹಾರ್ಪರ್ ಮರ್ಸರ್ ಎಂಬುದಾಗಿ ಪೊಲೀಸರು ಗುರುತಿಸಿದ್ದಾರೆ. ಆತನ ಬಳಿ ಮೂರು ಶಸ್ತ್ರಗಳಿದ್ದವು ಎಂದು ಪೊಲೀಸರು ತಿಳಿಸಿದರು. ಆತ ರೋಸ್‌ಬರ್ಗ್‌ನ ನಿವಾಸಿಯಾಗಿದ್ದನು ಎಂದರು.

ದುಷ್ಕರ್ಮಿಯು ಗುಂಡು ಹಾರಿಸುವ ಮೊದಲು ಜನರ ಧರ್ಮ ಯಾವುದೆಂದು ಕೇಳುತ್ತಿದ್ದನು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘‘ಆತ ದ್ವೇಷ ಭಾವನೆಯನ್ನು ತುಂಬಿಕೊಂಡಿದ್ದ ಆಕ್ರೋಶಿತ ಯುವಕನಂತೆ ಕಂಡುಬರುತ್ತಿದ್ದನು’’ ಎಂದು ಓರ್ವ ಪೊಲೀಸ್ ಅಧಿಕಾರಿ ಹೇಳಿದರು.

ಶಾಲೆ ಮತ್ತು ಕಾಲೇಜುಗಳಲ್ಲಿ ನಡೆಯುವ ಸಾಮೂಹಿಕ ಹತ್ಯಾಕಾಂಡದ ರಕ್ತಸಿಕ್ತ ಇತಿಹಾಸವನ್ನೇ ಅಮೆರಿಕ ಹೊಂದಿದೆ. 1999ರಲ್ಲಿ ಕೊಲಂಬೈನ್ ಹೈಸ್ಕೂಲ್‌ನಲ್ಲಿ ನಡೆದ ಹತ್ಯಾಕಾಂಡದಿಂದ ಹಿಡಿದು 2007ರಲ್ಲಿ ನಡೆದ ವರ್ಜೀನಿಯ ಟೆಕ್ ಹತ್ಯಾಕಾಂಡ ಮತ್ತು 2012ರಲ್ಲಿ ಕನೆಕ್ಟಿಕಟ್‌ನ ನ್ಯೂಟೌನ್‌ನ ಸ್ಯಾಂಡಿ ಹುಕ್ ಪ್ರಾಥಮಿಕ ಶಾಲೆಯಲ್ಲಿ ನಡೆದ 20 ಮಕ್ಕಳ ಹತ್ಯಾಕಾಂಡದವರೆಗೆ ಈ ಪಟ್ಟಿ ಉದ್ದವಿದೆ.

ಕ್ರೈಸ್ತರನ್ನು ಗುರಿಯಾಗಿಸಿದ್ದನು: ವಿದ್ಯಾರ್ಥಿನಿಯ ತಂದೆ
ಬಂದೂಕುಧಾರಿಯು ಉದ್ದೇಶಪೂರ್ವಕವಾಗಿ ಕ್ರೈಸ್ತ ವಿದ್ಯಾರ್ಥಿಗಳನ್ನು ಗುರಿಯಾಗಿಸಿದ್ದನು ಎಂದು ಗುಂಡು ಹಾರಾಟದಲ್ಲಿ ಗಾಯಗೊಂಡ 18 ವರ್ಷದ ವಿದ್ಯಾರ್ಥಿನಿಯೊಬ್ಬರ ತಂದೆ ಹೇಳಿದ್ದಾರೆ.
ದುಷ್ಕರ್ಮಿ ಕ್ರಿಸ್ ಹಾರ್ಪರ್-ಮರ್ಸರ್, ಅನಾಸ್ತೇಶಿಯಾ ಬಾಯ್ಲಿನ್‌ರ ಬೆನ್ನಿಗೆ ಗುಂಡು ಹಾರಿಸಿದನು. ಗುಂಡು ಆಕೆಯ ಬೆನ್ನೆಲುಬಿಗೆ ಕಂತಿದೆ. ಆಕೆಯ ಬೆನ್ನ ಮೇಲೆ ನಿಂತ ಹಾರ್ಪರ್, ‘‘ಏ… ನೀನು, ಚಿನ್ನದ ಬಣ್ಣದ ಕೂದಲಿನ ಮಹಿಳೆ’’ ಎಂದು ಜರೆದನು. ಆಕೆ ಸತ್ತಂತೆ ನಟಿಸಿದರು ಹಾಗೂ ಈಗ ಬೆನ್ನೆಲುಬಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ.
ತರಗತಿಯೊಳಗೆ ಪ್ರವೇಶಿಸಿದ ಬಂದೂಕುಧಾರಿ ವಿದ್ಯಾರ್ಥಿಗಳಿಗೆ ಎದ್ದು ನಿಲ್ಲುವಂತೆ ಸೂಚಿಸಿದನು ಹಾಗೂ ನೀವು ಕ್ರೈಸ್ತರೇ ಎಂದು ಕೇಳಿದನು ಎಂದು ಆ ವಿದ್ಯಾರ್ಥಿನಿ ತಂದೆಯ ಬಳಿ ಹೇಳಿಕೊಂಡಿದ್ದಾರೆ.
‘‘ಅವರು ಎದ್ದು ನಿಂತರು. ಆಗ ಬಂದೂಕುಧಾರಿ ಹೇಳಿದ, ‘ಒಳ್ಳೆಯದು, ಯಾಕೆಂದರೆ ನೀವು ಕ್ರೈಸ್ತರು. ನೀವು ಕೇವಲ ಒಂದು ಸೆಕಂಡ್‌ನಲ್ಲಿ ದೇವರನ್ನು ನೋಡುತ್ತೀರಿ’ ಎಂದು ಒದರಿದನು’’ ಎಂದು ವಿದ್ಯಾರ್ಥಿನಿಯ ತಂದೆ ಹೇಳಿದರು.
ಬಳಿಕ ಆತ ವಿದ್ಯಾರ್ಥಿಗಳ ಮೇಲೆ ಮನ ಬಂದಂತೆ ಗುಂಡು ಹಾರಿಸಿದನು ಎಂದರು.

ಬಂದೂಕು ನಿಯಂತ್ರಣದ ಅಗತ್ಯ: ಒಬಾಮ
ರೋಸ್‌ಬರ್ಗ್, ಅ. 2: ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಾಮೂಹಿಕ ಹತ್ಯಾಕಾಂಡ ‘‘ನಿಯಮಿತ’’ವೆಂಬಂತೆ ನಡೆಯುತ್ತಿದ್ದು, ಬಂದೂಕು ನಿಯಂತ್ರಣದ ಅಗತ್ಯವಿದೆ ಎಂಬುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಪ್ರತಿಪಾದಿಸಿದ್ದಾರೆ.
‘‘ಇಂಥ ಘಟನೆಗಳು ಮಾಮೂಲಿಯೆಂಬಂತೆ ನಡೆಯುತ್ತಿವೆ’’ ಎಂದು ಹೇಳಿದ ಒಬಾಮ, ಇಂಥ ಘಟನೆಗಳನ್ನು ತಡೆಯುವಲ್ಲಿ ಕಾಂಗ್ರೆಸ್‌ನ ವೈಫಲ್ಯವನ್ನು ಟೀಕಿಸಿದರು.
‘‘ನಾವು ದಿಗ್ಮೂಢರಾಗಿದ್ದೇವೆ. ಇತರರನ್ನು ಕೊಲ್ಲಲು ಬಯಸುವ ಒಬ್ಬ ವ್ಯಕ್ತಿಗೆ ಇಷ್ಟು ಸುಲಭವಾಗಿ ಬಂದೂಕುಗಳು ಕೈಗೆ ಸಿಗಬಾರದು’’ ಎಂದರು.
‘‘ಪ್ರಾರ್ಥನೆಗಳು ಸಾಕಾಗುವುದಿಲ್ಲ. ನಾವು ಈ ನಿಟ್ಟಿನಲ್ಲಿ ಏನನ್ನಾದರೂ ಮಾಡಬೇಕು. ನಮ್ಮ ಕಾನೂನಿನಲ್ಲಿ ಬದಲಾವಣೆಯಾಗಬೇಕು’’ ಎಂದು ಅಮೆರಿಕದ ಅಧ್ಯಕ್ಷರು ಹೇಳಿದರು.

Write A Comment